ಮರುಜನ್ಮ ಪಡೆದು 5 ತಿಂಗಳಾಗಿದೆ: ರಿಷಭ್‌ ಪಂತ್‌ ಭಾವನಾತ್ಮಕ ಸಂದೇಶ!

By Naveen Kodase  |  First Published Jun 29, 2023, 1:10 PM IST

ಅಪಘಾತದಿಂದ ಸಂಪೂರ್ಣ ಚೇತರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿರುವ ರಿಷಭ್ ಪಂತ್
ತಮ್ಮ ಮರುಹುಟ್ಟಿನ ಕುರಿತು ಭಾವನಾತ್ಮಕ ಪೋಸ್ಟ್ ಮಾಡಿದ ಟೀಂ ಇಂಡಿಯಾ ವಿಕೆಟ್ ಕೀಪರ್
ಕಳೆದ ವರ್ಷ ಡಿಸೆಂಬರ್ 30ರಂದು ಗಂಭೀರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್


ನವದೆಹಲಿ(ಜೂ.29): ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌, 2023ರ ಜನವರಿ 5ರಂದು ತಾವು ಮರು ಜನ್ಮ ಪಡೆದಿದ್ದಾಗಿ ಭಾವನಾತ್ಮಕವಾಗಿ ತಿಳಿಸಿದ್ದಾರೆ. ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ‘2ನೇ ಜನ್ಮದಿನ: 05/01/23’ ಎಂದು ಬರೆದುಕೊಂಡಿದ್ದಾರೆ. 

ರಿಷಭ್‌ ಪಂತ್‌ ಡಿಸೆಂಬರ್‌ 30ರಂದು ದೆಹಲಿ-ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಬಳಿಕ ಜನವರಿ 5ರಂದು ಅವರನ್ನು ಮುಂಬೈಗೆ ಏರ್‌ಲಿಫ್ಟ್‌ ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದನ್ನೇ ಅವರು ಪುನರ್ಜನ್ಮ ಎಂದಿದ್ದಾರೆ ಎಂದು ಹಲವರು ಸಾಮಾಜಿಕ ತಾಣಗಳಲ್ಲಿ ವಿಶ್ಲೇಷಿಸಿದ್ದಾರೆ.

Latest Videos

undefined

ಅಪಘಾತ ಎಲ್ಲಿ ಮತ್ತೆ ಹೇಗಾಯ್ತು?

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಡಿಸೆಂಬರ್ 29ರ ರಾತ್ರಿ ಗುರುವಾರ ತಮ್ಮ ಮರ್ಸಿಡೀಸ್‌ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದರು. 

Ashes 2023: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು..! ಜಾನಿ ಬೇರ್‌ಸ್ಟೋವ್ ಮಾಡಿದ್ದೇನು?

ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ಪಂತ್‌ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಲುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಅವರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದರೂ ಯಾವುದೇ ಮೂಳೆ ಮುರಿದಿಲ್ಲ. ಬೆಂಕಿಯಿಂದ ಸುಟ್ಟಗಾಯಗಳೂ ಆಗಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದರು.

ಊರು​ಗೋ​ಲಿ​ಲ್ಲದೆ ನಡೆ​ದ ಪಂತ್‌!

ಬೆಂಗ​ಳೂ​ರು: ಕಳೆದ ಡಿಸೆಂಬ​ರ್‌​ನಲ್ಲಿ ಭೀಕರ ರಸ್ತೆ ಅಪ​ಘಾ​ತಕ್ಕೆ ತುತ್ತಾಗಿ ಚಿಕಿತ್ಸೆ ಪಡೆ​ಯು​ತ್ತಿ​ರುವ ತಾರಾ ಕ್ರಿಕೆ​ಟಿಗ ರಿಷಭ್‌ ಪಂತ್‌ ಚೇತ​ರಿ​ಸಿ​ಕೊ​ಳ್ಳು​ತ್ತಿದ್ದು, ಊರುಗೋಲಿನ ಸಹಾಯವಿಲ್ಲದೆ ನಡೆದಾಡಲು ಆರಂಭಿಸಿದ್ದಾರೆ. ಸದ್ಯ ಅವರು ಬೆಂಗ​ಳೂ​ರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆ​ಮಿ​(​ಎ​ನ್‌​ಸಿ​ಎ​)​ಯಲ್ಲಿ ಪುನ​ಶ್ಚೇ​ತನ ಶಿಬಿ​ರ​ದ​ಲ್ಲಿ​ದ್ದು, ನಡೆ​ಯುವಾಗ ತಮ್ಮ ಊರು​ಗೋ​ಲನ್ನೇ ಎಸೆ​ಯುವ ವಿಡಿ​ಯೋ​ವೊಂದನ್ನು ಸಾಮಾ​ಜಿಕ ತಾಣ​ಗ​ಳಲ್ಲಿ ಹಂಚಿ​ಕೊಂಡಿ​ದ್ದಾರೆ. ಜೊತೆಗೆ ಎನ್‌​ಸಿಎ ಸಿಬ್ಬಂದಿ ಜೊತೆ ಟೇಬಲ್‌ ಟೆನಿಸ್‌ ಆಡು​ತ್ತಿ​ರುವ ವಿಡಿಯೋ ಕೂಡಾ ವೈರಲ್‌ ಆಗಿದೆ.

ನಾಳೆ ಭಾರತ ಮಹಿಳಾ ತಂಡಕ್ಕೆ ಕೋಚ್‌ ಆಯ್ಕೆ

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಯ್ಕೆಗಾಗಿ ಶುಕ್ರವಾರ (ಜೂ.30) ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಮಾಜಿ ಕ್ರಿಕೆಟಿಗ ಅಮೋಲ್‌ ಮಜುಂದಾರ್‌, ಈ ಹಿಂದೆ ಕೋಚ್‌ ಆಗಿದ್ದ ತುಷಾರ್‌ ಅರೋಠೆ, ಇಂಗ್ಲೆಂಡ್‌ನ ಜಾನ್‌ ಲೆವಿಸ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವ ಪ್ರಮುಖರು. ಇದೇ ವೇಳೆ ಜು.1ರಂದು ಪುರುಷರ ತಂಡದ ಪ್ರಧಾನ ಆಯ್ಕೆಗಾರ ಹುದ್ದೆಗೆ ಸಂದರ್ಶನ ನಡೆಯಲಿದ್ದು, ಮಾಜಿ ಕ್ರಿಕೆಟಿಗ ಅಜಿತ್‌ ಅಗರ್ಕರ್‌ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

click me!