
ಬೆಂಗಳೂರು(ಡಿ.13): 4ನೇ ಆವೃತ್ತಿಯ ಕನ್ನಡ ಚಲನಚಿತ್ರ ಕಪ್(ಕೆಸಿಸಿ) ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಇದೇ ಡಿಸೆಂಬರ್ 23,24 & 25ರಂದು ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಟೂರ್ನಿ ನಡೆಯಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ರಾಬಿನ್ ಉತ್ತಪ್ಪ ತಮಗೆ ಎಚ್ಚರಿಕೆ ನೀಡಿರುವುದಾಗಿ ಕಿಚ್ಚ ಸುದೀಪ್ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಈ ಬಾರಿಯ ಕೆಸಿಸಿ ಟೂರ್ನಿಯಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಕನ್ನಡಿಗ ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಮುರಳಿ ವಿಜಯ್, ತಿಲಕರತ್ನೆ ದಿಲ್ಷ್ಯಾನ್, ಹರ್ಷಲ್ ಗಿಬ್ಸ್ ಹಾಗೂ ಎಸ್ ಬದ್ರಿನಾಥ್ ಪಾಲ್ಗೊಳ್ಳುತ್ತಿದ್ದಾರೆ. ಈ ಟೂರ್ನಿಯ ಕುರಿತಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ ಸುದೀಪ್, ರಾಬಿನ್ ಉತ್ತಪ್ಪ ತಮಗೆ ವಾರ್ನಿಂಗ್ ನೀಡಿದ್ದಾಗಿ ಹೇಳಿದ್ದಾರೆ. "ನಾನು ಸದ್ಯ ಒಳ್ಳೆಯ ಫಾರ್ಮ್‌ನಲ್ಲಿದ್ದೇನೆ, ಚೆನ್ನಾಗಿ ಬಾರಿಸ್ತೀನಿ" ಎಂದು ಉತ್ತಪ್ಪ ತಮಗೆ ಹೇಳಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಈ ಬಾರಿ ಕೆಸಿಸಿಯಲ್ಲಿ ವಿಭಿನ್ನವಾಗಿ ಪ್ಲಾನ್ ಮಾಡಿಕೊಂಡಿದ್ದೇವೆ. ಕಳೆದ ಬಾರಿ ಕನ್ನಡ ಬಾವುಟ ಹಾರಿಸಿದ್ದೆವು. ಈ ಬಾರಿ ಕೂಡಾ ಕನ್ನಡ ನಾಡಿನ ಕುರಿತಾಗಿ ವಿಶೇಷ ಟ್ರಿಬ್ಯೂಟ್ ಮಾಡುತ್ತಿದ್ದೇವೆ. ಟಿಕೆಟ್ ಬುಕ್ಕಿಂಗ್ ಕೂಡಾ ಎಲ್ಲಾ ಕಡೆ ಜೋರಾಗಿ ನಡೆಯುತ್ತಿದೆ ಎಂದು ಸುದೀಪ್ ಹೇಳಿದರು.
ಇನ್ಮುಂದೆ ಭಾರತದಲ್ಲಿ ನಡೆಯೊಲ್ಲ ಪಿಂಕ್ ಬಾಲ್ ಟೆಸ್ಟ್..! ಡೇ & ನೈಟ್ ಟೆಸ್ಟ್ ಬಗ್ಗೆ BCCI ನಿರಾಸಕ್ತಿ ಯಾಕೆ..?
