ಜೇಮ್ಸ್ ಆಂಡರ್‌ಸನ್‌ಗೆ ಕುಲ್ದೀಪ್ ಯಾದವ್ 700ನೇ ಬಲಿ...! ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ ವೇಗಿ

By Naveen KodaseFirst Published Mar 9, 2024, 10:30 AM IST
Highlights

2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜೇಮ್ಸ್ ಆಂಡರ್‌ಸನ್ ಕಳೆದೆರಡು ದಶಕಗಳಿಂದ ಇಂಗ್ಲೆಂಡ್ ವೇಗದ ದಾಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. 1877ರಿಂದ ಆರಂಭವಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ವಿಕೆಟ್ ಕಬಳಿಸಿದ ಮೊದಲ ವೇಗಿ ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮಶಾಲಾ(ಮಾ.09): ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್‌ ಆಂಡರ್‌ಸನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 700 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್ ಎನ್ನುವ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಧರ್ಮಶಾಲಾ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಆಂಡರ್‌ಸನ್, ಭಾರತದ ಕುಲ್ದೀಪ್ ಯಾದವ್ ಅವರನ್ನು ಬಲಿ ಪಡೆಯುವ ಮೂಲಕ 700 ವಿಕೆಟ್ ಮೈಲಿಗಲ್ಲು ನೆಟ್ಟರು.

ಹೌದು, 2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜೇಮ್ಸ್ ಆಂಡರ್‌ಸನ್ ಕಳೆದೆರಡು ದಶಕಗಳಿಂದ ಇಂಗ್ಲೆಂಡ್ ವೇಗದ ದಾಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. 1877ರಿಂದ ಆರಂಭವಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ವಿಕೆಟ್ ಕಬಳಿಸಿದ ಮೊದಲ ವೇಗಿ ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. 187ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಜೇಮ್ಸ್ ಆಂಡರ್‌ಸನ್ ಇದೀಗ 700 ವಿಕೆಟ್ ಕಬಳಿಸುವಲ್ಲಿ ಸಫಲರಾದರು.

ರೋಹಿತ್‌ ಶರ್ಮಾ ಸೆಂಚುರಿ ದಾಖಲೆ; ಹಿಟ್‌ಮ್ಯಾನ್ ಮುಟ್ಟಿದ್ದೆಲ್ಲಾ ಚಿನ್ನ..!

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವಿಕೆಟ್ ಕಬಳಿಸಿದ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಮುರುಳಿ ಲಂಕಾ ಪರ ಕೇವಲ 133 ಟೆಸ್ಟ್ ಪಂದ್ಯಗಳನ್ನಾಡಿ 800 ವಿಕೆಟ್ ಕಬಳಿಸುವ ಮೂಲಕ ಮೊದಲ ಸ್ಥಾನದಲ್ಲಿ ಭದ್ರವಾಗಿ ಉಳಿದುಕೊಂಡಿದ್ದಾರೆ. ಇನ್ನು ಶ್ರೀಲಂಕಾದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ 145  ಟೆಸ್ಟ್ ಪಂದ್ಯಗಳನ್ನಾಡಿ 708 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಕಬಳಿಸಿದ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆಂಡರ್‌ಸನ್ ಇನ್ನು ಕೇವಲ 9 ವಿಕೆಟ್ ಕಬಳಿಸಿದರೆ ವಾರ್ನ್ ದಾಖಲೆ ಬ್ರೇಕ್ ಮಾಡಿ ಎರಡನೇ ಸ್ಥಾನಕ್ಕೇರಲಿದ್ದಾರೆ.

Another jewel in the crown of James Anderson 👑

➡️ https://t.co/NclpXwxcNa
| pic.twitter.com/JV12NGobAB

— ICC (@ICC)

ಇನ್ನು ಧರ್ಮಶಾಲಾ ಟೆಸ್ಟ್ ವಿಚಾರಕ್ಕೆ ಬಂದರೆ ಎರಡನೇ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 473 ರನ್ ಬಾರಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದಲ್ಲಿ ತನ್ನ ಖಾತೆಗೆ ಕೇವಲ 4 ರನ್ ಸೇರಿಸಿ ಸರ್ವಪತನ ಕಂಡಿತು. ಕುಲ್ದೀಪ್ ಯಾದವ್ 30 ರನ್ ಬಾರಿಸಿ ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದರೆ, ಜಸ್ಪ್ರೀತ್ ಬುಮ್ರಾ 20 ರನ್ ಬಾರಿಸಿ ಶೋಯೆಬ್ ಬಷೀರ್‌ಗೆ 5ನೇ ಬಲಿಯಾದರು. ಟೀಂ ಇಂಡಿಯಾ 477 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಒಟ್ಟಾರೆ 259 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.

click me!