
ನವದೆಹಲಿ(ಫೆ.04): ರೋಹಿತ್ ಶರ್ಮಾ (Rohit Sharma) ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡವನ್ನು (Indian Cricket Team) ನಾಯಕನಾಗಿ ಮುನ್ನಡೆಸಲು ಸಜ್ಜಾಗಿದ್ದಾರೆ. ಫೆಬ್ರವರಿ 06ರಿಂದ ವೆಸ್ಟ್ ಇಂಡೀಸ್ ವಿರುದ್ದ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ರೋಹಿತ್ ಶರ್ಮಾ ಪಾಲಿಗೆ ನಾಯಕನಾಗಿ ಮೊದಲ ಏಕದಿನ ಸರಣಿಯಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ವಿರಾಟ್ ಕೊಹ್ಲಿಯನ್ನು (Virat Kohli) ಕೆಳಗಿಳಿಸಿ ರೋಹಿತ್ ಶರ್ಮಾ ಅವರಿಗೆ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಪಟ್ಟ ಕಟ್ಟಲಾಗಿತ್ತು.
ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಸಜ್ಜಾಗಿರುವ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಜಿತ್ ಅಗರ್‌ಕರ್ (Ajit Agarkar), ಹಿಟ್‌ಮ್ಯಾನ್ ಮುಂದಿರುವ ಸವಾಲನ್ನು ವಿಶ್ಲೇಷಿಸಿದ್ದಾರೆ. ಆದರೆ ರೋಹಿತ್ ಸವಾಲನ್ನು ಮೆಟ್ಟಿನಿಲ್ಲುವ ಕ್ಷಮತೆಯನ್ನು ಹೊಂದಿದ್ಧಾರೆ ಎಂದು ಮುಂಬೈ ಮೂಲದ ಮಾಜಿ ವೇಗಿ ಅಭಿಪ್ರಾಯಪಟ್ಟಿದ್ದಾರೆ.
ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎಂದು ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಕಟ್ಟಿರುವುದು ನನ್ನ ಪ್ರಕಾರ ಒಳ್ಳೆಯ ಹಾಗೂ ಸರಿಯಾದ ನಿರ್ಧಾರವಾಗಿದೆ. ಆದರೆ ನನ್ನ ಪ್ರಕಾರ ಫಿಟ್ ಆಗಿದ್ದುಕೊಂಡು, ಏಕದಿನ ವಿಶ್ವಕಪ್ ಟೂರ್ನಿಯನ್ನು ಮುನ್ನಡೆಸುವುದು ಅವರ ಮುಂದಿರುವ ದೊಡ್ಡ ಸವಾಲಾಗಿದೆ. ಯಾಕೆಂದರೆ ವಿರಾಟ್ ಕೊಹ್ಲಿಯಾಗಲಿ ಅಥವಾ ಮಹೇಂದ್ರ ಸಿಂಗ್ ಧೋನಿಯಾಗಲಿ (MS Dhoni), ನಾಯಕರಾಗಿದ್ದಾಗ ತೀರಾ ಅಪರೂಪ ಎಂಬಂತೆ ತಂಡದಿಂದ ಹೊರಗುಳಿಯುತ್ತಿದ್ದರು. ಅವರಿಬ್ಬರು ಸಾಕಷ್ಟು ಫಿಟ್ ಆಗಿರುತ್ತಿದ್ದರು ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಅಗರ್‌ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾನು ಬಿಸಿಸಿಐ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ, ಗಾಳಿ ಸುದ್ದಿಗೆ ಉತ್ತರಿಸಲ್ಲ ಎಂದ ಸೌರವ್ ಗಂಗೂಲಿ
ಫಿಟ್ನೆಸ್ ಕಾಪಾಡಿಕೊಂಡಿದ್ದರಿಂದಲೇ ಮಹೇಂದ್ರ ಸಿಂಗ್ ಧೋನಿ ದಶಕಗಳ ಕಾಲ ಭಾರತ ಕ್ರಿಕೆಟ್ ತಂಡವನ್ನು ನಾಯಕನಾಗಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಕೂಡಾ ಅದೇ ಪರಂಪರೆಯನ್ನು ಮುನ್ನಡೆಸಿದರು. ವಿರಾಟ್ ಕೊಹ್ಲಿ 7 ವರ್ಷಗಳ ನಾಯಕತ್ವದ ಅವಧಿಯಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡವನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ದಿದ್ದರು. ಇದೀಗ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ನಾಯಕರಾಗುವ ಸಾಧ್ಯತೆಯೂ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗೂ ರೋಹಿತ್ ಶರ್ಮಾ ಮೂರು ಮಾದರಿಯ ಭಾರತೀಯ ಕ್ರಿಕೆಟ್‌ಗೂ ನಾಯಕನಾಗಬೇಕು. ಇದೇ ವೇಳೆ ಅವರು ತಮ್ಮ ಫಿಟ್ನೆಸ್ ಕೂಡಾ ಕಾಯ್ದುಕೊಳ್ಳುವ ಮೂಲಕ ಮೂರು ಮಾದರಿಯ ಕ್ರಿಕೆಟ್‌ನ ಆಯ್ಕೆಗೂ ಸದಾಕಾಲ ಲಭ್ಯವಿರಬೇಕು ಎಂದು ಅಗರ್‌ಕರ್ ಹೇಳಿದ್ದಾರೆ.
ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ಗಾಯದ ಸಮಸ್ಯೆಯಿಂದಾಗಿಯೇ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು. ಹೀಗಾಗಿ ಕೆ.ಎಲ್. ರಾಹುಲ್ (KL Rahul) ಟೆಸ್ಟ್ ಸರಣಿಗೆ ಉಪನಾಯಕರಾಗಿ ಹಾಗೂ ಏಕದಿನ ಸರಣಿಯಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಇದೇ ವೇಳೆ ರೋಹಿತ್ ಶರ್ಮಾ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು, ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿ ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೆಬ್ರವರಿ 6ರಿಂದ ಆರಂಭವಾಗಲಿದೆ, ಸರಣಿಯ ಇನ್ನುಳಿದ ಪಂದ್ಯಗಳು ಫೆಬ್ರವರಿ 9 ಮತ್ತು 11ಕ್ಕೆ ನಡೆಯಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.