ಚಿತ್ರರಂಗದಲ್ಲಿ ಪರದೆ ಮೇಲೆ ಹೀರೋ ಇರ್ತಾರೆ. ಆದರೆ ಕೆಸಿಸಿಯಲ್ಲಿ ಯಾರೂ ಬೇಕಾದ್ರೂ ಹೀರೋಗಳಾಗಬಹುದು. ನಮ್ಮಲ್ಲಿ ಯಾವುದೇ ಕೋಪ-ತಾಪ, ಮನಸ್ತಾಪಗಳಿಲ್ಲ. ಎಲ್ಲರೂ ಒಂದೇ ಅಂದುಕೊಂಡು ಆಡುತ್ತೇವೆ. ಇಲ್ಲಿ ಶಿಸ್ತು ಮುಖ್ಯ ಎಂದು ಅವರು ಹೇಳಿದರು. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಅವರಿಗೆ ಕ್ರಿಕೆಟ್ ಬರಲ್ಲ. ಹೀಗಾಗಿ ಅವರು ಆಡುತ್ತಿಲ್ಲ. ಇನ್ನು ಈ ಹಿಂದೆ ಯಶ್ ಕೆಸಿಸಿ ಭಾಗವಾಗಿದ್ರು, ದರ್ಶನ್, ಧೃವ ಸರ್ಜಾ ಅವರಿಗೂ ಕರೆದಿದ್ದೇವೆ. ಇಲ್ಲಿ ಯಾರೂ ಬೇಕಿದ್ರೂ ಬಂದು ಆಡಬಹುದು ಎಂದು ಸುದೀಪ್ ಹೇಳಿದ್ದಾರೆ.
ಈ ಬಾರಿಯ ಕೆಸಿಸಿ ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳುತ್ತಿವೆ. ಗಂಗಾ ವಾರಿಯರ್, ಹೊಯ್ಸಳ ಈಗಲ್, ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ಕದಂಬ ಲಯನ್ಸ್, ವಿಜಯನಗರ ಪೇಟ್ರಿಯಾರ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 6 ಸ್ಟಾರ್ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ತಲಾ ಒಂದೊಂದು ತಂಡವನ್ನು ಪ್ರತಿನಿಧಿಸಲಿದ್ದಾರೆ.
Sports Flashback: ನೀಗಿದ ಕೊಹ್ಲಿ ಟೆಸ್ಟ್ ಶತಕದ ಬರ, ಮಾರ್ಚ್‌ನಲ್ಲಿ WPL & IPL ಕಲರವ..!
ಶಿವರಾಜ್ ಕುಮಾರ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡದ ಸುರೇಶ್ ರೈನಾ ಕಣಕ್ಕಿಳಿದರೆ, ಉಪೇಂದ್ರ ಮುಂದಾಳತ್ವ ಒಡೆಯರ್ ಚಾರ್ಜರ್ಸ್ ತಂಡದಲ್ಲಿ ಎಸ್ ಬದ್ರಿನಾಥ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕಿಚ್ಚ ಸುದೀಪ್ ಸಾರಥ್ಯದ ಹೊಯ್ಸಳ ಈಗಲ್ ತಂಡದಲ್ಲಿ ತಿಲಕರತ್ನೆ ದಿಲ್ಷ್ಶಾನ್ ಆಡಲಿದ್ದಾರೆ. ಗಣೇಶ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡದಲ್ಲಿ ಮುರುಳಿ ವಿಜಯ್, ದುನಿಯಾ ವಿಜಯ್ ನೇತೃತ್ವದ ವಿಜಯನಗರ ಪೇಟ್ರಿಯಾರ್ಸ್ ತಂಡದಲ್ಲಿ ಹರ್ಷಲ್ ಗಿಬ್ಸ್ ಕಣಕ್ಕಿಳಿಯಲಿದ್ದಾರೆ. ಇನ್ನು ಡಾಲಿ ಧನಂಜಯ್ ಮುಂದಾಳತ್ವದ ಕದಂಬ ಲಯನ್ಸ್ ತಂಡದ ಪರ ರಾಬಿನ್ ಉತ್ತಪ್ಪ ಕಣಕ್ಕಿಳಿಯಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್, ನಿರ್ಮಾಪಕ ಕೆ.ಪಿ ಶ್ರೀಕಾಂತ್, ಕೆಆರ್ ಜಿ ಕಾರ್ತಿಕ್, ನಿರ್ದೇಶಕ ದಿನಕರ್ ತೂಗುದೀಪ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ನಿರ್ದೇಶಕ ಕೃಷ್ಣ ಭಾಗಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.