ರಣಜಿ ಟ್ರೋಫಿ: ಕರ್ನಾಟಕಕ್ಕೆ ಇಂದಿನಿಂದ ಬಂಗಾಳ ಚಾಲೆಂಜ್‌

By Kannadaprabha News  |  First Published Nov 6, 2024, 8:46 AM IST

ರಣಜಿ ಟ್ರೋಫಿ ಟೂರ್ನಿಯಲ್ಲಿಂದು ಆತಿಥೇಯ ಕರ್ನಾಟಕ ತಂಡವು ಬಲಿಷ್ಠ ಬೆಂಗಾಲ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಬೆಂಗಳೂರು: 2024-25ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದು, ಬುಧವಾರದಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಸಿ’ ಗುಂಪಿನ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೆಣಸಲಿದೆ.

ಮೊದಲೆರಡು ಪಂದ್ಯಗಳು ಮಳೆಯಿಂದಾಗಿ ಡ್ರಾಗೊಂಡ ಕಾರಣ ಕೇವಲ 2 ಅಂಕ ಪಡೆದಿದ್ದ ಕರ್ನಾಟಕ, ಕಳೆದ ಪಂದ್ಯದಲ್ಲಿ ಬಿಹಾರ ವಿರುದ್ಧ ಗೆಲುವು ಸಾಧಿಸಿ ಮೊದಲ ಜಯ ದಾಖಲಿಸಿತ್ತು. ಸದ್ಯ ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ರಾಜ್ಯ ತಂಡ ನಾಕೌಟ್‌ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ಎನಿಸಿದೆ.

Latest Videos

undefined

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತರೇ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್ ವೃತ್ತಿಬದುಕು ಅಂತ್ಯ!

ಕಳೆದ ಪಂದ್ಯದಲ್ಲಿ ಬಿಹಾರ ವಿರುದ್ಧ ಶತಕ ಸಿಡಿಸಿದ್ದ ನಾಯಕ ಮಯಾಂಕ್‌ ಅಗರ್‌ವಾಲ್‌, ಅರ್ಧಶತಕ ಬಾರಿಸಿದ್ದ ಉಪನಾಯಕ ಮನೀಶ್‌ ಪಾಂಡೆ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಇವರಿಬ್ಬರ ಪ್ರದರ್ಶನ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಯುವ ಬ್ಯಾಟರ್‌ಗಳಾದ ಸುಜಯ್‌ ಸಾತೇರಿ, ನಿಕಿನ್‌ ಜೋಸ್‌ ಮೇಲೂ ನಿರೀಕ್ಷೆ ಇದೆ. ದೇವದತ್‌ ಪಡಿಕ್ಕಲ್‌ ಆಸ್ಟ್ರೇಲಿಯಾದಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸುತ್ತಿದ್ದು, ಈ ಪಂದ್ಯಕ್ಕೂ ಅವರು ಇರುವುದಿಲ್ಲ.

ಇನ್ನು, ಭಾರತ ‘ಎ’ ಪರ ಆಸ್ಟ್ರೇಲಿಯಾದಲ್ಲಿ ಆಡುತ್ತಿರುವ ಪ್ರಸಿದ್ಧ್‌ ಕೃಷ್ಣ, ಭಾರತ ತಂಡಕ್ಕೆ ಆಯ್ಕೆಯಾಗಿ ಟಿ20 ಸರಣಿ ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ವೈಶಾಖ್‌ ವಿಜಯ್‌ಕುಮಾರ್‌ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇಬ್ಬರು ತಾರಾ ವೇಗಿಗಳ ಅನುಪಸ್ಥಿತಿಯಲ್ಲಿ ಹಿರಿಯ ವೇಗಿ ವಾಸುಕಿ ಕೌಶಿಕ್‌ ಮೇಲೆ ಹೆಚ್ಚಿನ ಹೊಣೆ ಬೀಳಲಿದೆ. ಯುವ ವೇಗಿಗಳಾದ ವಿದ್ಯಾಧರ್‌ ಪಾಟೀಲ್‌ ಹಾಗೂ ಅಭಿಲಾಷ್‌ ಶೆಟ್ಟಿ, ಕೌಶಿಕ್‌ ಜೊತೆ ದಾಳಿಗಿಳಿಯಲಿದ್ದಾರೆ. ಹಿರಿಯ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್ ಸ್ಪಿನ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ.

ವಿರಾಟ್ ಕೊಹ್ಲಿ ಬಗ್ಗೆ ನಿಮಗೆ ಗೊತ್ತಿರದ ಟಾಪ್ 7 ಸೀಕ್ರೇಟ್ಸ್‌!

ಮತ್ತೊಂದೆಡೆ ಬಂಗಾಳಕ್ಕೂ ಹಿರಿಯ ಆಟಗಾರರ ಅನುಪಸ್ಥಿತಿ ಕಾಡಲಿದೆ. ಮೊಹಮದ್‌ ಶಮಿ ಇನ್ನೂ ಫಿಟ್‌ ಆಗಿಲ್ಲ. ಆರಂಭಿಕ ಬ್ಯಾಟರ್‌ ಅಭಿಮನ್ಯು ಈಶ್ವರನ್‌, ಯುವ ವಿಕೆಟ್‌ ಕೀಪರ್‌ ಅಭಿಷೇಕ್‌ ಪೊರೆಲ್‌ ಹಾಗೂ ವೇಗಿ ಮುಖೇಶ್‌ ಕುಮಾರ್‌ ಆಸ್ಟ್ರೇಲಿಯಾದಲ್ಲಿದ್ದಾರೆ. ಹೀಗಾಗಿ ನಾಯಕ ಅನುಸ್ತೂಪ್‌ ಮಜುಂದಾರ್‌, ಅನುಭವಿ ಸುದೀಪ್‌ ಚಟ್ಟರ್ಜಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಇನ್ನು ವೃದ್ಧಿಮಾನ್‌ ಸಾಹ ಈ ಋತುವಿನ ಅಂತ್ಯದಲ್ಲಿ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದು, ಅವರ ಆಟದ ಮೇಲೆ ಎಲ್ಲರ ಕಣ್ಣಿದೆ.

ಬಂಗಾಳ ಮೊದಲ ಜಯಕ್ಕಾಗಿ ಕಾತರಿಸುತ್ತಿದೆ. ತಂಡ ಆಡಿರುವ 3 ಪಂದ್ಯಗಳಲ್ಲಿ 2 ಡ್ರಾಗೊಂಡಿದ್ದು, ಬಿಹಾರ ವಿರುದ್ಧದ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಗುಂಪಿನಲ್ಲಿ 4ನೇ ಸ್ಥಾನದಲ್ಲಿರುವ ಬಂಗಾಳ, ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
 

click me!