ಡೇ ಅಂಡ್ ಟೆಸ್ಟ್: ಪಂತ್ ಇಲ್ಲವೇ ಸಾಹ ಯಾರಿಗೆ ಸಿಗುತ್ತೆ ಸ್ಥಾನ?

By Suvarna NewsFirst Published Dec 15, 2020, 12:08 PM IST
Highlights

ಆಸ್ಟ್ರೇಲಿಯಾ ವಿರುದ್ಧದ ಡಿಸೆಂಬರ್ 17ರಿಂದ ಆರಂಭವಾಗಲಿರುವ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್‌ ಕೀಪರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

ನವದೆಹಲಿ(ಡಿ.15): ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅಥವಾ ವೃದ್ಧಿಮಾನ್ ಸಾಹ ಈ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗಲಾರಂಭಿಸಿದೆ.

ಟೆಸ್ಟ್ ಕ್ರಿಕೆಟ್ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಪಂತ್‌ಗಿಂತ ಸಾಹ ಉತ್ತಮ ಅನುಭವ ಹೊಂದಿದ್ದಾರೆ. ಭಾರತ ತಂಡದ ಅಂತಿಮ 11ರಲ್ಲಿ ಸಾಹ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಭಾನುವಾರ ಮುಕ್ತಾಯವಾದ ಅಹಿರ್ನಿಶಿ ಅಭ್ಯಾಸ ಪಂದ್ಯದಲ್ಲಿ ಪಂತ್ ವೇಗದ ಶತಕ ಸಿಡಿಸಿದ್ದರು. ಹೀಗಾಗಿ ಸಾಹ ಬದಲು ಪಂತ್‌ಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಗಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಏಪ್ರಿಲ್‌ನಿಂದ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತು..!

ಮೊದಲ ಅಭ್ಯಾಸ ಪಂದ್ಯದಲ್ಲಿ ವೃದ್ದಿಮಾನ್ ಸಾಹಾ ಸಮಯೋಚಿತ ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಆದರೆ ಎರಡನೇ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 73 ಎಸೆತಗಳಲ್ಲಿ ಸ್ಫೋಟಕ ಶತಕ ಚಚ್ಚುವ ಮೂಲಕ ಟೀಂ ಇಂಡಿಯಾ ಆಯ್ಕೆಗಾರರ ತಲೆನೋವು ಮತ್ತಷ್ಟು ಹೆಚ್ಚಿಸುವಂತೆ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪಂತ್ ಪ್ರದರ್ಶನ ಉತ್ತಮವಾಗಿದೆ:

ಡಿಸೆಂಬರ್ 17ರಂದು ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾ ಕಾಂಬಿನೇಷನ್ ಹೇಗಿರಲಿದೆ ಎನ್ನುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿಯಾದಿಯಾಗಿ ಯಾರೊಬ್ಬರು ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ವೃದ್ದಿಮಾನ್ ಸಾಹ ಬ್ಯಾಟಿಂಗ್‌ ಸರಾಸರಿ 30ಕ್ಕಿಂತ ಹೆಚ್ಚಿದ್ದು, ನೂರಕ್ಕೂ ಹೆಚ್ಚು ಬಲಿಪಡೆದ ಅನುಭವವಿದೆ. ಒಟ್ಟಾರೆಯಾಗಿ ಅನುಭವದ ಆಧಾರದಲ್ಲಿ ಸಾಹಗೆ ಮೊದಲ ಆಧ್ಯತೆ ಸಿಗುವ ಸಾಧ್ಯತೆಯಿದೆ.

ಹಾಗಂತ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡಾ ಆಡುವ ಹನ್ನೊಂದರ ಬಳಗದ ರೇಸ್‌ನಿಂದ ಸಂಪೂರ್ಣ ಹೊರಬಿದ್ದಿಲ್ಲ. ಯಾಕೆಂದರೆ 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ರಿಷಭ್ ಪಂತ್ 21 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಸಿಡ್ನಿ ಮೈದಾನದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾಗೆ ಅಸರೆಯಾಗಿದ್ದರು. ಒಟ್ಟಿನಲ್ಲಿ ಪಂತ್-ಸಾಹ ಇಬ್ಬರಲ್ಲಿ ಯಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.
 

click me!