ಇಂದು ಸನ್‌ರೈಸರ್ಸ್‌ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್‌ ಎಲಿಮಿನೇಟರ್‌ ಫೈಟ್! ಸೋತರೇ ಟೂರ್ನಿಯಿಂದ ಔಟ್!

Kannadaprabha News   | Kannada Prabha
Published : May 27, 2026, 09:22 AM IST
SRH vs RR

ಸಾರಾಂಶ

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡ ಕ್ವಾಲಿಫೈಯರ್‌-2 ಪ್ರವೇಶಿಸಲಿದೆ. ಈ ಪಂದ್ಯವು ವೈಭವ್ ಸೂರ್ಯವಂಶಿ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟರ್‌ಗಳ ನಡುವಿನ ಸೆಣಸಾಟವಾಗಲಿದೆ.

ಮುಲ್ಲಾನ್‌ಪುರ: ಈ ಬಾರಿ ಐಪಿಎಲ್‌ನ ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ-ಆಫ್‌ ಪ್ರವೇಶಿಸಿರುವ ಮಾಜಿ ಚಾಂಪಿಯನ್‌ಗಳಾದ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಬುಧವಾರ ಎಲಿಮಿನೇಟರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದರಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡ ಕ್ವಾಲಿಫೈಯರ್‌-2 ಪ್ರವೇಶಿಸಿ, ಕ್ವಾಲಿಫೈಯರ್‌-1ರಲ್ಲಿ ಗೆದ್ದ ತಂಡದ ವಿರುದ್ಧ ಸೆಣಸಾಡಲಿದೆ. ಅದರಲ್ಲಿ ಗೆಲ್ಲುವ ತಂಡಕ್ಕೆ ಫೈನಲ್‌ ಟಿಕೆಟ್‌ ಸಿಗಲಿದೆ.

ಆರಂಭಿಕ 4 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಗೆದ್ದು ನಿಧಾನವಾಗಿ ಗೆಲುವಿನ ಹಳಿಗೆ ಮರಳಿದ್ದ ಸನ್‌ರೈಸರ್ಸ್‌, ಬಳಿಕ ಅಮೋಘ ಪ್ರದರ್ಶನ ನೀಡಿದೆ. ತಂಡ ಆಡಿರುವ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದು 18 ಅಂಕ ಗಳಿಸಿತ್ತು. ಅಗ್ರ-3 ತಂಡಗಳು ತಲಾ 18 ಅಂಕಗಳಿಸಿದ್ದರೂ, ನೆಟ್‌ ರನ್‌ರೇಟ್‌ ಕಡಿಮೆ ಇದ್ದ ಕಾರಣ ಸನ್‌ರೈಸರ್ಸ್‌ 3ನೇ ಸ್ಥಾನಿಯಾಗಿತ್ತು. ಮತ್ತೊಂದೆಡೆ, ರಾಜಸ್ಥಾನ ಆರಂಭಿಕ 4 ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿತ್ತು. ಬಳಿಕ 8 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು ಇನ್ನೇನು ಪ್ಲೇ-ಆಫ್‌ ರೇಸ್‌ನಿಂದಲೇ ಹೊರಬೀಳಲಿದೆ ಎಂಬಂತಿದ್ದಾಗ ಸತತ 2ರಲ್ಲಿ ಗೆದ್ದು ಎಲಿಮಿನೇಟರ್‌ ತಲುಪಿದೆ.

ಸ್ಫೋಟಕ ಬ್ಯಾಟರ್‌ಗಳ ಸೆಣಸು:

