ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಈ ಮೂವರು ಆಟಗಾರರನ್ನು ಕೈಬಿಟ್ಟು ಮಹಾ ಎಡವಟ್ಟು ಮಾಡಿಕೊಂಡಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ಆರಂಭವಾಗಿವೆ. ಇದೀಗ ಐಪಿಎಲ್ ಮೆಗಾ ಹರಾಜಿಗೂ ದಿನಾಂಕ ನಿಗದಿಯಾಗಿದ್ದು, ಮುಂಬರುವ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪರ್ಸ್‌ನಲ್ಲಿ ಇನ್ನುಳಿದ ಹಣ ಇಟ್ಟುಕೊಂಡು ಹರಾಜಿನಲ್ಲಿ ಪಾಲ್ಗೊಳ್ಳಲು ಸಜ್ಜಾಗಿವೆ.
ಇನ್ನು ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ ಮೂರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿದೆ. ವಿರಾಟ್ ಕೊಹ್ಲಿಗೆ 21 ಕೋಟಿ ರುಪಾಯಿ, ರಜತ್ ಪಾಟೀದಾರ್‌ಗೆ 11 ಕೋಟಿ ರುಪಾಯಿ ಹಾಗೂ ಯಶ್ ದಯಾಳ್‌ಗೆ 5 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ಈ ಮೂರು ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದಕ್ಕೆ ಆರ್‌ಸಿಬಿ ಫ್ರಾಂಚೈಸಿ 37 ಕೋಟಿ ರುಪಾಯಿ ಖರ್ಚು ಮಾಡಿದೆ. ಇದೀಗ ಹರಾಜಿಗೆ 83 ಕೋಟಿ ರುಪಾಯಿ ಪರ್ಸ್‌ನಲ್ಲಿ ಉಳಿಸಿಕೊಂಡಿದೆ.
undefined
ಎಲ್ಲಾ ಫ್ರಾಂಚೈಸಿಗಳಿಗೆ ನೀಡಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಗರಿಷ್ಠ ಆರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಆರ್‌ಸಿಬಿ ಕೇವಲ ಮೂರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿದೆ. ಇನ್ನು ತಂಡದಲ್ಲಿರುವ ಈ ಮೂವರು ಆಟಗಾರರನ್ನು ಕೈಬಿಟ್ಟು ಆರ್‌ಸಿಬಿ ಮಹಾ ಎಡವಟ್ಟು ಮಾಡಿಕೊಂಡಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಯಾರು ಆ ಆಟಗಾರರು ನೋಡೋಣ ಬನ್ನಿ.
ಐಪಿಎಲ್ ಮೆಗಾ ಹರಾಜಿನಲ್ಲಿ ಈ 5 ಆಟಗಾರರ ಮೇಲೆ ಹದ್ದಿನಗಣ್ಣಿಟ್ಟಿರುವ ಆರ್‌ಸಿಬಿ!
