ಸೈಲೆಂಟಾಗಿ ಬೇರೆ ತಂಡ ಸೇರಿಕೊಂಡ ಆರ್‍‌ಸಿಬಿ ಸ್ಟಾರ್ ಯಶ್ ದಯಾಳ್..!

Published : Jul 27, 2026, 09:02 AM IST
Yash Dayal

ಸಾರಾಂಶ

ವೈಯಕ್ತಿಕ ಕಾರಣಗಳಿಂದಾಗಿ ಭಾರೀ ಸುದ್ದಿಯಲ್ಲಿದ್ದ ಆರ್‍‌ಸಿಬಿ ಸ್ಟಾರ್ ಯಶ್ ದಯಾಳ್ ಅವರು ತಂಡ ಬದಲಿಸಿದ್ದಾರೆ. ಬೆನ್ನಲ್ಲೇ ಬೆಂಗಳೂರಿಗೆ ಅವರು ಆಗಮಿಸಿದ್ದು, ಯಾವ ತಂಡ ಸೇರಿದ್ದಾರೆ? ಯಾಕೆ ಈ ನಿರ್ಧಾರ ಕೈಗೊಂಡ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ರಾಯ್‌ಪುರ: ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಳೆದ ಏಳು ವರ್ಷಗಳಿಂದ ಉತ್ತರ ಪ್ರದೇಶ ತಂಡದ ಪ್ರಮುಖ ವೇಗಿಯಾಗಿದ್ದ ಎಡಗೈ ವೇಗಿ ಯಶ್ ದಯಾಳ್, ಈಗ ಆ ತಂಡಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಮುಂಬರುವ 2026-27ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅವರು ಛತ್ತೀಸ್‌ಗಢ ತಂಡವನ್ನು ಅತಿಥಿ ಆಟಗಾರನಾಗಿ ಪ್ರತಿನಿಧಿಸಲಿದ್ದಾರೆ.

ಮೂವರು ಅನುಭವಿಗಳ ಸೇರ್ಪಡೆ

ಛತ್ತೀಸ್‌ಗಢ ಕ್ರಿಕೆಟ್ ಸಂಸ್ಥೆ (CSCS) ತನ್ನ ತಂಡವನ್ನು ಬಲಪಡಿಸಲು ಕೇವಲ ಯಶ್ ದಯಾಳ್ ಮಾತ್ರವಲ್ಲದೆ, ಟೀಮ್ ಇಂಡಿಯಾ ಪರ ಆಡಿದ ಅನುಭವಿ ಆಟಗಾರರಾದ ಜಯಂತ್ ಯಾದವ್ ಮತ್ತು ಧರ್ಮೇಂದ್ರಸಿಂಗ್ ಜಡೇಜಾ ಅವರನ್ನೂ ಅತಿಥಿ ಆಟಗಾರರನ್ನಾಗಿ ಸೇರಿಸಿಕೊಂಡಿದೆ. ಈ ಮೂವರು ಆಟಗಾರರು ಈಗಾಗಲೇ ಕರ್ನಾಟಕದ ಆಲೂರಿನಲ್ಲಿ ನಡೆಯುತ್ತಿರುವ ಪ್ರೀ-ಸೀಸನ್ ಫಿಟ್‌ನೆಸ್ ಕ್ಯಾಂಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ಬಿಸಿಸಿಐ ನಿಯಮದಂತೆ ಆಯ್ಕೆ

