
ಮುಂಬೈ (ಜು.16): 2027ರ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಗಾಗಿ ಟೀಮ್ ಇಂಡಿಯಾ ಭರದ ಸಿದ್ಧತೆ ನಡೆಸುತ್ತಿದೆ. ಒಂದು ಕಡೆ ಈ ಮೆಗಾ ಟೂರ್ನಿಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಭಾರತದ ಖ್ಯಾತ ಸ್ಟಾರ್ ಆಲ್ ರೌಂಡರ್ ಒಬ್ಬರು ವಿಶ್ವಕಪ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದಾರೆ ಎಂಬ ಗಂಭೀರ ಚರ್ಚೆಗಳು ಆರಂಭವಾಗಿವೆ. ಹೌದು, ಭಾರತ ತಂಡದ ಸ್ಟಾರ್ ಸ್ಪಿನ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಭವಿಷ್ಯದ ಕುರಿತು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. 2027ರ ಏಕದಿನ ವಿಶ್ವಕಪ್‌ಗೆ ಜಡೇಜಾ ಅವರನ್ನು ಆಯ್ಕೆ ಮಾಡುವ ಆಲೋಚನೆಯಲ್ಲಿ ಸದ್ಯ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ತಂಡದ ಮ್ಯಾನೇಜ್‌ಮೆಂಟ್ ಇಲ್ಲ ಎನ್ನಲಾಗಿದೆ.
2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯಲಿದೆ. ಅಲ್ಲಿನ ಪಿಚ್‌ಗಳು ಹಾಗೂ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಬಲಿಷ್ಠ ತಂಡವನ್ನು ಕಟ್ಟಲು ಮ್ಯಾನೇಜ್‌ಮೆಂಟ್ ಮುಂದಾಗಿದೆ. ಸದ್ಯದ ಮಾಹಿತಿ ಪ್ರಕಾರ, ಏಕದಿನ ಮಾದರಿಯಲ್ಲಿ ರವೀಂದ್ರ ಜಡೇಜಾ ಅವರ ಹೆಸರನ್ನು ಆಯ್ಕೆಗಾರರು ಪರಿಗಣಿಸುತ್ತಿಲ್ಲ. ಅಗ್ರ 7ರ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಬ್ಬರಿಸಬಲ್ಲ ಹಾಗೂ ದಕ್ಷಿಣ ಆಫ್ರಿಕಾದ ವೇಗದ ಪಿಚ್‌ಗಳಲ್ಲಿ ನೆರವಾಗಬಲ್ಲ ಮಧ್ಯಮ ವೇಗದ ಬೌಲಿಂಗ್ ಆಲ್ ರೌಂಡರ್‌ಗಳಿಗೆ ಮ್ಯಾನೇಜ್‌ಮೆಂಟ್ ಮೊದಲ ಆದ್ಯತೆ ನೀಡುತ್ತಿದೆ. ಇನ್ನು ಸ್ಪಿನ್ ಆಲ್ ರೌಂಡರ್ ಕೋಟಾದಲ್ಲಿ ಅಕ್ಷರ್ ಪಟೇಲ್ ಈಗಾಗಲೇ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.
'ಟೈಮ್ಸ್ ಆಫ್ ಇಂಡಿಯಾ' ವರದಿಯ ಪ್ರಕಾರ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಅವರ ಬೌಲಿಂಗ್ ಪ್ರದರ್ಶನ ಕಳೆದ ಒಂದು ವರ್ಷದಿಂದ ನಿರೀಕ್ಷಿತ ಮಟ್ಟದಲ್ಲಿಲ್ಲ. 2025ರ ಚಾಂಪಿಯನ್ಸ್ ಟ್ರೋಫಿ ವೇಳೆ ಅಲ್ಲಿನ ಪಿಚ್‌ಗಳು ಸ್ಪಿನ್‌ಗೆ ಪೂರಕವಾಗಿದ್ದ ಕಾರಣ ಜಡೇಜಾಗೆ ಅವಕಾಶ ನೀಡಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಜಡೇಜಾ ಬ್ಯಾಟಿಂಗ್‌ನಲ್ಲೂ ಹಳೇ ಲಯ ಕಳೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮತ್ತೊಂದೆಡೆ, ಅಕ್ಷರ್ ಪಟೇಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪ್ಲೇಯಿಂಗ್ 11 ನಲ್ಲಿ ಕೇವಲ ಒಬ್ಬ ಪ್ರಮುಖ ಸ್ಪಿನ್ನರ್ ಬಳಸಲು ತಂಡ ಯೋಜಿಸುತ್ತಿದೆ. ಹೀಗಾಗಿ ಅಕ್ಷರ್ ಪಟೇಲ್ ಅವರ ಬ್ಯಾಕಪ್ ಆಟಗಾರನಾಗಿ ಯುವ ಸ್ಪಿನ್ನರ್ ಹರ್ಷ್ ದುಬೆ ಅವರನ್ನು ಸಿದ್ಧಪಡಿಸಲಾಗುತ್ತಿದೆ.
ನ್ಯೂಜಿಲೆಂಡ್ ವಿರುದ್ಧ ಇಂದೋರ್‌ನಲ್ಲಿ ನಡೆದ ಏಕದಿನ ಪಂದ್ಯವೇ ಜಡೇಜಾ ಆಡಿದ ಕೊನೆಯ ಏಕದಿನ ಪಂದ್ಯವಾಗಿದೆ. ಆ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿದ್ದ ಅವರು, 3 ಪಂದ್ಯಗಳ ಆ ಸರಣಿಯಲ್ಲಿ ಕೇವಲ 43 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಜಡೇಜಾ ಇದುವರೆಗೆ ಆಡಿರುವ 210 ಏಕದಿನ ಪಂದ್ಯಗಳಲ್ಲಿ 232 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅವರ ಸ್ಥಾನ ತುಂಬುತ್ತಿರುವ ಅಕ್ಷರ್ ಪಟೇಲ್ ಏಕದಿನ ಕ್ರಿಕೆಟ್‌ನಲ್ಲಿ ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ ಆಡಿರುವ 72 ಏಕದಿನ ಪಂದ್ಯಗಳಲ್ಲಿ 4.5 ರ ಅತ್ಯುತ್ತಮ ಎಕಾನಮಿಯಲ್ಲಿ 79 ವಿಕೆಟ್ ಕಬಳಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ 50 ಇನ್ನಿಂಗ್ಸ್‌ಗಳಲ್ಲಿ 24.72 ರ ಸರಾಸರಿಯಲ್ಲಿ 915 ರನ್ ಸಿಡಿಸಿ ಮಿಂಚಿದ್ದಾರೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, 2027ರ ವಿಶ್ವಕಪ್ ಮುನ್ನವೇ ರವೀಂದ್ರ ಜಡೇಜಾ ಅವರ ಏಕದಿನ ವೃತ್ತಿಜೀವನಕ್ಕೆ ಬಹುತೇಕ ತೆರೆ ಬೀಳುವುದು ಖಚಿತ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.