Ranji Trophy : ರೈಲ್ವೇಸ್ ವಿರುದ್ಧ ಮನೀಷ್ ಪಾಂಡೆ, ಕೆವಿ ಸಿದ್ಧಾರ್ಥ್ ಸೂಪರ್ ಶತಕ

Suvarna News   | Asianet News
Published : Feb 17, 2022, 05:55 PM IST
Ranji Trophy : ರೈಲ್ವೇಸ್ ವಿರುದ್ಧ ಮನೀಷ್ ಪಾಂಡೆ, ಕೆವಿ ಸಿದ್ಧಾರ್ಥ್ ಸೂಪರ್ ಶತಕ

ಸಾರಾಂಶ

ಕೇವಲ 83 ಎಸೆತಗಳಲ್ಲಿ ಶತಕ ಸಿಡಿಸಿದ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆವಿ ಸಿದ್ಧಾರ್ಥ್ ಕೂಡ ಶತಕ ಸಾಧನೆ ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಮೊತ್ತದ ಹಾದಿಯಲ್ಲಿರುವ ಕರ್ನಾಟಕ ತಂಡ

ಚೆನ್ನೈ (ಫೆ.17): ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿದ ನಾಯಕ ಮನೀಷ್ ಪಾಂಡೆ (Manish Pandey) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆವಿ ಸಿದ್ಧಾರ್ಥ್ (Siddharth K V), ಪ್ರತಿಷ್ಠಿತ ರಣಜಿ ಟ್ರೋಫಿ (RANJI TROPHY) ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಶತಕ ಸಾಧನೆ ಮಾಡುವ ಮೂಲಕ ಗಮನಸೆಳೆದಿದ್ದಾರೆ. ತಂಡದ ಪ್ರಮುಖ ಬ್ಯಾಟ್ಸ್ ಮನ್ ಗಳ ಶತಕದ ನಿರ್ವಹಣೆಯಿಂದ ರೈಲ್ವೇಸ್  (Railways)ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡ ದೊಡ್ಡ ಮೊತ್ತದತ್ತ ಮುಖ ಮಾಡಿದೆ.

ಗುರುನಾನಕ್ ಕಾಲೇಜು ಮೈದಾನದಲ್ಲಿ(Gurunanak College Ground) ಗುರುವಾರ ಆರಂಭಗೊಂಡ ಮುಖಾಮುಖಿಯಲ್ಲಿ ಟಾಸ್ ಗೆದ್ದ ರೈಲ್ವೇಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರರು ಅಲ್ಪ ಮೊತ್ತಕ್ಕೆ ವಿಕೆಟ್ ನೀಡಿದರೂ,  ಕೆವಿ ಸಿದ್ಧಾರ್ಥ್ (140*ರನ್, 221 ಎಸೆತ, 17 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಮನೀಷ್ ಪಾಂಡೆ (156 ರನ್, 121 ಎಸೆತ, 12 ಬೌಂಡರಿ, 10 ಸಿಕ್ಸರ್) 4ನೇ ವಿಕೆಟ್ ಗೆ ಆಡಿದ 267 ರನ್ ಗಳ ದೊಡ್ಡ ಜೊತೆಯಾಟದಿಂದಾಗಿ 5 ವಿಕೆಟ್ ಗೆ 392 ರನ್ ಗಳೊಂದಿಗೆ ಮೊದಲ ದಿನದಾಟ ಮುಗಿಸಿತು. 140 ರನ್ ಬಾರಿಸಿರುವ ಕೆವಿ ಸಿದ್ಧಾರ್ಥ್ ಅವರೊಂದಿಗೆ ಆಲ್ರೌಂಡರ್ ಶ್ರೇಯಸ್ ಗೋಪಾಲ್ (Shreyas Gopal)  2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬ್ಯಾಟಿಂಗ್ ಮಾಡಲು ಇಳಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಭಾರತ ಟೆಸ್ಟ್ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (Mayank Agarwal) 38 ಎಸೆತಗಳಲ್ಲಿ ಆಕರ್ಷಕ ಮೂರು ಬೌಂಡರಿಗಳನ್ನು ಸಿಡಿಸಿ 16 ರನ್ ಗಳಿಸಿದ್ದಾಗ ರನೌಟ್ ಆಗಿ ನಿರ್ಗಮಿಸಿದರು. ಮಯಾಂಕ್ ಔಟಾದ ಮೊತ್ತಕ್ಕೆ 23 ರನ್ ಸೇರಿಸುವ ವೇಳೆಗೆ ದೇವದತ್ ಪಡಿಕ್ಕಲ್ (Devdutt Padikkal) ಕೂಡ ನಿರ್ಗಮನ ಕಂಡರು. 56 ಎಸೆತ ಎದುರಿಸಿದ ಪಡಿಕ್ಕಲ್ 21 ರನ್ ಬಾರಿಸಿದರು.
 


