ವೆಂಕಟೇಶ್ ಅಯ್ಯರ್‌ಗೆ ನಂ.3 ಸ್ಲಾಟ್ ಫಿಕ್ಸ್; ಮುಂಬರುವ ಐಪಿಎಲ್‌ಗೆ ಆರ್‌ಸಿಬಿ ಬಲಿಷ್ಠ ಆಡುವ ಹನ್ನೊಂದರ ಬಳಗ ಹೀಗಿರಲಿದೆ!

Published : Dec 18, 2025, 04:54 PM IST
RCB

ಸಾರಾಂಶ

2026ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್ ಮತ್ತು ಜೇಕಬ್ ಡಫಿ ಅವರಂತಹ ಪ್ರಮುಖ ಆಟಗಾರರನ್ನು ಖರೀದಿಸಿದೆ. ಈ ಹೊಸ ಸೇರ್ಪಡೆಗಳಿಂದ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಬಲಿಷ್ಠಗೊಂಡಿದ್ದು, ಮುಂಬರುವ ಐಪಿಎಲ್‌ಗೆ ಸಂಭಾವ್ಯ ಆಡುವ 11ರ ಬಳಗವನ್ನು ರೂಪಿಸಲಾಗಿದೆ.

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಆರ್‌ಸಿಬಿ ಫ್ರಾಂಚೈಸಿಯು ಮಧ್ಯ ಪ್ರದೇಶ ಮೂಲದ ಟೀಂ ಇಂಡಿಯಾ ಇಂಡಿಯಾ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರುಪಾಯಿಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಉತ್ತರ ಪ್ರದೇಶ ಮೂಲದ ಎಡಗೈ ವೇಗಿ ಮಂಗೇಶ್ ಯಾದವ್‌ಗೆ 5.2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದಾದ ಬಳಿಕ ಆರ್‌ಸಿಬಿ ಫ್ರಾಂಚೈಸಿಯು ನ್ಯೂಜಿಲೆಂಡ್‌ನ ನೀಳಕಾಯದ ವೇಗಿ ಜೇಕಬ್ ಡಫಿಯನ್ನು ಕೇವಲ 2 ಕೋಟಿ ರುಪಾಯಿಗೆ ಖರೀದಿಸಿತು. ಈ ಮೂಲಕ ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಬಲಿಷ್ಠ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನಂ.3 ಸ್ಲಾಟ್‌ಗೆ ವೆಂಕಟೇಶ್ ಅಯ್ಯರ್ ಫಿಕ್ಸ್

ಮುಂಬರುವ ಐಪಿಎಲ್ ಟೂರ್ನಿಯಲ್ಲೂ ಆರ್‌ಸಿಬಿ ಪರ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಸಾಲ್ಟ್ ಹಾಗೂ ಕೊಹ್ಲಿ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ಪೋಟಕ ಆರಂಭ ಒದಗಿಸಿಕೊಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಮೂರನೇ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್‌ ಈ ಬಾರಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿಕೊಂಡಿದೆ.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ರಜತ್ ಪಾಟೀದಾರ್ ಕಣಕ್ಕಿಳಿಯಲಿದ್ದಾರೆ. ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕ್ರಮವಾಗಿ ಐದು ಹಾಗೂ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯಲಿದ್ದಾರೆ. ಇನ್ನು ರೊಮ್ಯಾರಿಯೋ ಶೆಫರ್ಡ್ ಹಾಗೂ ಕೃನಾಲ್ ಪಾಂಡ್ಯ ಆರ್‌ಸಿಬಿ ಪರ ಏಳು ಹಾಗೂ ಎಂಟನೇ ಕ್ರಮಾಂಕದಲ್ಲಿ ರನ್ ಮಳೆ ಹರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಆರ್‌ಸಿಬಿ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠ:

ಇನ್ನು ಆರ್‌ಸಿಬಿ ಬೌಲಿಂಗ್ ವಿಭಾಗವು ಕಳೆದ ಬಾರಿಯ ಐಪಿಎಲ್‌ನಲ್ಲಿಯೇ ಸಾಕಷ್ಟು ಅಪಾಯಕಾರಿ ಬೌಲಿಂಗ್ ಪಡೆ ಎನಿಸಿಕೊಂಡಿತ್ತು. ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದರೆ, ಯಶ್ ದಯಾಳ್ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದರು. ಇದೀಗ ಆರ್‌ಸಿಬಿ ತಂಡದ ಬಳಿ ವಿಶ್ವ ಐಸಿಸಿ ಟಿ20 ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಜೇಕಬ್ ಡಫಿ ಹಾಗೂ ಎಡಗೈ ವೇಗಿ ಮಂಗೇಶ್ ಯಾದವ್ ಸೇರ್ಪಡೆ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತಂದು ಕೊಟ್ಟಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಹಾಗೂ ಸುಯಾಶ್ ಶರ್ಮಾ ಅವರ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.

2026ರ ಐಪಿಎಲ್‌ಗೆ ಆರ್‌ಸಿಬಿ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೀಗಿದೆ ನೋಡಿ

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ರಜತ್ ಪಾಟೀದಾರ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಮತ್ತೆ ಘರ್ಜಿಸಲು ರೆಡಿಯಾದ RCB ಐದು ಹುಲಿಗಳಿವು!
14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