IPL 2026: ಆರ್‌ಸಿಬಿ 2ನೇ ಕಪ್‌ ಗೆಲ್ಲಲು ಇನ್ನೊಂದೇ ಹೆಜ್ಜೆ! ಬೆಂಗಳೂರು ಆರ್ಭಟಕ್ಕೆ ಗುಜರಾತ್ ಧೂಳೀಪಟ

Kannadaprabha News   | Kannada Prabha
Published : May 27, 2026, 09:03 AM IST
RCB vs GT Qualifier 1 2026

ಸಾರಾಂಶ

ಹಾಲಿ ಚಾಂಪಿಯನ್‌ ಆರ್‌ಸಿಬಿ, ಕ್ವಾಲಿಫೈಯರ್‌-1 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು 92 ರನ್‌ಗಳಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ರಜತ್ ಪಾಟೀದಾರ್ ಅವರ ಅಜೇಯ 93 ರನ್‌ಗಳ ನೆರವಿನಿಂದ ಆರ್‌ಸಿಬಿ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೆ, ಗುಜರಾತ್ 162 ರನ್‌ಗಳಿ ಸೋಲುಂಡಿತು.

ಧರ್ಮಶಾಲಾ: ಒಂದು ಐಪಿಎಲ್‌ ಕಪ್‌ ಗೆಲ್ಲಲು ಬರೋಬ್ಬರಿ 18 ವರ್ಷ ಕಾದು, ಕಳೆದ ವರ್ಷ ತನ್ನ ಕನಸು ನನಸಾಗಿಸಿಕೊಂಡಿದ್ದ ಆರ್‌ಸಿಬಿ ತಂಡ ಈಗ ಮತ್ತೊಂದು ಟ್ರೋಫಿ ಗೆಲುವಿನ ಸನಿಹದಲ್ಲಿದೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ಸತತ 2ನೇ ಬಾರಿ ಫೈನಲ್‌ ತಲುಪಿದೆ. ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಮಂಗಳವಾರ ನಡೆದ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಬೆಂಗಳೂರು ತಂಡ 92 ರನ್‌ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಭಾರೀ ಪೈಪೋಟಿ ನಿರೀಕ್ಷಿಸಲಾಗಿದ್ದ ಪಂದ್ಯ ಏಕಮುಖ ಫಲಿತಾಂಶದೊಂದಿಗೆ ಕೊನೆಗೊಂಡಿತು. ಆರ್‌ಸಿಬಿ ಅಬ್ಬರದ ಬ್ಯಾಟಿಂಗ್‌ ಮುಂದೆ ಗುಜರಾತ್‌ ಬೌಲರ್‌ಗಳು ಉತ್ತರವಿಲ್ಲದೆ ನಿಂತರು. ಬಳಿಕ ಆರ್‌ಸಿಬಿ ವೇಗಿಗಳನ್ನು ಎದುರಿಸಲಾದೆ ಬ್ಯಾಟರ್‌ಗಳೂ ಪರದಾಡಿದರು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟದಲ್ಲಿ ಬರೋಬ್ಬರಿ 254 ರನ್‌ ಕಲೆಹಾಕಿತು. ಗುಜರಾತ್‌ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತು.

ಧರ್ಮಶಾಲಾದಲ್ಲಿ ರನ್‌ ಮಳೆ:

