ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಶಾಕ್ ನೀಡಿದ ಹಿಮಾಚಲ!

By Suvarna News  |  First Published Dec 27, 2019, 9:49 AM IST

ರಣಜಿ ಟ್ರೋಫಿಯಲ್ಲಿ ಯಶಸ್ಸಿನ ಅಲೆಯಲ್ಲಿದ್ದ ಕರ್ನಾಟಕ ತಂಡಕ್ಕೆ ಹಿಮಾಚಲ ಪ್ರದೇಶ ಶಾಕ್ ನೀಡಿದೆ. ಮೊದಲ ಇನಿಂಗ್ಸ್ ಮೇಲುಗೈ ಸಾಧಿಸೋ ಮೂಲಕ ಯಶಸ್ಸು ಸಾಧಿಸಿದೆ. ರಿಷಿ ಹಾಗೂ ಪ್ರಿಯಾನ್ಶು ಹೋರಾಟದಿಂದ ಕರ್ನಾಟಕ ಹಿನ್ನಡೆ ಅನುಭವಿಸಿತು.


ಮೈಸೂರು(ಡಿ.27): ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ‘ಎ’ ಮತ್ತು ‘ಬಿ’ ಗುಂಪಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡ ಇನ್ನಿಂಗ್ಸ್‌ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಲ್ಲಿ 13 ವಿಕೆಟ್‌ಗಳು ಉರುಳಿದ್ದವು. 2ನೇ ದಿನದಾಟದಲ್ಲಿ ಹಿಮಾಚಲ ತಂಡದ ಆಟಗಾರರು ನಿಧಾನಗತಿಯ ಬ್ಯಾಟಿಂಗ್‌ ಹಾಗೂ ಕರ್ನಾಟಕ ವೇಗಿಗಳು ಅಲ್ಪ ಯಶಸ್ಸು ಸಾಧಿಸಿದ್ದು ಪ್ರಮುಖಾಂಶವಾಗಿದೆ.

ಇದನ್ನೂ ಓದಿ: ಸೋತ ಬಳಿಕ ಖ್ಯಾತೆ, ಕರ್ನಾಟಕ ವಿರುದ್ಧ ಜಗಳಕ್ಕೆ ನಿಂತ ತಮಿಳುನಾಡುಗೆ ತಕ್ಕ ಪಾಠ!

Tap to resize

Latest Videos

ಆರಂಭಿಕ ಬ್ಯಾಟ್ಸ್‌ಮನ್‌ ಪ್ರಿಯಾನ್ಶು ಖಂಡೂರಿ (69), ನಿಖಿಲ್‌ ಗಂಗ್ಟ(46) ಮತ್ತು ರಿಷಿ ಧವನ್‌ (72*) ಅವರ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ಹಿಮಾಚಲ ಪ್ರದೇಶ ಮುನ್ನಡೆ ಸಾಧಿಸಿತು. ಉಳಿದಂತೆ ಕರ್ನಾಟಕದ ತ್ರಿವಳಿ ವೇಗಿಗಳಾದ ಅಭಿಮನ್ಯು ಮಿಥುನ್‌, ವಿ. ಕೌಶಿಕ್‌ ಹಾಗೂ ಎಡಗೈ ವೇಗಿ ಪ್ರತೀಕ್‌ ಜೈನ್‌, ಹಿಮಾಚಲ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ದೊಡ್ಡ ಪೆಟ್ಟು ನೀಡುವಲ್ಲಿ ಯಶಸ್ವಿಯಾಯಿತು. ಈ ಮೂವರು ವೇಗಿಗಳು ಒಟ್ಟು 6 ವಿಕೆಟ್‌ ಪಡೆದರು. ಇದರಲ್ಲಿ ಕೌಶಿಕ್‌ 3, ಪ್ರತೀಕ್‌ 2 ಹಾಗೂ ಮಿಥುನ್‌ 1 ವಿಕೆಟ್‌ ಪಡೆದರು.

ಎರಡನೇ ದಿನವಾದ ಗುರುವಾರ 3 ವಿಕೆಟ್‌ಗೆ 29 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರಿಸಿದ ಹಿಮಾಚಲ ಪ್ರದೇಶ ದಿನದಾಟದಂತ್ಯಕ್ಕೆ 93 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 235 ರನ್‌ ಪೇರಿದ್ದುಘಿ, ಒಟ್ಟಾರೆ 69 ರನ್‌ಗಳ ಮುನ್ನಡೆ ಪಡೆದಿದೆ.

ಇದನ್ನೂ ಓದಿ: ಕರ್ನಾಟಕ ವಿರುದ್ಧದ ಸತತ ಸೋಲಿನ ಹತಾಶೆಯಲ್ಲಿ ತಮಿಳುನಾಡು ಕ್ರಿಕೆಟಿಗ ಕಾರ್ತಿಕ್ ಕಿರಿಕ್!

