
ಬೆಂಗಳೂರು: ದಶಕಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕ ತಂಡದ ಕನಸು ಈ ಬಾರಿಯೂ ನನಸಾಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಮೊನಚು ಕಳೆದುಕೊಂಡ ಬೌಲಿಂಗ್, ತಾರಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತವರಿನಲ್ಲೇ ಗೆಲ್ಲಲು ವಿಫಲವಾಗಿರುವ ತಂಡ, ಗುಂಪು ಹಂತದಿಂದಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದೆ.
ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಬಂಗಾಳ ನಡುವಿನ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು. ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ್ದ ರಾಜ್ಯ ತಂಡ ಕೇವಲ ಒಂದು ಅಂಕ ಸಂಪಾದಿಸಿದರೆ, ಬಂಗಾಳಕ್ಕೆ 3 ಅಂಕ ಲಭಿಸಿತು. ಸದ್ಯ ಕರ್ನಾಟಕ 4 ಪಂದ್ಯಗಳ ಬಳಿಕ 1 ಜಯ, 3 ಡ್ರಾದೊಂದಿಗೆ 9 ಅಂಕ ಗಳಿಸಿ ‘ಸಿ’ ಗುಂಪಿನಲ್ಲಿ 4ನೇ ಸ್ಥಾನದಲ್ಲಿದೆ. ಹರ್ಯಾಣ(19), ಕೇರಳ(15), ಮಧ್ಯಪ್ರದೇಶ(10) ಮೊದಲ 3 ಸ್ಥಾನಗಳಲ್ಲಿವೆ. ರಾಜ್ಯ ತಂಡಕ್ಕೆ ಇನ್ನು 3 ಪಂದ್ಯಗಳು ಬಾಕಿಯಿದ್ದು, ಎಲ್ಲಾ ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸೋತರೆ ಕೋಚ್ ಸ್ಥಾನದಿಂದ ಗಂಭೀರ್ ವಜಾ?
ಬಂಗಾಳ ಪ್ರಾಬಲ್ಯ: 3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 127 ರನ್ ಗಳಿಸಿದ್ದ ಬಂಗಾಳ ಶನಿವಾರವೂ ಪ್ರಾಬಲ್ಯ ಸಾಧಿಸಿತು. ತಂಡ 5 ವಿಕೆಟ್‌ಗೆ 283 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಸುದೀಪ್ ಕುಮಾರ್ ಔಟಾಗದೆ 101, ವೃತ್ತಿಬದುಕಿನ ಕೊನೆ ಟೂರ್ನಿ ಆಡುತ್ತಿರುವ ವೃದ್ಧಿಮಾನ್ ಸಾಹ ಔಟಾಗದೆ 63 ರನ್ ಸಿಡಿಸಿದರು. ವಿದ್ಯಾಧರ್ ಪಾಟೀಲ್ 3 ವಿಕೆಟ್ ಕಿತ್ತರು.
ಗೆಲುವಿಗೆ 363 ರನ್‌ಗಳ ಬೃಹತ್ ಗುರಿ ಪಡೆದ ಕರ್ನಾಟಕಕ್ಕೆ ಕೇವಲ 28 ಓವರ್ ಬ್ಯಾಟ್ ಮಾಡಲು ಅವಕಾಶ ಸಿಕ್ಕಿತು. ತಂಡ 3 ವಿಕೆಟ್‌ಗೆ 110 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಮಾಡಿಕೊಳ್ಳಲು ಉಭಯ ತಂಡಗಳ ನಾಯಕರು ಒಪ್ಪಿಗೆ ಸೂಚಿಸಿದರು. ಸ್ಮರಣ್ ಔಟಾಗದೆ 35, ಮನೀಶ್ ಪಾಂಡೆ ಔಟಾಗದೆ 30, ಶ್ರೇಯಸ್ ಗೋಪಾಲ್ 32 ರನ್ ಗಳಿಸಿದರು.
ಕಿವೀಸ್ ಸರಣಿ 0-3 ವೈಟ್‌ವಾಶ್ ಬಗ್ಗೆ 6 ಗಂಟೆ ಪೋಸ್ಟ್‌ಮಾರ್ಟಂ!
ಸ್ಕೋರ್: ಬಂಗಾಳ 301/10 ಮತ್ತು 283/5 ಡಿಕ್ಲೇರ್ (ಸುದೀಪ್ 101*, ಸಾಹ 63*, ವಿದ್ಯಾಧರ್ 3-53), ಕರ್ನಾಟಕ 221/10 ಮತ್ತು 110/3 (ಸ್ಮರಣ್ 35, ಶ್ರೇಯಸ್ 32, ಸೂರಜ್ 3-27)
ಕೂಚ್ ಬೆಹಾರ್ ಟ್ರೋಫಿ: ರಾಜ್ಯಕ್ಕೆ ಇನ್ನಿಂಗ್ಸ್ ಸೋಲು
ವಡೋದರಾ: ಕೂಚ್ ಬೆಹಾರ್ ಅಂಡರ್-19 ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಬರೋಡಾ ವಿರುದ್ಧ ಇನ್ನಿಂಗ್ಸ್ ಹಾಗೂ 212 ರನ್ ಸೋಲನುಭವಿಸಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 127ಕ್ಕೆ ಆಲೌಟಾಗಿದ್ದರೆ, ಬರೋಡಾ 7 ವಿಕೆಟ್‌ಗೆ 604 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. 477 ರನ್ ಹಿನ್ನಡೆಗೊಳಗಾಗಿದ್ದ ರಾಜ್ಯ ತಂಡ 2ನೇ ಇನ್ನಿಂಗ್ಸ್‌ನಲ್ಲಿ 265ಕ್ಕೆ ಸರ್ವಪತನ ಕಂಡಿತು. ರಾಜ್ಯ ತಂಡ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ನ.13ರಿಂದ ಡೆಲ್ಲಿ ವಿರುದ್ಧ ಆಡಲಿದೆ. ಪಂದ್ಯ ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.