ಮೊದಲ 4 ಎಸೆತದಲ್ಲೇ 3 ಬೌಂಡರಿ ಬಾರಿಸಿ ವೆಂಕಟೇಶ್‌(19) ಆರ್‌ಸಿಬಿಗೆ ಭರ್ಜರಿ ಆರಂಭ ನೀಡಿದರು. ಬಳಿಕ ವಿರಾಟ್‌ ಕೊಹ್ಲಿ 25 ಎಸೆತಕ್ಕೆ 43, ದೇವದತ್‌ ಪಡಿಕ್ಕಲ್‌ 19 ಎಸೆತಕ್ಕೆ 30 ರನ್‌ ಸಿಡಿಸಿದರು. ಇಬ್ಬರನ್ನೂ 9ನೇ ಓವರ್‌ನಲ್ಲಿ ಜೇಸನ್‌ ಹೋಲ್ಡರ್‌ ಪೆವಿಲಿಯನ್‌ಗೆ ಅಟ್ಟಿದರು. 7ರಿಂದ 13ನೇ ಓವರ್‌ ನಡುವೆ ತಂಡ ಗಳಿಸಿದ್ದು 52 ರನ್‌. ಆದರೆ 14ನೇ ಓವರ್‌ನಲ್ಲಿ ಗೇರ್‌ ಚೇಂಜ್‌ ಮಾಡಿದ ರಜತ್‌, ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈಯಲು ಆರಂಭಿಸಿದರು. ಮೊದಲ 13 ಓವರ್‌ನಲ್ಲಿ 128 ರನ್‌ ಗಳಿಸಿದ್ದ ತಂಡ, ಕೊನೆ 7 ಓವರ್‌ಗಳಲ್ಲೇ 126 ರನ್‌ ದೋಚಿತು. ರಜತ್‌ 33 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್‌ನೊಂದಿಗೆ ಔಟಾಗದೆ 93 ರನ್‌ ಸಿಡಿಸಿದರು. ಕೃನಾಲ್‌ 43, ಜಿತೇಶ್‌ ಔಟಾಗದೆ 15 ರನ್‌ ಗಳಿಸಿದರು.

ಟೈಟಾನ್ಸ್‌ ಮಹಾಪತನ:

ಗುಜರಾತ್‌ಗೆ ಸಿಕ್ಕ ಗುರಿ ಬೆಟ್ಟದಷ್ಟಿದ್ದರೂ ಭಾರೀ ಹೋರಾಟ ನಿರೀಕ್ಷಿಸಲಾಗಿತ್ತು. ಆದರೆ ಆರ್‌ಸಿಬಿ ವೇಗಿಗಳ ಆರ್ಭಟದ ಮುಂದೆ ಗುಜರಾತ್‌ ಬ್ಯಾಟರ್‌ಗಳು ತರಗೆಲೆಯಂತೆ ಉದುರಿದರು. ಮೊದಲೆರಡು ಎಸೆತಗಳಲ್ಲಿ ಸಾಯಿ ಸುದರ್ಶನ್‌ ಬೌಂಡರಿಗಟ್ಟಿದರೂ, 3ನೇ ಓವರ್‌ನಲ್ಲಿ ಅವರು ಔಟಾಗುವುದರೊಂದಿಗೆ ತಂಡದ ಪತನ ಆರಂಭಗೊಂಡಿತು. ಸುದರ್ಶನ್‌(14), ನಾಯಕ ಗಿಲ್‌(2), ಜೋಸ್‌ ಬಟ್ಲರ್(29) ವಿಫಲರಾಗುವುದರೊಂದಿಗೆ ತಂಡದ ಸೋಲು ಖಚಿತವಾಗಿತ್ತು. ಬಳಿಕ ರಾಹುಲ್‌ ತೆವಾಟಿಯಾ(68) ಹೋರಾಡಿ ಸೋಲಿನ ಅಂತರ ತಗ್ಗಿಸಿದರು. ಜೇಕಬ್‌ ಡಫಿ 3, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಹಾಗೂ ರಸಿಕ್‌ ಸಲಾಂ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 254/5 (ರಜತ್‌ ಔಟಾಗದೆ 93, ಕೊಹ್ಲಿ 43, ಕೃನಾಲ್‌ 43, ಹೋಲ್ಡರ್‌ 2-39), ಗುಜರಾತ್‌ 00 ಓವರಲ್ಲಿ 000 (ತೆವಾಟಿಯಾ ಔಟಾಗದೆ 00, ಡಫಿ 3-39, ರಸಿಕ್‌ 2-11) ಪಂದ್ಯಶ್ರೇಷ್ಠ: ರಜತ್‌ ಪಾಟೀದಾರ್‌

