ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಯಶಸ್ವಿಯಾಗಿ ಮುಕ್ತಾಯ
ಸಾಕಷ್ಟು ಅಳೆದು-ತೂಗಿ ತಂಡವನ್ನು ಕಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ
ಆರ್‌ಸಿಬಿ ತಂಡ ಕೂಡಿಕೊಂಡ ಹಲವು ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರು
ಬೆಂಗಳೂರು(ಫೆ.13): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಕಷ್ಟು ಅಳೆದು-ತೂಗಿ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡದ ತಾರಾ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ, ರಿಚಾ ಘೋಷ್, ಎಲೈಸಿ ಪೆರ್ರಿ, ಸೋಫಿ ಡಿವೈನ್, ರೇಣುಕಾ ಸಿಂಗ್ ಸೇರಿದಂತೆ ಬಲಿಷ್ಠ ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರನ್ನು ಖರೀದಿಸುವಲ್ಲಿ ಆರ್‌ಸಿಬಿ ತಂಡವು ಯಶಸ್ವಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ಮೊದಲಿಗೆ ಮುಂಬೈ ಎದುರು ಜಿದ್ದಿಗೆ ಬಿದ್ದಂತೆ ಹೋರಾಡಿ 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂಧನಾಗೆ 3.40 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸ್ಮೃತಿ ಮಂಧನಾ, ಈ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಆಟಗಾರ್ತಿ ಎನಿಸಿಕೊಂಡರು.
ಇನ್ನು ಇದಾದ ಬಳಿಕ ನ್ಯೂಜಿಲೆಂಡ್ ಆಲ್ರೌಂಡರ್ ಸೋಫಿ ಡಿವೈನ್ ಅವರನ್ನು ಮೂಲ ಬೆಲೆ 50 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಆ ನಂತರ ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಎಲೈಸಿ ಪೆರ್ರಿಯನ್ನು 1.70 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಆರ್‌ಸಿಬಿ ಫ್ರಾಂಚೈಸಿ ಯಶಸ್ವಿಯಾಯಿತು. ಇದಾದ ಬಳಿಕ ಆರ್‌ಸಿಬಿ ಫ್ರಾಂಚೈಸಿಯು ಭಾರತ ತಂಡದ ಅನುಭವಿ ವೇಗಿ ರೇಣುಕಾ ಸಿಂಗ್ ಅವರಿಗೆ 1.50 ಕೋಟಿ ರುಪಾಯಿ ನೀಡಿ ತನ್ನತ್ತ ಸೆಳೆದುಕೊಂಡಿತು.
WPL Auction: ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!
ಇನ್ನು ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮುತ್ತಿರುವ ರಿಚಾ ಘೋಷ್ ಅವರನ್ನು ಖರೀದಿಸಲು ಸಾಕಷ್ಟು ಪೈಪೋಟಿಯನ್ನು ಎದುರಿಸಿದರೂ ಪಟ್ಟು ಬಿಡದ ಆರ್‌ಸಿಬಿ ಕೊನೆಗೂ 1.90 ಕೋಟಿ ರುಪಾಯಿ ನೀಡಿ ರಿಚಾ ಘೋಷ್ ಆವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
ಇನ್ನುಳಿದಂತೆ ಆರ್‌ಸಿಬಿ ತಂಡವು ಆಸ್ಟ್ರೇಲಿಯಾದ ಆಲ್ರೌಂಡರ್ ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕ ಪಾಟೀಲ್, ಆಶಾ ಶೋಬನಾ, ಹೀಥರ್ ನೈಟ್ ಅವರನ್ನು ಮೂಲ ಬೆಲೆಗೆ ಖರೀದಿಸುವಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಯಶಸ್ವಿಯಾಗಿದೆ.
WPL ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ ನೋಡಿ
1. ಸ್ಮೃತಿ ಮಂಧನಾ .3.4 ಕೋಟಿ ರುಪಾಯಿ
2. ರಿಚಾ ಘೋಷ್ 1.9 ಕೋಟಿ ರುಪಾಯಿ
3. ಎಲೈಸಿ ಪೆರ್ರಿ 1.7 ಕೋಟಿ ರುಪಾಯಿ
4. ರೇಣುಕಾ ಸಿಂಗ್ 1.5 ಕೋಟಿ ರುಪಾಯಿ
5. ಸೋಫಿ ಡಿವೈನ್ 50 ಲಕ್ಷ ರುಪಾಯಿ
6. ಹೀಥರ್ ನೈಟ್ 40 ಲಕ್ಷ ರುಪಾಯಿ
7. ಮೇಗನ್ ಶುಟ್ 40 ಲಕ್ಷ ರುಪಾಯಿ
8. ಕನಿಕಾ ಅಹುಜಾ 35 ಲಕ್ಷ ರುಪಾಯಿ
9. ವಾನ್ ನೀಕಕ್ 30 ಲಕ್ಷ ರುಪಾಯಿ
10. ಎರಿನ್ ಬರ್ನ್ಸ್ 30 ಲಕ್ಷ ರುಪಾಯಿ
11. ಪ್ರೀತಿ ಬೋಸ್ 30 ಲಕ್ಷ ರುಪಾಯಿ
12. ಕೋಮಲ್ ಜಂಜದ್ 25 ಲಕ್ಷ ರುಪಾಯಿ
13. ಆಶಾ ಶೋಭನಾ 10 ಲಕ್ಷ ರುಪಾಯಿ
14. ದಿಶಾ ಕಸಟ್ 10 ಲಕ್ಷ ರುಪಾಯಿ
15. ಇಂದ್ರಾನಿ ರಾಯ್ 10 ಲಕ್ಷ ರುಪಾಯಿ
16. ಪೂನಂ ಕೆಮ್ನರ್ 10 ಲಕ್ಷ ರುಪಾಯಿ
17. ಸಹನಾ ಪವಾರ್ 10 ಲಕ್ಷ ರುಪಾಯಿ
18. ಶ್ರೇಯಾಂಕಾ ಪಾಟೀಲ್ 10 ಲಕ್ಷ ರುಪಾಯಿ.