1. ವಿಲ್ ಜ್ಯಾಕ್ಸ್:
ಆರ್‌ಸಿಬಿ ತಂಡದ ಸ್ಪೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಅವರನ್ನು ತಂಡದಿಂದ ರಿಲೀಸ್ ಮಾಡಿರುವುದು ಬೆಂಗಳೂರು ಅಭಿಮಾನಿಗಳನ್ನು ಸಾಕಷ್ಟು ಅಚ್ಚರಿಗೀಡಾಗುವಂತೆ ಮಾಡಿದೆ. ಆಡಿದ ಕೇವಲ 8 ಪಂದ್ಯಗಳಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ ವಿಲ್ ಜ್ಯಾಕ್ಸ್ 230 ರನ್ ಸಿಡಿಸಿ ಮಿಂಚಿದ್ದರು. ಅದರಲ್ಲೂ ಗುಜರಾತ್ ಟೈಟಾನ್ಸ್ ಎದುರಿನ ಸಿಡಿಲಬ್ಬರದ ಶತಕ ಎಬಿಡಿ ಆಟವನ್ನು ನೆನಪಿಸುವಂತಿತ್ತು. ಇನ್ನು ಇಂಗ್ಲೆಂಡ್ ಮೂಲಕ ವಿಲ್ ಜ್ಯಾಕ್ಸ್ ಬೌಲಿಂಗ್‌ನಲ್ಲೂ 2 ವಿಕೆಟ್ ಕಬಳಿಸಿದ್ದರು. ಇಷ್ಟೆಲ್ಲಾ ಇದ್ದೂ ಜ್ಯಾಕ್ಸ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಟ್ಟು ಮಹಾ ಎಡವಟ್ಟು ಮಾಡಿಕೊಂಡಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ವಿಲ್ ಜ್ಯಾಕ್ಸ್ ಹರಾಜಿನಲ್ಲಿ ಈ ಬಾರಿ ದೊಡ್ಡ ಮೊತ್ತಕ್ಕೆ ಬೇರೆ ತಂಡದ ಪಾಲಾಗುತ್ತಾರೆಯೇ ಅಥವಾ ಆರ್‌ಸಿಬಿ ತನ್ನ ಆರ್‌ಟಿಎಂ ಕಾರ್ಡ್ ಬಳಸಿ ತನ್ನಲ್ಲಿಯೇ ಉಳಿಸಿಕೊಳ್ಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
2. ಫಾಫ್ ಡು ಪ್ಲೆಸಿಸ್:
ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕಳೆದ ಮೂರು ಆವೃತ್ತಿಯಲ್ಲೂ ಬೆಂಗಳೂರು ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಕಳೆದ ಆವೃತ್ತಿಯ ಐಪಿಎಲ್‌ನಲ್ಲೂ ಫಾಫ್ 15 ಪಂದ್ಯಗಳನ್ನಾಡಿ 4 ಅರ್ಧಶತಕ ಸಹಿತ 438 ರನ್ ಬಾರಿಸಿದ್ದರು. ಕೊಹ್ಲಿ ಹಾಗೂ ಫಾಫ್ ಆರ್‌ಸಿಬಿಗೆ ಡ್ರೀಮ್ ಆರಂಭ ಒದಗಿಸಿಕೊಡುತ್ತಲೇ ಬಂದಿದ್ದಾರೆ. ಫಾಫ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರೂ, ಆಟಗಾರನಾಗಿ ರೀಟೈನ್ ಮಾಡಿಕೊಳ್ಳಬೇಕಿತ್ತು ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಒತ್ತಾಸೆಯಾಗಿದೆ. ಫಾಫ್ ಸ್ಪೋಟಕ ಬ್ಯಾಟರ್ ಜತೆಗೆ ಅತ್ಯುತ್ತಮ ಫೀಲ್ಡರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಫಾಫ್ ಅವರನ್ನು ಕೈಬಿಟ್ಟು ಆರ್‌ಸಿಬಿ ಮಿಸ್ಟೇಕ್ ಮಾಡಿಕೊಂಡಿತಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.
ಐಪಿಎಲ್ 2025: 20 ಕೋಟಿಗೂ ಹೆಚ್ಚು ಬೆಲೆ ಬಾಳುವ 5 ಆಟಗಾರರು!
3. ಮೊಹಮ್ಮದ್ ಸಿರಾಜ್:
2018ರಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿ ಆರ್‌ಸಿಬಿ ಫ್ರಾಂಚೈಸಿ ರಿಲೀಸ್ ಮಾಡಿರುವುದು ಸಾಕಷ್ಟು ಕುತೂಹಲಕ್ಕೀಡು ಮಾಡಿದೆ. ಸಿರಾಜ್ ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ 15 ಪಂದ್ಯಗಳನ್ನಾಡಿ 14 ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಪರ ಎರಡನೇ ಗರಿಷ್ಠ ವಿಕೆಟ್ ಸಾಧಕರಾಗಿ ಹೊರಹೊಮ್ಮಿದ್ದರು. ಹೀಗಿದ್ದೂ ಸಿರಾಜ್ ಅವರನ್ನು ರಿಲೀಸ್ ಮಾಡಿ ಆರ್‌ಸಿಬಿ ತಪ್ಪು ಮಾಡಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.