100ನೇ ಟೆಸ್ಟ್‌ನಲ್ಲಿ 5 ವಿಕೆಟ್‌ ಕಬಳಿಸಿ ಎಲೈಟ್ ಗ್ರೂಪ್ ಸೇರಿದ ರವಿಚಂದ್ರನ್ ಅಶ್ವಿನ್..!

By Naveen KodaseFirst Published Mar 9, 2024, 1:40 PM IST
Highlights

100ನೇ ಟೆಸ್ಟ್‌ ಪಂದ್ಯದಲ್ಲಿ 5+ ವಿಕೆಟ್ ಕಬಳಿಸಿದ ಭಾರತದ ಎರಡನೇ ಹಾಗೂ ಜಗತ್ತಿನ 4ನೇ ಬೌಲರ್ ಎನ್ನುವ ಹಿರಿಮೆಗೆ ಇದೀಗ ಅಶ್ವಿನ್ ಪಾತ್ರರಾಗಿದ್ದಾರೆ. ಈ ಮೊದಲು ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್, ಶೇನ್ ವಾರ್ನ್ ಹಾಗೂ ಭಾರತದ ಅನಿಲ್ ಕುಂಬ್ಳೆ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.

ಧರ್ಮಶಾಲಾ(ಮಾ.09): ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ತಮ್ಮ ಪಾಲಿನ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಅಶ್ವಿನ್ ಪಾಲಿನ 100ನೇ ಟೆಸ್ಟ್ ಪಂದ್ಯ ಎನಿಸಿಕೊಂಡಿದೆ. 100ನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ್ದ ಅಶ್ವಿನ್, ಇದೀಗ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ನೂರನೇ ಟೆಸ್ಟ್‌ ಪಂದ್ಯದಲ್ಲಿ 5 ವಿಕೆಟ್‌ ಕಬಳಿಸಿದ ಕೆಲವೇ ಕೆಲವು ದಿಗ್ಗಜರ ಸಾಲಿಗೆ ಇದೀಗ ಅಶ್ವಿನ್ ಸೇರ್ಪಡೆಯಾಗಿದ್ದಾರೆ. 

ಹೌದು, 100ನೇ ಟೆಸ್ಟ್‌ ಪಂದ್ಯದಲ್ಲಿ 5+ ವಿಕೆಟ್ ಕಬಳಿಸಿದ ಭಾರತದ ಎರಡನೇ ಹಾಗೂ ಜಗತ್ತಿನ 4ನೇ ಬೌಲರ್ ಎನ್ನುವ ಹಿರಿಮೆಗೆ ಇದೀಗ ಅಶ್ವಿನ್ ಪಾತ್ರರಾಗಿದ್ದಾರೆ. ಈ ಮೊದಲು ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್, ಶೇನ್ ವಾರ್ನ್ ಹಾಗೂ ಭಾರತದ ಅನಿಲ್ ಕುಂಬ್ಳೆ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.

ಟೀಂ ಇಂಡಿಯಾವನ್ನು 477 ರನ್‌ಗಳಿಗೆ ಆಲೌಟ್ ಮಾಡಿ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಾವೆಸೆದ ಮೊದಲ ಓವರ್‌ನಲ್ಲೇ ಬೆನ್ ಡಕೆಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಇಂಗ್ಲೆಂಡ್‌ಗೆ ಆರಂಭಿಕ ಶಾಕ್ ನೀಡಿದರು. ಇದಾದ ಕೆಲ ಹೊತ್ತಿನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಜಾಕ್ ಕ್ರಾಲಿ ಖಾತೆ ತೆರೆಯುವ ಮುನ್ನವೇ ಅಶ್ವಿನ್‌ಗೆ ಎರಡನೇ ಬಲಿಯಾದರು. ಇಂಗ್ಲೆಂಡ್ ತಂಡವು 21 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಓಲಿ ಪೋಪ್ 3 ಬೌಂಡರಿ ಸಹಿತ 23 ರನ್ ಬಾರಿಸಿದರಾದರೂ ಅಶ್ವಿನ್ ಬೌಲಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು. ಈ ವೇಳೆಗೆ ಇಂಗ್ಲೆಂಡ್ ಸ್ಕೋರ್ 36ಕ್ಕೆ 3. ಇನ್ನು ಮೂರನೇ ದಿನದಾಟದ ಊಟದ ವಿರಾಮಕ್ಕೂ ಮುನ್ನ ನಾಯಕ ಬೆನ್ ಸ್ಟೋಕ್ಸ್‌ ಕೇವಲ 2 ರನ್‌ ಗಳಿಸಿ ಅಶ್ವಿನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 

ಇನ್ನು ಊಟದ ವಿರಾಮದ ಬಳಿಕ ಕ್ರೀಸ್‌ಗಿಳಿದ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ 5ನೇ ವಿಕೆಟ್ ಅನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.

ಕುಂಬ್ಳೆ ದಾಖಲೆ ಮುರಿದ ಅಶ್ವಿನ್: ರವಿಚಂದ್ರನ್ ಅಶ್ವಿನ್ ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ 36ನೇ ಬಾರಿಗೆ 5+ ವಿಕೆಟ್ ಕಬಳಿಸುವ ಮೂಲಕ, ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇದುವರೆಗೂ ಭಾರತ ಪರ ಅತಿಹೆಚ್ಚು ಬಾರಿ 5+ ಟೆಸ್ಟ್ ವಿಕೆಟ್ ದಾಖಲೆ ಅನಿಲ್ ಕುಂಬ್ಳೆ(35) ಹೆಸರಿನಲ್ಲಿತ್ತು. ಕಳೆದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಆ ದಾಖಲೆ ಸರಿಗಟ್ಟಿದ್ದರು. ಇದೀಗ ತಮಿಳುನಾಡು ಮೂಲದ ಸ್ಪಿನ್ನರ್ ಅಶ್ವಿನ್, ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ 5+ ವಿಕೆಟ್ ಕಬಳಿಸಿದ ದಾಖಲೆ ಶ್ರೀಲಂಕಾ ದಿಗ್ಗಜ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಮುರುಳಿ 67 ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇನ್ನು ಆಸೀಸ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ 37 ಬಾರಿ 5+ ವಿಕೆಟ್ ಕಬಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ ಹಾಗೂ ಕಿವೀಸ್ ವೇಗಿ ರಿಚರ್ಡ್ ಹ್ಯಾಡ್ಲಿ 36 ಬಾರಿ 5+ ವಿಕೆಟ್ ಕಬಳಿಸುವ ಮೂಲಕ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

click me!