ಎಲಿಮಿನೇಟರ್‌ ಪಂದ್ಯ ಸ್ಫೋಟಕ ಬ್ಯಾಟರ್‌ಗಳ ನಡುವಿನ ಸೆಣಸಾಟ ಎಂದೇ ಪರಿಗಣಿಸಲಾಗುತ್ತಿದೆ. ಈ ಬಾರಿ ಗರಿಷ್ಠ ರನ್‌ ಸ್ಕೋರರ್‌ಗಳ ಪಟ್ಟಿಯಲ್ಲಿ ಅಗ್ರ 100 ಸ್ಥಾನಗಳಲ್ಲಿರುವ ಆಟಗಾರರ ಪೈಕಿ 200+ ಸ್ಟ್ರೈಕ್‌ರೇಟ್‌ ಹೊಂದಿರುವವರು 6 ಮಂದಿ. ಈ ಪೈಕಿ 220+ ಸ್ಟ್ರೈಕ್‌ರೇಟ್‌ ಇರುವ ಏಕೈಕ ಆಟಗಾರ ವೈಭವ್‌ ಸೂರ್ಯವಂಶಿ. ಅವರು 232.27ರ ಸ್ಟ್ರೈಕ್‌ರೇಟ್‌ನಲ್ಲಿ, ಕೇವಲ 251 ಎಸೆತಗಳಲ್ಲೇ 583 ರನ್‌ ಕಲೆಹಾಕಿದ್ದಾರೆ. 50 ಬೌಂಡರಿ, 53 ಸಿಕ್ಸರ್‌ ಸಿಡಿಸಿದ್ದಾರೆ. ಗರಿಷ್ಠ ಸ್ಕೋರ್‌ಗಳ ಪಟ್ಟಿಯಲ್ಲಿ ಅವರಿಗೆ 5ನೇ ಸ್ಥಾನ. ರಾಜಸ್ಥಾನ ಗೆಲ್ಲಬೇಕಿದ್ದರೆ ವೈಭವ್‌ ಬ್ಯಾಟ್‌ ಸದ್ದು ಮಾಡಬೇಕಿದ್ದು, ಧ್ರುವ್‌ ಜುರೆಲ್‌(458 ರನ್‌), ಯಶಸ್ವಿ ಜೈಸ್ವಾಲ್‌(397 ರನ್‌) ಕೂಡಾ ಅಬ್ಬರಿಸಬೇಕು.

ಮತ್ತೊಂದೆಡೆ ಸನ್‌ರೈಸರ್ಸ್‌ ತಂಡ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿದೆ. 606 ರನ್‌ ಗಳಿಸಿರುವ ಹೆನ್ರಿಚ್‌ ಕ್ಲಾಸೆನ್‌ ಟೂರ್ನಿಯ 3ನೇ ಗರಿಷ್ಠ ಸ್ಕೋರರ್‌. ಇಶಾನ್‌ ಕಿಶನ್‌ 569, ಅಭಿಷೇಕ್‌ ಶರ್ಮಾ 563, ಟ್ರ್ಯಾವಿಸ್‌ ಹೆಡ್‌ 393 ರನ್‌ ಕಲೆಹಾಕಿದ್ದಾರೆ. ಈ ನಾಲ್ವರೂ 155+ ಸ್ಟ್ರೈಕ್‌ರೇಟ್‌ ಹೊಂದಿದ್ದು, ರಾಜಸ್ಥಾನದ ಬೌಲಿಂಗ್‌ ಪಡೆಗೆ ಕಠಿಣ ಸವಾಲೊಡ್ಡಬಹುದು.

ಬೌಲರ್ಸ್‌ಗೆ ಕಠಿಣ ಸವಾಲು:

ಮುಲ್ಲಾನ್‌ಪುರದ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. ರಾಜಸ್ಥಾನ ತಂಡ ಜೋಫ್ರಾ ಆರ್ಚರ್‌ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದೆ. ಅವರು ಈ ವರ್ಷ ಐಪಿಎಲ್‌ನಲ್ಲಿ 21 ವಿಕೆಟ್‌ ಪಡೆದಿದ್ದು, 3ನೇ ಸ್ಥಾನದಲ್ಲಿದ್ದಾರೆ. ಪವರ್‌-ಪ್ಲೇ ಓವರ್‌ಗಳಲ್ಲಿ ಅವರ ಮಾರಕ ದಾಳಿ ಎದುರಿಸುವುದು ಅಭಿಷೇಕ್‌, ಹೆಡ್‌, ಇಶಾನ್‌ಗೆ ಪ್ರಮುಖ ಸವಾಲಾಗಬಹುದು. ಬ್ರಿಜೇಶ್‌ ಶರ್ಮಾ(13 ವಿಕೆಟ್‌), ನಂಡ್ರೆ ಬರ್ಗರ್‌(11 ವಿಕೆಟ್‌), ರವಿ ಬಿಷ್ಣೋಯ್‌(11 ವಿಕೆಟ್‌) ಯುವ ಸ್ಪಿನ್ನರ್‌ ಯಶ್‌ ರಾಜ್‌ ಪೂಂಜ(8 ವಿಕೆಟ್‌) ಕೂಡಾ ರಾಯಲ್ಸ್‌ಗೆ ನೆರವಾಗಬಲ್ಲರು.

