
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರಿನಲ್ಲಿ ಮೊದಲ ಹಾಗೂ ಒಟ್ಟಾರೆ ಎರಡನೇ ಸೋಲು ಎದುರಾಗಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಎದುರು ಡೆಲ್ಲಿ ಕ್ಯಾಪಿಟಲ್ಸ್ ತಂಡವು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆರ್‌ಸಿಬಿ ತಂಡಕ್ಕೆ ಇದೀಗ ತವರಿನಲ್ಲಿ ಮರ್ಮಾಘಾತವಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತ್ತು. ಫಿಲ್ ಸಾಲ್ಟ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ಇನ್ನು ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.5 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ರೋಚಕವಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಆಕರ್ಷಕ ಅರ್ಧಶತಕ ಸಿಡಿಸಿದರೆ, ಡೇವಿಡ್ ಮಿಲ್ಲರ್ ಕೊನೆಯ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ ಪಂದ್ಯ ಡೆಲ್ಲಿ ಪಾಲಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಷ್ಟಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ ಸೋಲಿಗೆ ಕಾರಣವೇನು ಎನ್ನುವುದನ್ನು ನೋಡುವುದಾದರೇ,
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ಡೆಲ್ಲಿ ಎದುರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲವಾದರು. ಟಿಮ್ ಡೇವಿಡ್ ವಿಕೆಟ್ ಪತನವಾಗುವವರೆಗೂ ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಆರ್‌ಸಿಬಿ ಸರಿಸುಮಾರು 10ರ ಎಕನಮಿಯಲ್ಲಿ ರನ್ ಗಳಿಸುತ್ತಲೇ ಸಾಗುತ್ತಿತ್ತು. ಈ ವೇಳೆ ಡೆತ್ ಓವರ್‌ನಲ್ಲಿ ಬ್ಯಾಟ್ ಮಾಡಲಿಳಿದ ಜಿತೇಶ್ ಶರ್ಮಾ ಡೆಲ್ಲಿ ಎದುರು ರನ್ ಗಳಿಸಲು ಪರದಾಡಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಜಿತೇಶ್ ಶರ್ಮಾ ಮಹತ್ವದ 20 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 14 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಆರ್‌ಸಿಬಿ ತಂಡ 200+ ರನ್ ಗಳಿಸುವ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿತು. ಜಿತೇಶ್ ಶರ್ಮಾ ಮಂದಗತಿಯ ಬ್ಯಾಟಿಂಗ್ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣ.
ಆರ್‌ಸಿಬಿ ತಂಡದ ಅತ್ಯಂತ ನಂಬಿಗಸ್ಥ ವೇಗದ ಬೌಲರ್ ಜೋಶ್ ಹೇಜಲ್‌ವುಡ್, ಡೆಲ್ಲಿ ಎದುರು ಪವರ್ ಪ್ಲೇನಲ್ಲಿ ದುಬಾರಿಯಾಗಿದ್ದು ಮಾತ್ರವಲ್ಲದೇ ವಿಕೆಟ್ ಕಬಳಿಸಲು ವಿಫಲವಾಗಿದ್ದು ಆರ್‌ಸಿಬಿಗೆ ಹಿನ್ನಡೆ ಎನಿಸಿತು. ಒಂದು ಕಡೆ ಭುವಿ ಮಾರಕ ದಾಳಿ ನಡೆಸಿದರೆ, ಮತ್ತೊಂದು ತುದಿಯಲ್ಲಿ ಹೇಜಲ್‌ವುಡ್, ಮಾರಕ ದಾಳಿ ಸಂಘಟಿಸಲು ವಿಫಲವಾಗಿದ್ದು ತಂಡದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಭುವಿ ಪವರ್‌ಪ್ಲೇನಲ್ಲೇ 3 ವಿಕೆಟ್ ಕಬಳಿಸಿದರು. ಇದಕ್ಕೆ ಹೇಜಲ್‌ವುಡ್ ಕೂಡಾ ಸಾಥ್ ನೀಡಿದ್ದರೇ ಬಹುಶಃ ಫಲಿತಾಂಶ ಬೇರೆಯದ್ದೇ ಆಗುತ್ತಿತ್ತು.
ಕೇವಲ 18 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ತಂಡಕ್ಕೆ ಕನ್ನಡಿಗ ಕೆ ಎಲ್ ರಾಹುಲ್ ಮತ್ತೊಮ್ಮೆ ಆಸರೆಯಾದರು. ಜೋಶ್ ಹೇಜಲ್‌ವುಡ್ ಸೇರಿದಂತೆ ಆರ್‌ಸಿಬಿ ಬೌಲರ್‌ಗಳನ್ನು ಆರಂಭದಿಂದಲೇ ದಂಡಿಸಿದ ರಾಹುಲ್ ಕೇವಲ 34 ಎಸೆತಗಳಲ್ಲಿ 57 ರನ್ ಚಚ್ಚಿದರು. ಇನ್ನು ಮತ್ತೊಂದು ತುದಿಯಲ್ಲಿ ಅತ್ಯಂತ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಟ್ರಿಸ್ಟಿನ್ ಸ್ಟಬ್ಸ್ ಅಜೇಯ 60 ರನ್ ಸಿಡಿಸಿ ತಂಡ ಗೆಲುವಿನ ದಡ ಸೇರಲು ನೆರವಾದರು. ಆರಂಭದಲ್ಲೇ ಸ್ಟಬ್ಸ್ ವಿಕೆಟ್ ಆರ್‌ಸಿಬಿ ಸಿಕ್ಕಿದ್ದರೇ ಪಂದ್ಯ ಬೆಂಗಳೂರು ಪರ ವಾಲುವ ಸಾಧ್ಯತೆಯಿತ್ತು.
ವಿಂಡೀಸ್ ಮೂಲದ ಆಲ್ರೌಂಡರ್ ರೊಮ್ಯಾರಿಯೋ ಶೆಫರ್ಡ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದು ಆರ್‌ಸಿಬಿಗೆ ದೊಡ್ಡ ಹೊರೆಯಾಗುತ್ತಿದೆ. ಬ್ಯಾಟಿಂಗ್‌ನಲ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಶೆಫರ್ಡ್, ಬೌಲಿಂಗ್‌ನಲ್ಲಿ ಕೊನೆಯ ಓವರ್‌ನಲ್ಲಿ 15 ರನ್ ಕಾಪಾಡಿಕೊಳ್ಳಲು ವಿಫಲವಾಗಿದ್ದು ತಂಡದ ಸೋಲಿಗೆ ಕಾರಣ ಎನಿಸಿಕೊಂಡಿತು. ಶೆಫರ್ಡ್ ಬದಲಿಗೆ ಜೇಕಬ್ ಬೆಥಲ್ ತಂಡದಲ್ಲಿದ್ದರೇ ಬಹುಶಃ ಆರ್‌ಸಿಬಿ ಮತ್ತಷ್ಟು ರನ್ ಗಳಿಸುವ ಸಾಧ್ಯತೆಯಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.