
ಅಬು ಧಾಬಿ: ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಈ ಬಾರಿ ಐಪಿಎಲ್ ಮಿನಿ ಹರಾಜಿನಲ್ಲಿ ನಿರೀಕ್ಷೆಯಂತೆಯೇ ಬಂಪರ್ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಅವರನ್ನು ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಬರೋಬ್ಬರಿ ₹25.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಜೊತೆಗೆ ಶ್ರೀಲಂಕಾದ ವೇಗಿ ಮಥೀಶ ಪತಿರನ ಕೂಡಾ ಜಾಕ್‌ಪಾಟ್ ಹೊಡೆದಿದ್ದು, ಬರೋಬ್ಬರಿ ₹18 ಕೋಟಿಗೆ ಕೋಲ್ಕತಾ ಪಾಲಾಗಿದ್ದಾರೆ.
ಬುಧವಾರ ಅಬು ಧಾಬಿಯಲ್ಲಿ 19ನೇ ಆವೃತ್ತಿಯ ಐಪಿಎಲ್‌ನ ಮಿನಿ ಹರಾಜು ಪ್ರಕ್ರಿಯೆ ನಡೆಯಿತು. ಎಲ್ಲಾ ಫ್ರಾಂಚೈಸಿಗಳು ಕಳೆದ ಬಾರಿ ಇದ್ದ ಬಹುತೇಕ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದ್ದರಿಂದ ಖಾಲಿ ಇದ್ದ ಕೆಲ ಸ್ಥಾನಗಳನ್ನಷ್ಟೇ ಹರಾಜಿನಲ್ಲಿ ತುಂಬಿಸಿಕೊಂಡಿತು. ಒಟ್ಟು 359 ಆಟಗಾರರು ನೋಂದಾಯಿಸಿದ್ದರೂ, ಮಧ್ಯಾಹ್ನದಿಂದ ರಾತ್ರಿ 9.15ರ ವರೆಗೆ ನಡೆದ ಹರಾಜಿನಲ್ಲಿ 29 ವಿದೇಶಿಗರು ಸೇರಿದಂತೆ 77 ಆಟಗಾರರು 10 ತಂಡಗಳಿಗೆ ಮಾರಾಟಗೊಂಡರು. ತಂಡಗಳು ಒಟ್ಟು ₹215.45 ಕೋಟಿ ಖರ್ಚು ಮಾಡಿದವು.
ಈ ಬಾರಿ ಹರಾಜಿನಲ್ಲಿ ಭಾರತೀಯರಿಗೆ ಅದರಲ್ಲೂ ಅನ್‌ಕ್ಯಾಪ್ಡ್(ಅಂತಾರಾಷ್ಟ್ರೀಯ ಪಂದ್ಯ ಆಡದ) ಆಟಗಾರರಿಗೆ ಭಾರೀ ಬೇಡಿಕೆ ಕಂಡು ಬಂತು. ಹರಾಜಾದ 77 ಆಟಗಾರರ ಪೈಕಿ 40 ಮಂದಿ ಅನ್‌ಕ್ಯಾಪ್ಡ್ ಆಟಗಾರರೇ ಇದ್ದಾರೆ. 20 ವರ್ಷದ ಸ್ಪಿನ್ನರ್ ಪ್ರಶಾಂತ್ ವೀರ್, 19 ವರ್ಷದ ಸ್ಫೋಟಕ ಆಟಗಾರ ಕಾರ್ತಿಕ್ ಶರ್ಮಾ, 29 ವರ್ಷದ ಜಮ್ಮು-ಕಾಶ್ಮೀರ ವೇಗಿ ಆಖಿಬ್ ನಬಿ(ಡೆಲ್ಲಿ ಕ್ಯಾಪಿಟಲ್ಸ್-8.40 ಕೋಟಿ ರು.) ಸೇರಿ ಪ್ರಮುಖರು ಹರಾಜಾದರು. ಅಲ್ಲದೆ, ಭಾರತದ ತಾರಾ ಆಟಗಾರರಾದ ಪೃಥ್ವಿ ಶಾ(₹75 ಲಕ್ಷ) ಡೆಲ್ಲಿ ತಂಡದ ಪಾಲಾದರೆ, ಸರ್ಫರಾಜ್ ಖಾನ್(₹75 ಲಕ್ಷ) ಚೆನ್ನೈ ಸೇರ್ಪಡೆಗೊಂಡರು. ಕಳೆದ ಬಾರಿ ಕೋಲ್ಕತಾ ಪರ ಆಡಿದ್ದ ವೆಂಕಟೇಶ್ ಅಯ್ಯರ್‌ರನ್ನು ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ₹7 ಕೋಟಿ ನೀಡಿ ಖರೀದಿಸಿತು.
