
ಮುಂಬೈ(ಮೇ.10): ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪೋಟಕ ಅರ್ಧಶತಕದ ಹೊರತಾಗಿಯೂ, ಬೌಲರ್‌ಗಳ ನೀರಸ ಪ್ರದರ್ಶನದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ಎದುರು ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಆರ್‌ಸಿಬಿ ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಬಗ್ಗೆ ಕಿಡಿಕಾರಿದ್ದಾರೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ ಆರ್‌ಸಿಬಿ 20 ಓವರಲ್ಲಿ 6 ವಿಕೆಟ್ಗೆ 199 ರನ್ ಕಲೆಹಾಕಿತು. ಆದರೆ ದೊಡ್ಡ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು ಕೇವಲ 16.3 ಓವರ್ಗಳಲ್ಲೇ ಬೆನ್ನತ್ತಿತು. ಇಶಾನ್ 21 ಎಸೆತದಲ್ಲಿ 42 ರನ್ ಸಿಡಿಸಿ ಔಟಾದ ಬಳಿಕ ಸೂರ್ಯಕುಮಾರ್(35 ಎಸೆತಗಳಲ್ಲಿ 83) ಹಾಗೂ ನೇಹಲ್ ವಧೇರಾ(34 ಎಸೆತಗಳಲ್ಲಿ 52) 3ನೇ ವಿಕೆಟ್ಗೆ ಬರೋಬ್ಬರಿ 140 ರನ್ ಜೊತೆಯಾಟವಾಡಿ ತಂಡಕ್ಕೆ ಇನ್ನೂ 21 ಎಸೆತ ಬಾಕಿ ಇರುವಂತೆ ಗೆಲುವು ತಂದುಕೊಟ್ಟರು.
ಮತ್ತೆ ಮ್ಯಾಕ್ಸಿ, ಪ್ಲೆಸಿ ಶೋ: 3ನೇ ಓವರ್ ಮುಕ್ತಾಯಕ್ಕೂ ಮುನ್ನವೇ ಕೊಹ್ಲಿ(01), ಅನುಜ್(06)ರನ್ನು ಕಳೆದುಕೊಂಡರೂ ಆರ್ಸಿಬಿಯನ್ನು ಡು ಪ್ಲೆಸಿ(41 ಎಸೆತಲ್ಲಿ 65) ಹಾಗೂ ಮ್ಯಾಕ್ಸ್‌ವೆಲ್(33 ಎಸೆತದಲ್ಲಿ 68) ಕುಸಿಯದಂತೆ ನೋಡಿಕೊಂಡರು. ಮುಂಬೈ ಬೌಲರ್ಗಳನ್ನು ಚೆಂಡಾಡಿದ ಈ ಜೋಡಿ 3ನೇ ವಿಕೆಟ್ಗೆ 136 ರನ್ ಜೊತೆಯಾಟವಾಡಿತು. ಆದರೆ ಇವರಿಬ್ಬರ ಜೊತೆಗೆ ಲೊಮ್ರೊರ್ನ್ನು ಕೇವಲ 10 ರನ್ ಅಂತರದಲ್ಲಿ ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೊಳಗಾಯಿತು. ಕಾರ್ತಿಕ್(30) ಆಟ ತಂಡವನ್ನು 200 ಸನಿಹಕ್ಕೆ ತಲುಪಿಸಿತು.
ಇನ್ನು ಆರ್‌ಸಿಬಿ ತಂಡವು ಹೀನಾಯ ಸೋಲು ಅನುಭವಿಸುತ್ತಿದ್ದಂತೆಯೇ ನೆಟ್ಟಿಗರು ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಹಾಗೂ ಆರ್‌ಸಿಬಿ ತಂಡವನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಆರ್‌ಸಿಬಿ ತಂಡವು ಕೇವಲ ಮೂವರು ಬ್ಯಾಟರ್ ಹಾಗೂ ಒಬ್ಬ ಬೌಲರ್‌ನೊಂದಿಗೆ ಕಣಕ್ಕಿಳಿಯುತ್ತಿದೆ ಎಂದು ನೆಟ್ಟಿಗರು ಈ ಹಿಂದಿನಿಂದಲೂ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಸಿರಾಜ್ ಹೊರತುಪಡಿಸಿ ಉಳಿದ್ಯಾವ ಬೌಲರ್‌ಗಳು ಪರಿಣಾಮಕಾರಿಯಾಗುತ್ತಿಲ್ಲ. ಹೀಗಿದ್ದೂ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮುಂದಾಗುತ್ತಿಲ್ಲ.
ಸದ್ಯ ಫಾಫ್ ನೇತೃತ್ವದ ಆರ್‌ಸಿಬಿ ತಂಡವು 11 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 6 ಸೋಲು ಸಹಿತ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಾರಿದೆ. ಇದೀಗ ಆರ್‌ಸಿಬಿ ಇನ್ನುಳಿದ 3 ಪಂದ್ಯಗಳನ್ನು ರಾಜಸ್ಥಾನ, ಹೈದ್ರಾಬಾದ್ ಹಾಗೂ ಬಲಿಷ್ಠ ಗುಜರಾತ್ ವಿರುದ್ಧ ಆಡಬೇಕಿದೆ. ತಂಡದ ನೆಟ್ ರನ್ರೇಟ್ ಕೂಡಾ ತೀರಾ ಕಡಿಮೆ ಇರುವ ಕಾರಣ ಈ ಎಲ್ಲಾ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಜೊತೆಗೆ ಇತರೆ ತಂಡಗಳ ಫಲಿತಾಂಶ ಕೂಡಾ ತನ್ನ ಪರವಾಗಿ ಬಂದರಷ್ಟೇ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.