ಬಿಸಿಸಿಐ ನಿಯಮಗಳ ಪ್ರಕಾರ, ಪ್ರತಿ ರಾಜ್ಯ ತಂಡವು ಪ್ರತಿ ಸೀಸನ್‌ನಲ್ಲಿ ಗರಿಷ್ಠ ಮೂವರು ಅತಿಥಿ ಆಟಗಾರರನ್ನು (Guest Players) ಸೇರಿಸಿಕೊಳ್ಳಲು ಅವಕಾಶವಿದೆ. ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಶಕ್ತಿ ತುಂಬಲು ನಾವು ಯಶ್ ದಯಾಳ್, ಜಯಂತ್ ಯಾದವ್ ಮತ್ತು ಧರ್ಮೇಂದ್ರಸಿಂಗ್ ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇವರ ಅನುಭವ ತಂಡದ ಯುವ ಆಟಗಾರರಿಗೆ ಸಹಕಾರಿಯಾಗಲಿದೆ ಎಂದು ಛತ್ತೀಸ್‌ಗಢ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಭಾರತದ ಮಾಜಿ ಬ್ಯಾಟರ್ ಅಮಯ್ ಖುರಾಸಿಯಾ ಅವರು ಛತ್ತೀಸ್‌ಗಢ ತಂಡದ ನೂತನ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಕೇರಳ ತಂಡವನ್ನು ರಣಜಿ ಟ್ರೋಫಿ ಫೈನಲ್‌ಗೆ ಮುನ್ನಡೆಸಿದ ಕೀರ್ತಿ ಇವರಿಗಿದೆ. ಇವರ ಮಾರ್ಗದರ್ಶನದಲ್ಲಿ ಈ ಮೂವರು ಸ್ಟಾರ್ ಆಟಗಾರರು ಮುಂಬರುವ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಆಡಲಿದ್ದಾರೆ.

ಯಶ್ ದಯಾಳ್ ಹಾದಿ ಸುಲಭವಾಗಿರಲಿಲ್ಲ

ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಮಿಂಚಿದ್ದ ಯಶ್ ದಯಾಳ್, 2023ರಲ್ಲಿ ರಿಂಕು ಸಿಂಗ್ ಎದುರು ಸತತ 5 ಸಿಕ್ಸರ್ ಬಿಟ್ಟುಕೊಟ್ಟು ಸಂಕಷ್ಟಕ್ಕೀಡಾಗಿದ್ದರು. ಅದರಿಂದ ಎದೆಗುಂದದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಅದ್ಭುತವಾಗಿ ಪುನರಾಗಮನ ಮಾಡಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಇತ್ತೀಚೆಗೆ ಕೆಲವು ವೈಯಕ್ತಿಕ ವಿವಾದಗಳು ಮತ್ತು ಕಾನೂನು ಸಂಘರ್ಷಗಳಿಂದಾಗಿ ಸುದ್ದಿಯಲ್ಲಿದ್ದ ದಯಾಳ್, 2026ರ ಐಪಿಎಲ್ ಸೀಸನ್‌ನಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಹೊಸ ರಾಜ್ಯದ ಪರ ಆಡುವ ಮೂಲಕ ತಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲು ಅವರು ಸಜ್ಜಾಗಿದ್ದಾರೆ.

ಜಯಂತ್ ಯಾದವ್ ಅನುಭವದ ಬಲ

ಭಾರತದ ಪರ 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿರುವ ಆಲ್‌ರೌಂಡರ್ ಜಯಂತ್ ಯಾದವ್ ಅವರ ಸೇರ್ಪಡೆ ಛತ್ತೀಸ್‌ಗಢ ತಂಡದ ಸ್ಪಿನ್ ವಿಭಾಗಕ್ಕೆ ಮತ್ತು ಕೆಳಕ್ರಮಾಂಕದ ಬ್ಯಾಟಿಂಗ್‌ಗೆ ಹೆಚ್ಚಿನ ಬಲ ತುಂಬಲಿದೆ. ಆಗಸ್ಟ್ ಎರಡನೇ ವಾರದಲ್ಲಿ ಛತ್ತೀಸ್‌ಗಢ ತಂಡದ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Vaibhav: ಗಂಭೀರ್, ಶ್ರೇಯಸ್‌ ಅಲ್ಲ, 'ಆ ಒಬ್ಬರಿಗೆ' ಧನ್ಯವಾದ ತಿಳಿಸಿದ ವೈಭವ್! ನಿಜವಾದ ಹೀರೊ ಹೆಸರು ಕೇಳಿದ್ರೆ ನೀವು ದಂಗಾಗ್ತೀರಾ!
ಜಿಂಬಾಬ್ವೆ ಟಿ20 ಸರಣಿ ಗೆಲುವಿನ ಬೆನ್ನಲ್ಲೇ ಮತ್ತೆ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ, ನಿಟ್ಟುಸಿರು ಬಿಟ್ಟ ಅಯ್ಯರ್