ಗ್ರೀನ್ 25.20 ಕೋಟಿ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. 2023ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಬರೋಬ್ಬರಿ 24.75 ಕೋಟಿ ರು. ನೀಡಿ ಮಿಚೆಲ್ ಸ್ಟಾರ್ಕ್‌ರನ್ನು ಖರೀದಿಸಿದ್ದು ಈವರೆಗಿನ ದಾಖಲೆ ಎನಿಸಿಕೊಂಡಿತ್ತು.
ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ 8 ಮಂದಿಯನ್ನು ಖರೀದಿಸಿತು. ವೆಂಕಟೇಶ್ ಅಯ್ಯರ್ ₹7 ಕೋಟಿ, ಮಂಗೇಶ್ ಯಾದವ್ ₹5.20 ಕೋಟಿ, ನ್ಯೂಜಿಲೆಂಡ್‌ನ ಜೇಕಬ್ ಡಫಿ ₹2 ಕೋಟಿ, ಇಂಗ್ಲೆಂಡ್‌ನ ಜಾರ್ಡನ್ ಕಾಕ್ಸ್ ₹75 ಲಕ್ಷ, ಕನಿಷ್ಕ್ ಚೌಹಾನ್, ವಿಹಾನ್ ಮಲ್ಹೋತ್ರ, ವಿಕ್ಕಿ ಓಸ್ವಾಲ್ ಹಾಗೂ ಸಾತ್ವಿಕ್ ದೇಸ್ವಾಲ್ ತಲಾ ₹30 ಲಕ್ಷಕ್ಕೆ ಆರ್‌ಸಿಬಿ ಸೇರ್ಪಡೆಗೊಂಡರು.
ಸಿಎಸ್‌ಕೆ ತಂಡ ಹಿಂದಿನಿಂದಲೂ ಹಿರಿಯ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಳ್ಳುತ್ತಿತ್ತು. ಇದು ಟ್ರೋಲ್‌ಗೆ ಗುರಿಯಾಗಿದ್ದೂ ಇದೆ. ಆದರೆ ಕಳೆದೆರಡು ಆವೃತ್ತಿಗಳಿಂದ ತಂಡ ಯುವ ಆಟಗಾರರಿಗೆ ಹೆಚ್ಚಿನ ಮಣೆ ಹಾಕುತ್ತಿದೆ. ಈ ಮೂಲಕ ತಂಡ ಡ್ಯಾಡ್ ಆರ್ಮಿಯಿಂದ ಯಂಗ್ ಆರ್ಮಿಯಾಗಿ ಬದಲಾಗುತ್ತಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ತಂಡದಲ್ಲಿ ಈಗ 18 ವರ್ಷದ ಆಯುಶ್ ಮ್ಹಾತ್ರೆ, 19 ವರ್ಷದ ಕಾರ್ತಿಕ್ ಶರ್ಮಾ, 20 ವರ್ಷದ ಪ್ರಶಾಂತ್ ವೀರ್, ನೂರ್ ಅಹ್ಮದ್, 22 ವರ್ಷದ ಡೆವಾಲ್ಡ್ ಬ್ರೆವಿಸ್ ಇದ್ದಾರೆ. ಜೊತೆಗೆ ಅನ್ಶುಲ್ ಕಂಬೋಜ್, ಸರ್ಫರಾಜ್ ಖಾನ್, ರಾಮಕೃಷ್ಣ ಘೋಷ್ ಕೂಡಾ ತಂಡದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.