ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ, ಟೆಸ್ಟ್ ಆಡಲೂ ಫಿಟ್ ಎಂದ ಮಾಜಿ ಕೋಚ್ ರವಿಶಾಸ್ತ್ರಿ

Published : Nov 06, 2026, 10:46 AM IST
Ravi Shastri Virat Kohli

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅದ್ಭುತ ಆಟವನ್ನು ರವಿಶಾಸ್ತ್ರಿ ಕೊಂಡಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್ ವೇಳೆ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಅಲ್ಲದೆ, ಅವರಿಗೆ ಇನ್ನೂ ಟೆಸ್ಟ್ ಆಡುವ ಸಾಮರ್ಥ್ಯವಿದೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ(ನ.06): ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ ಎಂದು ಮಾಜಿ ಕ್ಯಾಪ್ಟನ್ ಹಾಗೂ ಹೆಡ್ ಕೋಚ್ ರವಿಶಾಸ್ತ್ರಿ ಮತ್ತೆ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಅವರ ಭರ್ಜರಿ ಆಟದ ನಂತರ ಶಾಸ್ತ್ರಿ ಈ ಮಾತುಗಳನ್ನಾಡಿದ ಅವರು, ಅದ್ಭುತ ಫಿಟ್‌ನೆಸ್ ಮತ್ತು ಕ್ಲಾಸ್ ಬ್ಯಾಟಿಂಗ್ ಶೈಲಿ ಹೊಂದಿರುವ ಕೊಹ್ಲಿಗೆ ಇನ್ನೂ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ವೇಗಿಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಕೊಹ್ಲಿ ಕೇವಲ 51 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 74 ರನ್ ಚಚ್ಚಿದರು. ನ್ಯೂಜಿಲೆಂಡ್ ತಂಡವನ್ನು 185 ರನ್‌ಗಳಿಗೆ ಆಲೌಟ್ ಮಾಡಿದ ನಂತರ, ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಶುಭ್‌ಮನ್ ಗಿಲ್ ಜೊತೆಗೂಡಿ ಎರಡನೇ ವಿಕೆಟ್‌ಗೆ 113 ರನ್ ಸೇರಿಸಿದ ಕೊಹ್ಲಿ ಪಂದ್ಯದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡರು. ಇತರ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿದ್ದ ಪಿಚ್‌ನಲ್ಲಿ ಕೊಹ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.

ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಇದೂ ಒಂದು:

ಈ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, "ಇತ್ತೀಚಿನ ದಿನಗಳಲ್ಲಿ ವಿರಾಟ್ ಆಡಿದ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಇದೂ ಒಂದು. ಇಂತಹ ಪಿಚ್‌ನಲ್ಲಿ ಯಾವುದೇ ತಪ್ಪು ಮಾಡದೆ ಇಷ್ಟು ಸರಾಗವಾಗಿ ಬ್ಯಾಟ್ ಮಾಡುವುದು ಸುಲಭವಲ್ಲ. ಅವರು ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ವೈಟ್-ಬಾಲ್ ಆಟಗಾರ. ಚೇಸಿಂಗ್‌ನಲ್ಲಿ ಅವರ ರನ್‌ಗಳು, ಶತಕಗಳು ಮತ್ತು ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯವನ್ನು ನೋಡಿ, ಇದು ಒಬ್ಬ ಕ್ಲಾಸಿಕ್ ಬ್ಯಾಟರ್‌ನ ಪ್ರದರ್ಶನ" ಎಂದರು.