50 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ವನ್ ಡೌನ್ ಬ್ಯಾಟ್ಸ್ ಮನ್ ರವಿಕುಮಾರ್ ಸರ್ಮಥ್ (Samarth R)ಹಾಗೂ ಕೆವಿ ಸಿದ್ಧಾರ್ಥ್ ಮೂರನೇ ವಿಕೆಟ್ ಗೆ ಅಮೂಲ್ಯ 60 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದರು. ಎಚ್ಚರಿಕೆಯ ಬ್ಯಾಟಿಂಗ್ ನೊಂದಿಗೆ ಅರ್ಧಶತಕದ ಹಾದಿಯಲ್ಲಿದ್ದ ಸರ್ಮಥ್, ಅವಿನಾಶ್ ಯಾದವ್ ಗೆ ವಿಕೆಟ್ ನೀಡಿ ಹೊರನಡೆದರು.

ರೈಲ್ವೇಸ್ ತಂಡ ಮೇಲುಗೈ ಕಾಣುವ ಲಕ್ಷಣದಲ್ಲಿದ್ದ ವೇಳೆ ಸಿದ್ಧಾರ್ಥ್ ಗೆ ಜೊತೆಯಾದ ಮನೀಷ್ ಪಾಂಡೆ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರೆ, ನಂತರ ತಮ್ಮ ಸ್ಫೋಟಕ ಆಟವಾಡುವ ಮೂಲಕ ರೈಲ್ವೇಸ್ ಬೌಲರ್ ಗಳ ಬೆವರಿಳಿಸಿದರು. ಆಡಿದ ಮೊದಲ 14 ಎಸೆತಗಳಲ್ಲಿಯೇ ಮೂರು ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ ಮನೀಷ್.  ರೈಲ್ವೇಸ್ ತಂಡದ ಎಲ್ಲಾ ಬೌಲರ್ ಗಳ ಬೆಂಡೆತ್ತಿದ್ದರು. 10 ಆಕರ್ಷಕ ಸಿಕ್ಸರ್ ಸಿಡಿಸಿ ಗಮನಸೆಳೆದರು. ಕೇವಲ 46 ಎಸೆತಗಳಲ್ಲಿ 4 ಸಿಕ್ಸರ್ ನೊಂದಿಗೆ ಮನೀಷ್ ಪಾಂಡೆ ಅರ್ಧಶತಕ ಪೂರೈಸಿದರು. ಆ ಬಳಿಕ ಆಟದಲ್ಲಿ ಮತ್ತಷ್ಟು ವೇಗ ತಂದುಕೊಂಡ ಮನೀಷ್ ಪಾಂಡೆ ಕೇವಲ 83 ಎಸೆತಗಳಲ್ಲಿ ಶತಕ ಸಿಡಿಸಿ ಗಮನಸೆಳೆದರು. ತಮ್ಮ ಸ್ಪೋಟಕ ಇನ್ನಿಂಗ್ಸ್ ನ ಹಾದಿಯಲ್ಲಿ ಕೆಲವು ಅಪರೂಪದ ದಾಖಲೆಗಳನ್ನೂ ಮನೀಷ್ ಪಾಂಡೆ ಮಾಡಿದರು. ರಣಜಿ ಟ್ರೋಫಿಯಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚಿನ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎನ್ನುವ ಗೌರವ ಮನೀಷ್ ಪಾಂಡೆಯದ್ದಾಗಿದೆ. ಇದಕ್ಕೂ ಮುನ್ನ ಸ್ಟುವರ್ಟ್ ಬಿನ್ನಿ (46) ಹೆಸರಲ್ಲಿ ಈ ದಾಖಲೆ ಇತ್ತು. ಇದು ಮನೀಷ್ ಪಾಂಡೆ ಅವರ 21ನೇ ಪ್ರಥಮ ದರ್ಜೆ ಕ್ರಿಕೆಟ್ ಶತಕವೆನಿಸಿದೆ.

