ಅಶ್ವಿನ್‌ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ ಅಲ್ಲ: ಮಂಜ್ರೇಕರ್ ಮತ್ತೊಂದು ವಿವಾದ‌!

By Suvarna NewsFirst Published Jun 7, 2021, 9:15 AM IST
Highlights

* ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ಸಂಜಯ್ ಮಂಜ್ರೇಕರ್

* ಅಶ್ವಿನ್‌ ಸಾರ್ವಕಾಲಿನ ಶ್ರೇಷ್ಠ ಬೌಲರ್ ಅಲ್ಲವೆಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

* ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮಂಜ್ರೇಕರ್‌ಗೆ ಮಾತಿನೇಟು

ನವದೆಹಲಿ(ಜೂ.07): ಸಂಜಯ್ ಮಂಜ್ರೇಕರ್ ಕ್ರಿಕೆಟರ್, ವೀಕ್ಷಕ ವಿವರಣೆಗಾರನಾಗಿ ಪ್ರಸಿದ್ಧಿಯಾಗಿದ್ದಕ್ಕಿಂತ ವಿವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು. ಈ ಹಿಂದೆ ಕೆಲ ಆಟಗಾರರ ಕುರಿತಂತೆ ಹಗುರ ಮಾತುಗಳನ್ನಾಡಿ ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರಿಂದಲೇ ಪೆಟ್ಟು ತಿಂದ ಕುಖ್ಯಾತಿ ಸಂಜಯ್ ಮಂಜ್ರೇಕರ್ ಬೆನ್ನಿಗಿದೆ.

ಭಾರತದ ತಾರಾ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪೈಕಿ ಒಬ್ಬರು ಎಂದು ನನಗೆ ಅನಿಸುವುದಿಲ್ಲ. ದ.ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಪ್ರೇಲಿಯಾದಲ್ಲಿ ಅವರ ಸಾಧನೆ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಎಂದು ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಹೇಳಿದ್ದು, ಅವರ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. 

ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ನಡೆಸಿರುವ ಸಂವಾದದಲ್ಲಿ ಟೀಂ ಇಂಡಿಯಾ ಮಾಂಜ್ರೇಕರ್‌, ಅಶ್ವಿನ್‌ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆ ಆಸ್ಪ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಇಯಾನ್‌ ಚಾಪೆಲ್‌ ಕೂಡ ಪ್ರತಿಕ್ರಿಯಿಸಿದ್ದು, ‘ಅಶ್ವಿನ್‌ ಈಗಿರುವ ಬೌಲರ್‌ಗಳ ಪೈಕಿ ಅತ್ಯುತ್ತಮ ಬೌಲರ್‌ ಅನ್ನುವುದರಲ್ಲಿ ಸಂಶಯವೇ ಇಲ್ಲ’ ಎಂದಿದ್ದಾರೆ.

ಐಪಿಎಲ್‌ ವೇಳೆ 8-9 ದಿನ ನಿದ್ದೆ ಮಾಡಿರಲಿಲ್ಲ: ಕರಾಳ ದಿನಗಳನ್ನು ಬಿಚ್ಚಿಟ್ಟ ಅಶ್ವಿನ್

ಸದ್ಯ ರವಿಚಂದ್ರನ್ ಅಶ್ವಿನ್ ಭಾರತ ಪರ 78 ಟೆಸ್ಟ್, 111 ಏಕದಿನ ಹಾಗೂ 46 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 409, 150  ಹಾಗೂ 52 ವಿಕೆಟ್ ಕಬಳಿಸಿದ್ದಾರೆ.

ಈ ಹಿಂದೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಸಂಜಯ್ ಮಂಜ್ರೇಕರ್, ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಅದೇ ರೀತಿ ಇದ್ದಾರೆ. ಆತ ಪರಿಪೂರ್ಣ ಕ್ರಿಕೆಟಿಗನಲ್ಲಿ ಬದಲಾಗಿ ಅವರೊಬ್ಬ ಅರೆಬರೆ ಕ್ರಿಕೆಟಿಗ ಎಂದು ಜಡ್ಡು ಬಗ್ಗೆ ಹಗುರ ಮಾತುಗಳನ್ನಾಡಿದ್ದಾರೆ. ಇದಾದ ಬಳಿಕ ಸ್ವತಃ ಜಡೇಜಾ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಂಜ್ರೇಕರ್‌ಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. ಈ ಎಲ್ಲಾ ಘಟನೆಯ ಬಳಿಕ ಮಂಜ್ರೇಕರ್ ತಮ್ಮ ಮಾತಿಗಿದ್ದ ಮೂರು ಕಾಸಿನ ಬೆಲೆಯನ್ನು ಕಳೆದುಕೊಂಡರು ಎಂದರೆ ತಪ್ಪಾಗಲಾರದು.

click me!