ಸತತ 4 ಆವೃತ್ತಿಯಲ್ಲಿ ವಿರಾಟ್‌ 600+ ರನ್

ವಿರಾಟ್‌ ಕೊಹ್ಲಿ ಸತತ 4, ಒಟ್ಟಾರೆ 6 ಐಪಿಎಲ್‌ ಆವೃತ್ತಿಗಳಲ್ಲಿ ತಲಾ 600+ ರನ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2023ರಲ್ಲಿ 639 ರನ್‌, 2024ರಲ್ಲಿ 741 ರನ್‌, 2025ರಲ್ಲಿ 657 ರನ್‌ ಹಾಗೂ ಈ ಬಾರಿ 15 ಪಂದ್ಯದಲ್ಲಿ 600 ರನ್‌ ಸಿಡಿಸಿದ್ದಾರೆ. ರಾಹುಲ್‌ ಸತತವಾಗಿ 3, ಒಟ್ಟಾರೆ 4 ಆವೃತ್ತಿಗಳಲ್ಲಿ 600+ ರನ್‌ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ 3ನೇ ಗರಿಷ್ಠ ಸ್ಕೋರ್‌

ಗುಜರಾತ್‌ ವಿರುದ್ಧ ಗಳಿಸಿದ 254 ರನ್‌, ಐಪಿಎಲ್‌ನಲ್ಲಿ ಆರ್‌ಸಿಬಿ ಗಳಿಸಿದ 3ನೇ ಗರಿಷ್ಠ ಸ್ಕೋರ್‌. 2013ರಲ್ಲಿ ಪುಣೆ ವಾರಿಯರ್ಸ್‌ ಇಂಡಿಯಾ ವಿರುದ್ಧ 5 ವಿಕೆಟ್‌ಗೆ 263 ರನ್‌ ಕಲೆಹಾಕಿದ್ದು ಈಗಲೂ ತಂಡದ ಗರಿಷ್ಠ ರನ್‌. 2024ರಲ್ಲಿ ಸನ್‌ರೈಸರ್ಸ್‌ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ವಿಕೆಟ್‌ಗೆ 262 ರನ್‌ ಗಳಿಸಿತ್ತು.

ಐಪಿಎಲ್‌ ಪ್ಲೇ-ಆಫ್‌ ಗರಿಷ್ಠ ರನ್‌ ದಾಖಲೆ!

ಐಪಿಎಲ್‌ ಪ್ಲೇ-ಆಫ್‌ ಪಂದ್ಯದಲ್ಲಿ ಗರಿಷ್ಠ ರನ್‌ ಕಲೆಹಾಕಿದ ತಂಡ ಎಂಬ ದಾಖಲೆಯನ್ನು ಆರ್‌ಸಿಬಿ ತನ್ನ ಹೆಸರಿಗೆ ಬರೆದುಕೊಂಡಿತು. ತಂಡ 5 ವಿಕೆಟ್‌ ನಷ್ಟದಲ್ಲಿ 254 ರನ್‌ ಕಲೆಹಾಕಿತು. 2023ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಮುಂಬೈ ವಿರುದ್ಧ ಗುಜರಾತ್‌ 3 ವಿಕೆಟ್‌ ನಷ್ಟದಲ್ಲಿ 233 ರನ್‌ ಗಳಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: RCB ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು!
RCB vs GT Qualifier 1: ಪ್ಲೇ ಆಫ್‌ ಇತಿಹಾಸದಲ್ಲೇ ಗರಿಷ್ಠ ಸ್ಕೋರ್‌ ದಾಖಲಿಸಿ, ಭರ್ಜರಿ ಗೆಲುವಿನೊಂದಿಗೆ ಫೈನಲ್‌ಗೇರಿದ ಆರ್‌ಸಿಬಿ