ಬುಧವಾರ ಮೊದಲ ದಿನದಾಟದ ಕೊನೆಯಲ್ಲಿ ಕೇವಲ 29 ರನ್‌ಗಳ ವೆಚ್ಚದಲ್ಲಿ ಪ್ರವಾಸಿ ತಂಡದ 3 ವಿಕೆಟ್‌ ಉರುಳಿಸುವ ಮೂಲಕ ತಿರುಗೇಟು ನೀಡಿದ್ದ ಆತಿಥೇಯ ಬೌಲರ್‌ಗಳು ದ್ವಿತೀಯ ದಿನ ಅದೇ ಹುಮ್ಮಸ್ಸಿನಲ್ಲಿ ಕಣಕ್ಕಿಳಿದರು. ಅಂತೆಯೇ ಡಾಗರ್‌ (4) ಅವರನ್ನು ಆರಂಭದಲ್ಲೇ ಔಟ್‌ ಮಾಡಿ ಮೇಲುಗೈ ಸಾಧಿಸಿದರು. ಆದರೆ, ಐದನೇ ವಿಕೆಟ್‌ಗೆ ಜತೆಗೂಡಿದ ಪ್ರಿಯಾನ್ಶು ಮತ್ತು ನಿಖಿಲ್‌ ಗಂಗ್ಟಕರ್ನಾಟಕದ ಬೌಲರ್‌ಗಳ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು. ತಾಳ್ಮೆಯಿಂದ ಆತಿಥೇಯ ಬೌಲರ್‌ಗಳನ್ನು ಎದುರಿಸಿದ ಈ ಜೋಡಿ ಅಮೂಲ್ಯ 90 ರನ್‌ ಕಲೆಹಾಕಿತು. ಕೊನೆಗೂ ಅರ್ಧಶತಕಕ್ಕೆ 4 ರನ್‌ ಬೇಕಿವೆ ಎನ್ನುವಾಗ ನಿಖಿಲ್‌ ಔಟಾದರು. ಬಳಿಕ ಪ್ರಿಯಾನ್ಶುಗೆ ರಿಷಿ ಧವನ್‌ ಸಾಥ್‌ ದೊರೆಯಿತು.

ಪ್ರಿಯಾನ್ಶು-ರಿಷಿ ಜುಗಲ್‌ಬಂದಿ:

ಪ್ರಿಯಾನ್ಶು ಮತ್ತು ರಿಷಿ ಧವನ್‌ ಅವರ ಜವಾಬ್ದಾರಿಯುತ ಆಟದ ಎದುರು ಇನಿಂಗ್ಸ್‌ ಹಿನ್ನಡೆಯಿಂದ ಪಾರಾಗಲು ಕರ್ನಾಟಕ ನಡೆಸಿದ ತಂತ್ರಗಳೆಲ್ಲವೂ ವಿಫಲವಾದವು. ಈ ಜೋಡಿ 6ನೇ ವಿಕೆಟ್‌ಗೆ 75 ರನ್‌ ಸೇರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿತು. 240 ಎಸೆತಗಳನ್ನು ಎದುರಿಸಿದ ಪ್ರಿಯಾನ್ಶು 8 ಬೌಂಡರಿ ಒಳಗೊಂಡ 69 ರನ್‌ ಗಳಿಸಿದರು. ಮಧ್ಯಮ ವೇಗಿ ವಿ. ಕೌಶಿಕ್‌ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ರಿಷಿಯನ್ನು ಸೇರಿಕೊಂಡ ಅಂಕುಶ್‌ ಬೈನ್ಸ್‌ (6) ಕ್ರೀಸ್‌ಗೆ ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಹಿಂತಿರುಗಿದರು. ಆದರೆ ಕೆಳ ಕ್ರಮಾಂಕದಲ್ಲಿ ಆಕಾಶ್‌ ವಶಿಷ್ಠ (18*) ಜತೆ ಇನಿಂಗ್ಸ್‌ ಮುಂದುವರಿಸಿರುವ ರಿಷಿ ಧವನ್‌, 96 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ ಒಳಗೊಂಡ 72 ರನ್‌ ಸೇರಿಸಿದ್ದು 3ನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಮೊದಲ ದಿನದಾಟದಲ್ಲಿ ಹಿಮಾಚಲ ತಂಡದ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ್ದ ಪ್ರತೀಕ್‌ ಜೈನ್‌, 2ನೇ ದಿನದಾಟದಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುವಲ್ಲಿ ವಿಫಲರಾದರು. ಆದರೆ ಮತ್ತೊಬ್ಬ ಮಧ್ಯಮ ವೇಗಿ ವಿ. ಕೌಶಿಕ್‌ ಎರಡನೇ ದಿನದಾಟದಲ್ಲಿ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾದರು. ಕೌಶಿಕ್‌ 3 ವಿಕೆಟ್‌ ಪಡೆದರು. 3ನೇ ದಿನದಾಟದಲ್ಲಿ ಹಿಮಾಚಲ ತಂಡವನ್ನು ಆದಷ್ಟುಬೇಗನೆ ಆಲೌಟ್‌ ಮಾಡಿ 2ನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಸೇರಿಸುವ ವಿಶ್ವಾಸದಲ್ಲಿ ಆತಿಥೇಯ ಕರ್ನಾಟಕ ತಂಡವಿದೆ.

ಸ್ಕೋರ್‌: ಕರ್ನಾಟಕ 166, ಹಿಮಾಚಲ ಪ್ರದೇಶ ಮೊದಲ ಇನ್ನಿಂಗ್ಸ್‌ 235/7

(ಪ್ರಿಯಾನ್ಶು 69, ರಿಷಿ ಧವನ್‌ 72*, ಕೌಶಿಕ್‌ 3-48, ಪ್ರತೀಕ್‌ 2-40)

click me!