2025ರ ಐಪಿಎಲ್ ಸೀಸನ್ ಮಧ್ಯದಲ್ಲಿ ಕೊಹ್ಲಿ ಅನಿರೀಕ್ಷಿತವಾಗಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಟೆಸ್ಟ್‌ನಲ್ಲಿ ಇನ್ನೂ ಮಿಂಚುವ ದೈಹಿಕ ಸಾಮರ್ಥ್ಯ ಕೊಹ್ಲಿಗಿದೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. "ವಿಶ್ವದ ಪ್ರಮುಖ ಆಟಗಾರರನ್ನು ಕೇಳಿದರೆ, ಅವರೆಲ್ಲರೂ ಕೊಹ್ಲಿ ಟೆಸ್ಟ್ ಆಡಬೇಕೆಂದು ಬಯಸುತ್ತಾರೆ. ಅವರ ಫಿಟ್‌ನೆಸ್ ಮಟ್ಟ ಅಷ್ಟು ಅದ್ಭುತವಾಗಿದೆ. ಕಠಿಣ ಪರಿಶ್ರಮ ಮತ್ತು ನಿಖರವಾದ ಸಿದ್ಧತೆಗಳು ಅವರನ್ನು ಇತರರಿಗಿಂತ ಭಿನ್ನವಾಗಿ ನಿಲ್ಲಿಸುತ್ತವೆ" ಎಂದು ಶಾಸ್ತ್ರಿ ಸ್ಪಷ್ಟಪಡಿಸಿದರು.

ಮಾಜಿ ನ್ಯೂಜಿಲೆಂಡ್ ಆಲ್‌ರೌಂಡರ್ ಸ್ಕಾಟ್ ಸ್ಟೈರಿಸ್ ಕೂಡ ಕೊಹ್ಲಿಯ ನಿವೃತ್ತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಏಕದಿನ ಪಂದ್ಯಗಳತ್ತ ಗಮನಹರಿಸುತ್ತಿದ್ದರೂ, ಕೊಹ್ಲಿ ಈಗಲೂ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಸ್ಟೈರಿಸ್ ಹೇಳಿದ್ದಾರೆ.

ಏಕದಿನ ಚೇಸಿಂಗ್‌ನಲ್ಲಿ ಗರಿಷ್ಠ ರನ್‌: ಕೊಹ್ಲಿ ಈಗ ವಿಶ್ವ ನಂ.1

ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್‌ ವೇಳೆ ಗರಿಷ್ಠ ರನ್‌ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು 66.21ರ ಸರಾಸರಿಯಲ್ಲಿ 8741 ರನ್‌ ಗಳಿಸಿದ್ದು, 42.33ರ ಸರಾಸರಿಯಲ್ಲಿ 8720 ರನ್‌ ಕಲೆಹಾಕಿದ್ದ ಸಚಿನ್‌ ತೆಂಡುಲ್ಕರ್ ದಾಖಲೆ ಮುರಿದರು. 6801 ರನ್‌ಗಳೊಂದಿಗೆ ರೋಹಿತ್‌ 3ನೇ ಸ್ಥಾನದಲ್ಲಿದ್ದಾರೆ.

ಇನ್ನು, ಏಕದಿನದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಆಗಮಿಸಿ 13000 ರನ್‌ ಗಳಿಸಿದ ಮೊದಲ ಆಟಗಾರ ವಿರಾಟ್‌. ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ 12,662 ರನ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಏಕದಿನದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗರಿಷ್ಠ ರನ್‌ ಗಳಿಸಿದ ಆಟಗಾರರಲ್ಲಿ ಕೊಹ್ಲಿ ಈಗ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಅವರು 37 ಪಂದ್ಯಗಳಲ್ಲಿ 1971, ಪಾಂಟಿಂಗ್‌ 51 ಪಂದ್ಯಗಳಲ್ಲಿ 1971 ರನ್‌ ಗಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

₹40 ಕೋಟಿ ಕೊಟ್ಟರೆ ಮಾತ್ರ ತಂಡದಲ್ಲಿ ಉಳಿಯುತ್ತೇನೆ! ಐಪಿಎಲ್ ಫ್ರಾಂಚೈಸಿಗೆ ಸ್ಟಾರ್ ಆಟಗಾರನ ಖಡಕ್ ಕಂಡೀಷನ್; ಯಾರು ಆ ಕ್ರಿಕೆಟಿಗ?
IND Vs NZ: 2ನೇ ಏಕದಿನ ಪಂದ್ಯಕ್ಕೂ ಮುನ್ನ ಭಾರಿ ಆಘಾತ, ಸ್ಟಾರ್ ಓಪನರ್ ಇಡೀ ಸರಣಿಯಿಂದ ಔಟ್‌!