ಐಪಿಎಲ್ ಹರಾಜು: ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗ ಪ್ರಶಾಂತ್‌ಗೆ 14.2 ಕೋಟಿ ಸಂಬಳ!

Naveen Kodase, Kannadaprabha News |   | Kannada Prabha
Published : Dec 18, 2025, 09:22 AM IST
Prashant Veer

ಸಾರಾಂಶ

ಉತ್ತರ ಪ್ರದೇಶದ ಯುವ ಕ್ರಿಕೆಟಿಗ ಪ್ರಶಾಂತ್ ವೀರ್, ಶಿಕ್ಷಕ ತಂದೆಯ ಕಡಿಮೆ ಸಂಬಳ ಮತ್ತು ಅಜ್ಜನ ಪಿಂಚಣಿ ಹಣದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅವರನ್ನು ₹14.20 ಕೋಟಿಗೆ ಖರೀದಿಸುವುದರೊಂದಿಗೆ, ಅವರ ಬದುಕು ರಾತ್ರೋರಾತ್ರಿ ಬದಲಾಗಿದೆ.

ಮುಂಬೈ: ನೂರಾರು ಕ್ರಿಕೆಟಿಗರ ಬದುಕು ಬದಲಿಸಿರುವ ಐಪಿಎಲ್‌, ಈ ಬಾರಿಯೂ ಕೆಲ ಪ್ರತಿಭಾವಂತ ಯುವ ಕ್ರಿಕೆಟಿಗರ ಪಾಲಿಗೆ ಬೆಳಕಾಗಿದೆ. ಶಿಕ್ಷಕ ತಂದೆಯ ವೇತನ, ಅಜ್ಜನ ಪಿಂಚಣಿ ಹಣದಿಂದಲೇ ತನ್ನ ಕ್ರಿಕೆಟ್‌ ಖರ್ಚನ್ನು ನಿಭಾಯಿಸುತ್ತಿದ್ದ ಉತ್ತರ ಪ್ರದೇಶದ ಯುವ ಕ್ರಿಕೆಟಿಗ ಪ್ರಶಾಂತ್‌ ವೀರ್‌ ಬದುಕು ಕೂಡಾ ಐಪಿಎಲ್‌ನಿಂದಲೇ ಬದಲಾಗಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.

ಬುಧವಾರ ನಡೆದ ಹರಾಜಿನಲ್ಲಿ ಪ್ರಶಾಂತ್‌ ವೀರ್‌ಗೆ ಸಿಕ್ಕಿದ್ದು ಬರೋಬ್ಬರಿ ₹14.20 ಕೋಟಿ. ಏಕಕಾಲಕ್ಕೆ ಉತ್ತರ ಪ್ರದೇಶ ಹಿರಿಯರ ತಂಡ ಹಾಗೂ ಅಂಡರ್‌-23 ತಂಡದ ಪರ ಆಡುತ್ತಿದ್ದ 20 ವರ್ಷದ ಆಲ್ರೌಂಡರ್‌ ಪ್ರಶಾಂತ್‌ರನ್ನು ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಖರೀದಿಸಿದೆ.

ಪ್ರಶಾಂತ್‌ ತಂದೆ ಶಾಲಾ ಶಿಕ್ಷಕರಾಗಿದ್ದು, ತಿಂಗಳಿಗೆ ಕೇವಲ 12 ಸಾವಿರ ವೇತನವಿದೆ. ತನ್ನ ಅಜ್ಜ ನಿಧನವಾಗುವವರೆಗೂ, ಅವರ ಪಿಂಚಣಿ ಹಣದಿಂದಲೇ ಪ್ರಶಾಂತ್‌ ತಮ್ಮ ಕ್ರಿಕೆಟ್‌ ಖರ್ಚನ್ನು ನಿಭಾಯಿಸುತ್ತಿದ್ದರು. ತಮ್ಮ ಆಲ್ರೌಂಡ್‌ ಆಟದ ಮೂಲಕ ರವೀಂದ್ರ ಜಡೇಜಾ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿದ್ದ ಪ್ರಶಾಂತ್‌ ಪ್ರತಿಭೆಗೆ ಮಿನಿ ಹರಾಜಿನಲ್ಲಿ ಭರ್ಜರಿ ಫಲ ಸಿಕ್ಕಿದೆ.

