
ಬೆಂಗಳೂರು: 2026ರ ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗುಬಡಿದು ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಕ್ವಾಲಿಫೈಯರ್-1 ಪಂದ್ಯದುದ್ದಕ್ಕೂ ಗುಜರಾತ್ ಟೈಟಾನ್ಸ್ ತಂಡದ ಮೇಲೆ ಪ್ರಾಬಲ್ಯ ಮೆರೆದ ರಜತ್ ಪಾಟೀದಾರ್ ಪಡೆ 92 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ 19ನೇ ಸೀಸನ್ ಐಪಿಎಲ್ ಪ್ರವೇಶಿಸುತ್ತಿದ್ದಂತೆಯೇ ಎದುರಾಳಿ ಪಡೆಗಳಿಗೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಗುಜರಾತ್ ಟೈಟಾನ್ಸ್ ಎದುರು ಟಾಸ್ ಸೋತು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೂಲಕ ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲೇ ಅತಿಹೆಚ್ಚು ಬಾರಿಸಿದ ತಂಡ ಎನ್ನುವ ಹಿರಿಮೆಗೆ ಆರ್‌ಸಿಬಿ ತಂಡವು ಪಾತ್ರವಾಯಿತು. ಇದರ ಬೆನ್ನಲ್ಲೇ ಆರ್‌ಸಿಬಿ ತಂಡದ ಬ್ಯಾಟರ್‌ಗಳ ಪ್ರದರ್ಶನವನ್ನು ರಜತ್ ಪಾಟೀದಾರ್ ಕೊಂಡಾಡಿದ್ದಾರೆ. 'ಈ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ನಮ್ಮ ತಂಡದ ಬ್ಯಾಟರ್‌ಗಳು ಎದುರಾಳಿಗಳ ಮೇಲೆ ಒತ್ತಡ ಹೇರಿದ ರೀತಿ ಹಾಗೂ ತಂಡದ ಪ್ರತಿಯೊಬ್ಬರು ತಂಡದ ಗೆಲುವಿಗಾಗಿ ತನ್ನದೇ ಆದ ಕಾಂಟ್ರಿಬ್ಯೂಷನ್ ನೀಡಿದ ರೀತಿ ನಿಜಕ್ಕೂ ನಮ್ಮ ತಂಡದ ಪಾಲಿಗೆ ಒಳ್ಳೆಯ ಬೆಳವಣಿಗೆ ಎಂದು ಪಾಟೀದಾರ್ ಹೇಳಿದ್ದಾರೆ.
ನಾವು ಯಾವುದೇ ಒಂದು ಪ್ಲಾನ್‌ನೊಂದಿಗೆ ಕಣಕ್ಕಿಳಿಯುವುದಿಲ್ಲ. ನಾವು ಮೈದಾನಕ್ಕಿಳಿಯುತ್ತಿದ್ದೇವೆ ಎಂದರೆ ಎದುರಾಳಿ ಪಾಳಯದಲ್ಲಿ ನಾವು ಬರುತ್ತಿದ್ದೇವೆ ಎನ್ನುವ ಭಯ ಹುಟ್ಟಿಸುತ್ತಿದ್ದೇವೆ. ನಾವು ಮೈದಾನಕ್ಕಿಳಿಯುತ್ತಿದ್ದೇವೆ ಎಂದರೆ ಪೂರ್ಣ ತಯಾರಿಯೊಂದಿಗೆ ಕಣಕ್ಕಿಳಿದಿದ್ದೇವೆ ಎನ್ನುವುದು ಎದುರಾಳಿ ಪಡೆಗೂ ಅರ್ಥವಾಗುತ್ತದೆ. ಪಂದ್ಯಕ್ಕೂ ಮುನ್ನ ನಡೆಯುವ ಮೀಟಿಂಗ್‌ನಲ್ಲೂ ನಾವು ಆಕ್ರಮಣಕಾರಿ ಆಟವಾಡಬೇಕು ಎನ್ನುವ ಸ್ಪಷ್ಟ ನಿರ್ಧಾರ ತೆಗೆದುಕೊಂಡಿರುತ್ತೇವೆ ಎಂದು ರಜತ್ ಪಾಟೀದಾರ್ ಹೇಳಿದ್ದಾರೆ.
ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ-ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್-1 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ರಜತ್ ಪಾಟೀದಾರ್ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರೆ, ಕೊಹ್ಲಿ 43, ಪಡಿಕ್ಕಲ್ 30 ಹಾಗೂ ಕೃನಾಲ್ ಪಾಂಡ್ಯ ಚುರುಕಿನ 43 ರನ್ ಚಚ್ಚುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು, ಆರ್‌ಸಿಬಿ ಮಾರಕ ದಾಳಿಗೆ ತತ್ತರಿಸಿ 19.3 ಓವರ್‌ಗಳಲ್ಲಿ ಕೇವಲ 162 ರನ್ ಗಳಿಸಿ ಸರ್ವಪತನ ಕಂಡಿತು. ಇದರೊಂದಿಗೆ ಆರ್‌ಸಿಬಿ 93 ರನ್‌ಗಳ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.