ಇನ್ನು, ಸನ್‌ರೈಸರ್ಸ್‌ ತಂಡವೂ ಸಂಘಟಿತ ಬೌಲಿಂಗ್‌ ಪಡೆಯನ್ನು ಹೊಂದಿದೆ. ಎಶಾನ್‌ ಮಾಲಿಂಗ(19 ವಿಕೆಟ್) ಜೊತೆ ಸಾಕಿಬ್‌ ಹುಸೈನ್‌(15), ಪ್ರಫುಲ್‌ ಹಿಂದೆ(11) ಪ್ಯಾಟ್‌ ಕಮಿನ್ಸ್(8) ರಾಯಲ್ಸ್‌ನ ವೈಭವ್‌ ಆರ್ಭಟಕ್ಕೆ ಕಡಿವಾಣ ಹಾಕಬೇಕಿದೆ.

02 ಸೋಲು: ಈ ಬಾರಿ ಲೀಗ್‌ ಹಂತ 2 ಪಂದ್ಯಗಳಲ್ಲೂ ಸನ್‌ರೈಸರ್ಸ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ಸೋಲನುಭವಿಸಿದೆ.

ಮುಖಾಮುಖಿ: 23

ಸನ್‌ರೈಸರ್ಸ್‌: 14

ರಾಜಸ್ಥಾನ: 09

ಸಂಭವನೀಯ ಆಟಗಾರರು:

ಸನ್‌ರೈಸರ್ಸ್‌: ಅಭಿಷೇಕ್‌, ಟ್ರ್ಯಾವಿಸ್‌ ಹೆಡ್‌, ಇಶಾನ್‌ ಕಿಶನ್‌, ಕ್ಲಾಸೆನ್‌, ನಿತೀಶ್‌ ಕುಮಾರ್, ಸಲೀಲ್‌ ಅರೋರಾ, ಆರ್‌.ಸ್ಮರಣ್‌, ಪ್ಯಾಟ್‌ ಕಮಿನ್ಸ್(ನಾಯಕ), ಶಿವಾಂಗ್‌ ಕುಮಾರ್, ಎಶಾನ್‌, ಸಾಕಿಬ್‌ ಹುಸೈನ್‌, ಪ್ರಫುಲ್‌/ಹರ್ಷಲ್‌.

ರಾಜಸ್ಥಾನ: ಜೈಸ್ವಾಲ್‌, ವೈಭವ್‌, ಧ್ರುವ್‌ ಜುರೆಲ್‌, ರಿಯಾನ್‌ ಪರಾಗ್‌(ನಾಯಕ), ದಸುನ್‌ ಶಾನಕ, ಡೊನೊವನ್‌, ರವೀಂದ್ರ ಜಡೇಜಾ, ಆರ್ಚರ್‌, ಶುಭಂ ದುಬೆ, ನಂಡ್ರೆ ಬರ್ಗರ್‌, ಯಶ್‌ ರಾಜ್‌, ಬ್ರಿಜೇಶ್‌ ಶರ್ಮಾ.

ಪಿಚ್ ರಿಪೋರ್ಟ್‌

ಈ ಬಾರಿ ಮುಲ್ಲಾನ್‌ಪುರದಲ್ಲಿ 4 ಪಂದ್ಯಗಳು ನಡೆದಿವೆ. ಈ ಪೈಕಿ 5 ಇನ್ನಿಂಗ್ಸ್‌ಗಳಲ್ಲಿ 215+ ರನ್‌ ದಾಖಲಾಗಿದೆ. ಇದರಲ್ಲಿ ಲಖನೌ ವಿರುದ್ಧ ಪಂಜಾಬ್‌ ಗಳಿಸಿದ 254 ರನ್‌ ಕೂಡಾ ಒಳಗೊಂಡಿದೆ. ಅಂಕಿಅಂಶ ಗಮನಿಸಿದರೆ ಮತ್ತೊಮ್ಮೆ ಇಲ್ಲಿ ರನ್ ಪ್ರವಾಹ ಹರಿಯಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಆರ್‌ಸಿಬಿ 2ನೇ ಕಪ್‌ ಗೆಲ್ಲಲು ಇನ್ನೊಂದೇ ಹೆಜ್ಜೆ! ಬೆಂಗಳೂರು ಆರ್ಭಟಕ್ಕೆ ಗುಜರಾತ್ ಧೂಳೀಪಟ
IPL 2026: RCB ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು!