
ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟಿ20 ಕ್ರಿಕೆಟ್ ಪರಿಚಯವಾದ ಮೇಲೆ ಬೌಲರ್‌ಗಳಿಗೆ ಉಳಿಗಾಲವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವಾಷಿಂಗ್ಟನ್ ಫ್ರೀಡಂ ತಂಡವು 20 ಓವರ್‌ಗಳ ಕ್ರಿಕೆಟ್‌ನಲ್ಲಿ 267 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಗರಿಷ್ಠ ಯಶಸ್ವಿ ರನ್ ಚೇಸ್ ಎನಿಸಿಕೊಂಡಿದೆ. ಈ ಮೊದಲು 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು 265 ರನ್ ಚೇಸ್ ಮಾಡಿದ್ದು ಈವರೆಗಿನ ಯಶಸ್ವಿ ಚೇಸ್ ಎನಿಸಿಕೊಂಡಿತ್ತು.
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿಂದು ಎಂಐ ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ಫ್ರೀಡಂ ತಂಡಗಳು ಮುಖಾಮುಖಿಯಾಗಿದ್ದವು. ಎಂಐ ನ್ಯೂಯಾರ್ಕ್ ತಂಡದ ಪರ ನಿಕೋಲಸ್ ಪೂರನ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಆದರೆ ಆ ದಾಖಲೆ ಮರೆಸುವಂತೆ ವಾಷಿಂಗ್ಟನ್ ಫ್ರೀಡಂ ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ರನ್ ಯಶಸ್ವಿಯಾಗಿ ಚೇಸ್ ಮಾಡಿ ಇತಿಹಾಸ ನಿರ್ಮಿಸಿದೆ. ವಾಷಿಂಗ್ಟನ್ ಫ್ರೀಡಂ ಪರ ಸ್ಟೀವ್ ಸ್ಮಿತ್ ಹಾಗೂ ಅಂಡ್ರಿಸ್ ಗೌಸ್ ಅಮೋಘ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ವಿಸ್ಪೋಟಕ ಬ್ಯಾಟಿಂಗ್ ಹೇಗಿತ್ತು ಅಂದ್ರೆ 267 ರನ್‌ಗಳ ಗುರಿಯನ್ನು ಇನ್ನೂ ಎಂಟು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡದ ಎಂಎಲ್‌ಸಿ ಕಪ್ ಗೆಲ್ಲುವ ಕನಸು ಜೀವಂತವಾಗಿದ್ದರೇ, ಇನ್ನೊಂದೆಡೆ ಎರಡು ಬಾರಿಯ ಚಾಂಪಿಯನ್ ಎಂಐ ನ್ಯೂಯಾರ್ಕ್ ತಂಡದ ಅಭಿಯಾನ ಇಲ್ಲಿಗೆ ಕೊನೆಯಾಗಿದೆ. ಇದೀಗ ವಾಷಿಂಗ್ಟನ್ ಫ್ರೀಡಂ ತಂಡವು ಚಾಲೆಂಜರ್ಸ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡವನ್ನು ಎದುರಿಸಲಿದೆ. ಈ ಮುಖಾಮುಖಿಯಲ್ಲಿ ಗೆಲುವು ಸಾಧಿಸಿದ ತಂಡವು ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಶಾರುಕ್ ಖಾನ್ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಎಂಐ ನ್ಯೂಯಾರ್ಕ್ ತಂಡವು ವಿಸ್ಪೋಟಕ ಆರಂಭವನ್ನು ಪಡೆಯಿತು. ಎಂಐ ನ್ಯೂಯಾರ್ಕ್ ಪರ ನಿಕೋಲಸ್ ಪೂರನ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಎಂಎಲ್‌ಸಿ ಲೀಗ್ ಇತಿಹಾಸದಲ್ಲೇ ಅತಿವೇಗದ ಶತಕ ಸಿಡಿಸಿ ದಾಖಲೆ ಬರೆದರು. ಅಂತಿಮವಾಗಿ ಪೂರನ್ 33 ಎಸೆತಗಳನ್ನು ಎದುರಿಸಿ ಐದು ಬೌಂಡರಿ ಹಾಗೂ 13 ಸಿಕ್ಸರ್ ಸಹಿತ 321.21ರ ಸ್ಟ್ರೈಕ್‌ರೇಟ್‌ನಲ್ಲಿ 106 ರನ್ ಸಿಡಿಸಿದರು.
31 BALL HUNDRED OF NICHOLAS POORAN IN THE MLC. 🤯 pic.twitter.com/yLaTGXLS7G
— Mufaddal Vohra (@mufaddal_vohra) July 16, 2026
ಇನ್ನುಳಿದಂತೆ ಕ್ವಿಂಟನ್ ಡಿ ಕಾಕ್ 24 ಎಸೆತಗಳಲ್ಲಿ 51 ರನ್ ಚಚ್ಚಿದರೆ, ಬಿಗ್ ಹಿಟ್ಟರ್ ಕೀರನ್ ಪೊಲ್ಲಾರ್ಡ್ 25 ಎಸೆತಗಳಲ್ಲಿ 8 ಸಿಕ್ಸರ್ ಸಹಿತ 64 ರನ್ ಸಿಡಿಸಿದರು. ಅಂತಿಮವಾಗಿ ಎಂಐ ನ್ಯೂಯಾರ್ಕ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು.
ಹಾಲಿ ಚಾಂಪಿಯನ್ ಎಂಐ ನ್ಯೂಯಾರ್ಕ್ ತಂಡವು ಈ ಬೃಹತ್ ಮೊತ್ತ ಕಲೆಹಾಕುತ್ತಿದ್ದಂತೆಯೇ ಗೆಲುವು ತಮ್ಮದೇ ಎಂದುಕೊಂಡಿತ್ತು. ಇದರ ಜತೆಗೆ ವಾಷಿಂಗ್ಟನ್ ಫ್ರೀಡಂ ತಂಡವು 10 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಮೂರನೇ ವಿಕೆಟ್‌ಗೆ ಸ್ಟೀವ್ ಸ್ಮಿತ್ ಮತ್ತು ಅಂಡ್ರಿಸ್ ಗೌಸ್ ಬರೋಬ್ಬರಿ 241 ರನ್‌ಗಳ ವಿಸ್ಪೋಟಕ ಜತೆಯಾಟವಾಡುವ ಮೂಲಕ ತಂಡ ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದರು.
ಅದ್ಭುತ ಬ್ಯಾಟಿಂಗ್ ನಡೆಸಿದ ಸ್ಟೀವ್ ಸ್ಮಿತ್ ಕೇವಲ 48 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 110 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಗೌಸ್ 51 ಎಸೆತಗಳಲ್ಲಿ 10 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 132 ರನ್ ಸಿಡಿಸಿದರು. ಅಸಾಧ್ಯ ಎನ್ನುವಂತಿದ್ದ ಈ ಗುರಿಯನ್ನು ಈ ಜೋಡಿ ಅನಾಯಾಸವಾಗಿ ತಲುಪುವಂತೆ ಮಾಡಿದರು. ಈ ಜೋಡಿ ಎಂಐ ನ್ಯೂಯಾರ್ಕ್ ತಂಡದ ಎಲ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.