IPL 2022: ಈ ಬಾರಿಯ ಐಪಿಎಲ್ ನಲ್ಲಿ ರಬಾಡ ಎಸೆಯುವ ಒಂದೊಂದು ಎಸೆತಕ್ಕೂ ಇಷ್ಟೊಂದು ದುಡ್ಡಾ?
ಮನೀಷ್ ಪಾಂಡೆ ಆಟಕ್ಕೆ ಉತ್ತಮ ಸಾಥ್ ನೀಡಿದ ಕೆವಿ ಸಿದ್ಧಾರ್ಥ್ 153 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಅವಿನಾಶ್ ಯಾದವ್ ಅವರ ಎಸೆತವನ್ನು ಮಿಡ್ ವಿಕೆಟ್ ನಲ್ಲಿ ಸಿಕ್ಸರ್ ಗೆ ಅಟ್ಟುವ ಮೂಲಕ ಮೊದಲಿಗರಾಗಿ ಶತಕ ಪೂರೈಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಕೆವಿ ಸಿದ್ಧಾರ್ಥ್ ಅವರ ಮೂರನೇ ಶತಕ ಇದಾಗಿದೆ. 4ನೇ ವಿಕೆಟ್ ಗೆ ಈ ಜೋಡಿ ದೊಡ್ಡ ಮೊತ್ತದ ಜೊತೆಯಾಟವಾಡಿ ರೈಲ್ವೇಸ್ ತಂಡಕ್ಕೆ ಆತಂಕ ನೀಡಿದ್ದ ವೇಳೆಯಲ್ಲಿ. ಶಿವಂ ಚೌಧರಿ ಎಸೆತದಲ್ಲಿ ಮನೀಷ್ ಪಾಂಡೆ ಔಟಾಗುವುದರೊಂದಿಗೆ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಇದರ ಬೆನ್ನಲ್ಲಿಯೇ ಶರತ್ ಶ್ರೀನಿವಾಸ್ ಕೂಡ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಸಿದ್ದಾರ್ಥ್ ಹಾಗೂ ಶ್ರೇಯಸ್ ಗೋಪಾಲ್ ಇನ್ನಿಂಗ್ಸ್ ಅನ್ನು ಆಧರಿಸಿ ಶುಕ್ರವಾರಕ್ಕೆ ಬ್ಯಾಟಿಂಗ್ ಉಳಿಸಿಕೊಂಡರು.

IPL 2022: ಮದುವೆಯ ಖುಷಿಯಲ್ಲಿರುವ ಮ್ಯಾಕ್ಸ್‌ವೆಲ್‌, ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಸೆ..!
ವಿದ್ಯಾಧರ್ ಪಾಟೀಲ್, ವಿ.ವೈಶಾಕ್ ಪಾದಾರ್ಪಣೆ:  ಈ ಪಂದ್ಯದ ಮೂಲಕ ಯುವ ವೇಗದ ಬೌಲರ್ ಗಳಾದ ವಿದ್ಯಾಧರ್ ಪಾಟೀಲ್ ಹಾಗೂ ವೈಶಾಕ್ ವಿಜಯ್ ಕುಮಾರ್ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ಇತ್ತೀಚಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಇಬ್ಬರೂ ಅದ್ಭುತ ನಿರ್ವಹಣೆ ತೋರಿದ್ದರು.

ಕರ್ನಾಟಕ: 90 ಓವರ್ ಗಳಲ್ಲಿ 5 ವಿಕೆಟ್ ಗೆ 392 (ಮನೀಷ್ ಪಾಂಡೆ 156, ಕೆವಿ ಸಿದ್ಧಾರ್ಥ್ 140*, ಸಮರ್ಥ್ 47, ದೇವದತ್ ಪಡಿಕ್ಕಲ್ 21, ಮಯಾಂಕ್ ಅಗರ್ವಾಲ್ 16, ಎಸ್.ಶರತ್ 5, ಶ್ರೇಯಸ್ ಗೋಪಾಲ್ 1*, ಶಿವಂ ಚೌಧರಿ 22ಕ್ಕೆ 2, ಅವಿನಾಶ್ ಯಾದವ್ 132ಕ್ಕೆ 1, ಯುವರಾಜ್ 52ಕ್ಕೆ 1).​​​​​​​

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!