
ಚೆನ್ನೈ(ಮೇ.10): 16ನೇ ಆವೃತ್ತಿ ಐಪಿಎಲ್ನ ಪ್ಲೇ-ಆಫ್ ಸ್ಥಾನಕ್ಕೆ ಮತ್ತಷ್ಟುಹತ್ತಿರವಾಗಲು ಎದುರು ನೋಡುತ್ತಿರುವ 4 ಬಾರಿ ಚಾಂಪಿಯನ್ ಚೆನ್ನೈ, ನಿರ್ಣಾಯಕ ಪಂದ್ಯದಲ್ಲಿ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡು ಅಂಕ ಹಂಚಿಕೆಯಾಗಿರುವ ಕಾರಣ ಚೆನ್ನೈಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದ್ದು, ಸೋತರೆ ಪ್ಲೇ-ಆಫ್ ಹಾದಿ ಕಠಿಣಗೊಳ್ಳಲಿದೆ. ಅತ್ತ ಡೆಲ್ಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದ್ದು, ಸೋತರೆ ತಂಡದ ನಾಕೌಟ್ ಹಾದಿ ಬಂದ್ ಆಗುವುದು ಖಚಿತ.
ಸದ್ಯ ಚೆನ್ನೈ ಆಡಿದ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದು, 13 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಬುಧವಾರದ ಪಂದ್ಯ ಸೇರಿದಂತೆ ಉಳಿದ ಮೂರು ಪಂದ್ಯಗಳನ್ನು ಗೆದ್ದರೆ 19 ಅಂಕಗಳಾಗಲಿದ್ದು, ಪ್ಲೇ-ಆಫ್ಗೇರಲಿದೆ. ಆದರೆ ಡೆಲ್ಲಿ 10ಪಂದ್ಯಗಳಲ್ಲಿ 8 ಅಂಕಗಳಿಸಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದ್ದು, ಈ ಪಂದ್ಯದಲ್ಲಿ ಗೆದ್ದರಷ್ಟೇ ರೇಸ್ನಲ್ಲಿ ಉಳಿಯಲಿದೆ.
ಡೆಲ್ಲಿ ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಭರ್ಜರಿ ಗೆಲುವಿನ ಆತ್ಮವಿಶ್ವಾಸದಲ್ಲಿದ್ದರೂ ಚೆನ್ನೈನ ಪಿಚ್ನಲ್ಲಿ ತಂಡಕ್ಕೆ ಸವಾಲು ಎದುರಾಗಬಹುದು. ರವೀಂದ್ರ ಜಡೇಜಾ, ಮೋಯಿನ್ ಅಲಿ, ಮಹೀಶ್ ತೀಕ್ಷಣ ಅವರನ್ನೊಳಗೊಂಡ ಸ್ಪಿನ್ ಪಡೆಯನ್ನು ಡೆಲ್ಲಿಯ ಬ್ಯಾಟರ್ಗಳು ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲವಿದೆ. ಮತ್ತೊಂದೆಡೆ ಸ್ಫೋಟಕ ಬ್ಯಾಟರ್ಗಳ ದಂಡನ್ನೇ ಹೊಂದಿರುವ ಚೆನ್ನೈ, ತವರಿನ ಅಂಗಳದಲ್ಲಿ ಮತ್ತೊಮ್ಮೆ ಅಬ್ಬರಿಸುವ ಕಾತರದಲ್ಲಿದ್ದಾರೆ.
IPL 2023 ಬೃಹತ್ ಮೊತ್ತ ಸಿಡಿಸಿದರೂ ಆರ್‌ಸಿಬಿಗೆ ಸೋಲು, ಪ್ಲೇ ಆಫ್‌ಗೆ ಇದೆಯಾ ಅವಕಾಶ?
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಸ್ಪಷ್ಟ ಮೇಲುಗೈ ಸಾಧಿಸಿದೆ. 27 ಪಂದ್ಯಗಳ ಪೈಕಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್, ಮೋಯಿನ್ ಅಲಿ, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ(ನಾಯಕ), ದೀಪಕ್ ಚಹರ್, ಮತೀಶ್ ಪತಿರನ, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್(ನಾಯಕ), ಫಿಲ್ ಸಾಲ್ಟ್, ಮನೀಶ್ ಪಾಂಡೆ, ರಿಲೇ ರೊಸ್ಸೌ, ಪ್ರಿಯಂ ಗರ್ಗ್, ಅಕ್ಷರ್ ಪಟೇಲ್, ರಿಪಲ್ ಪಟೇಲ್, ಅಮನ್ ಖಾನ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಖಲೀಲ್ ಅಹಮ್ಮದ್.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚೆಪಾಕ್ ಕ್ರೀಡಾಂಗಣದ ಪಿಚ್ ಈ ಬಾರಿ ದೊಡ್ಡ ಹಾಗೂ ಸಣ್ಣ ಮೊತ್ತದ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಕೆಲವೊಮ್ಮೆ ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡಿದರೂ ಬ್ಯಾಟರ್ಗಳು ಅಬ್ಬರಿಸಿದ ಉದಾಹರಣೆಯೇ ಹೆಚ್ಚು. ಕಳೆದ 3 ಪಂದ್ಯದಲ್ಲೂ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.