‘ಇದು ಕನಸಿನಂತೆ ಭಾಸವಾಗುತ್ತಿದೆ. ದೊಡ್ಡ ಮೊತ್ತಕ್ಕೆ ಹರಾಜಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಕುಟುಂಬ ಈವರೆಗೂ ಇಷ್ಟೊಂದು ಹಣ ನೋಡಿಲ್ಲ. ಈ ಹಣದಿಂದ ಏನು ಮಾಡಬೇಕೆಂದು ತೋಚುತ್ತಿಲ್ಲ. ಅದನ್ನು ಇನ್ನು ನನ್ನ ಕುಟುಂಬ ನಿರ್ಧರಿಸುತ್ತದೆ’ ಎಂದು ಪ್ರಶಾಂತ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸರ್ಫರಾಜ್‌, ಪೃಥ್ವಿ ಶಾಗೆ ಐಪಿಎಲ್‌ನಲ್ಲಿ ಮರುಜನ್ಮ

ಈ ಬಾರಿ ಐಪಿಎಲ್‌ ಮೂಲಕ ಕೆಲ ಆಟಗಾರರಿಗೆ ಪುನರ್ಜನ್ಮ ಸಿಕ್ಕಂತಾಗಿದೆ. ಅದರಲ್ಲಿ ಪ್ರಮುಖರು ಸರ್ಫರಾಜ್‌ ಖಾನ್‌ ಹಾಗೂ ಪೃಥ್ವಿ ಶಾ. ಪ್ರತಿಭಾವಂತ ಕ್ರಿಕೆಟಿಗನಾಗಿದ್ದರೂ ಭಾರತ ತಂಡದಿಂದ ಹೊರಗುಳಿದಿರುವ ಮುಂಬೈನ ಸರ್ಫರಾಜ್‌, ಕಳೆದೆರಡು ವರ್ಷಗಳಲ್ಲಿ ಐಪಿಎಲ್‌ನಲ್ಲೂ ಆಡಿಲ್ಲ. ಅವರನ್ನು ಖರೀದಿಸಲು ಯಾವ ತಂಡವೂ ಆಸಕ್ತಿ ತೋರಿರಲಿಲ್ಲ. ಈ ಬಾರಿ ಹರಾಜಿನಲ್ಲಿ ಅವರು ಹೆಸರು ಬಂದಾಗಲೂ ಖರೀದಿಗೆ ಯಾವ ತಂಡವೂ ಮುಂದಾಗಲಿಲ್ಲ. ಅನ್‌ಸೋಲ್ಡ್‌ ಪಟ್ಟಿ ಸೇರ್ಪಡೆಗೊಂಡರು. ಇದರೊಂದಿಗೆ ಸರ್ಫರಾಜ್‌ ಐಪಿಎಲ್‌ ಬದುಕು ಮುಕ್ತಾಯವಾಯಿತು ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ 2ನೇ ಬಾರಿ ಹೆಸರು ಬಂದಾಗ ಚೆನ್ನೈ ತಂಡ ಮೂಲಬೆಲೆ ₹75 ಲಕ್ಷಕ್ಕೆ ಸರ್ಫರಾಜ್‌ರನ್ನು ಖರೀದಿಸಿತು. 

ಪೃಥ್ವಿಗೂ ಮರುಜನ್ಮ ನೀಡಿದ ಮಿನಿ ಹರಾಜು

ಮತ್ತೊಂದೆಡೆ ಪೃಥ್ವಿ ಶಾ ಕೂಡಾ ಈ ಬಾರಿ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದರು. ಕಳೆದ ವರ್ಷ ಐಪಿಎಲ್‌ನಿಂದ ಹೊರಗಿದ್ದ ಪೃಥ್ವಿ, ಈ ಬಾರಿಯೂ ಟೂರ್ನಿಗೆ ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ 2ನೇ ಬಾರಿ ಹರಾಜಿಗೆ ಹೆಸರು ಕೂಗಿದಾಗ ಅವರ ಮೂಲಬೆಲೆ ₹75 ಲಕ್ಷಕ್ಕೆ ಡೆಲ್ಲಿ ತಂಡ ತನ್ನ ತೆಕ್ಕೆಗೆ ಪಡೆದುಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?