
ಬೆಂಗಳೂರು(ಜೂ.22): 2022ರ ಸಾಲಿನ ರಣಜಿ ಟ್ರೋಫಿಯ ಫೈನಲ್ (Ranji Trophy Final) ಹಣಾಹಣಿಗೆ ವೇದಿಕೆ ಸಿದ್ಧವಾಗಿದ್ದು, 41 ಬಾರಿ ಚಾಂಪಿಯನ್ ಮುಂಬೈ ಹಾಗೂ 23 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವ ಮಧ್ಯಪ್ರದೇಶ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಕೋವಿಡ್ ಕಾರಣದಿಂದ ಕಳೆದ ಆವೃತ್ತಿ ರಣಜಿ ಟೂರ್ನಿ ನಡೆದಿರಲಿಲ್ಲ. ಈ ಬಾರಿ ಐಪಿಎಲ್‌ಗೂ ಮುನ್ನ ವಿವಿಧ ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆಸಲಾಗಿತ್ತು. ಐಪಿಎಲ್ ವೇಳೆ ಬಿಡುವು ಪಡೆದುಕೊಂಡ ಬಳಿಕ ರಣಜಿ ನಾಕೌಟ್ ಪಂದ್ಯಗಳು ಇದೇ ತಿಂಗಳಲ್ಲಿ ಆರಂಭವಾಗಿತ್ತು. 4 ಕ್ವಾರ್ಟರ್ ಫೈನಲ್ ಹಾಗೂ 2 ಸೆಮಿಫೈನಲ್ ಪಂದ್ಯಗಳಿಗೆ ಬೆಂಗಳೂರಿನ ಆಲೂರಿನಲ್ಲಿ ಒಂದೇ ಕಡೆಯಲ್ಲಿರುವ 3 ಕ್ರೀಡಾಂಗಣ ಹಾಗೂ ಜಸ್ಟ್ ಕ್ರಿಕೆಟ್ ಅಕಾಡೆಮಿಯ ಒಂದು ಕ್ರೀಡಾಂಗಣ ಆತಿಥ್ಯ ವಹಿಸಿತ್ತು.
ಎಲೈಟ್ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಮುಂಬೈ (Mumbai Cricket Team) ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದರೆ, 1 ಪಂದ್ಯ ಡ್ರಾ ಗೊಂಡಿತ್ತು. ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ನಾಕೌಟ್‌ಗೇರಿದ್ದ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ವಿಶ್ವದಾಖಲೆಯ 725 ರನ್ ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಬಳಿಕ ನಡೆದ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಇನ್ನಿಂಗ್‌್ಸ ಮುನ್ನಡೆ ಆಧಾರದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.
ಅತ್ತ ಮಧ್ಯಪ್ರದೇಶ (Madhya Pradesh) ಎಲೈಟ್ ‘ಎ’ ಗುಂಪಿನಲ್ಲಿ ಆಡಿದ್ದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1 ಪಂದ್ಯ ಡ್ರಾಗೊಳಿಸಿತ್ತು. 14 ಅಂಕದೊಂದಿಗೆ ಅಗ್ರಸ್ಥಾನ ಪಡೆದು ನಾಕೌಟ್ ತಲುಪಿದ್ದ ತಂಡ ಕ್ವಾರ್ಟರ್‌ನಲ್ಲಿ ಪಂಜಾಬ್ (Punjab Cricket Team) ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿತ್ತು. ಬಳಿಕ ಮೊದಲ ಸೆಮಿಫೈನಲ್‌ನಲ್ಲಿ ಬೆಂಗಾಲ್ (Bengal Cricket Team) ವಿರುದ್ಧ 174 ರನ್ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ತಲುಪಿದೆ.
ಕರ್ನಾಟಕ ರಣಜಿ ತಂಡವನ್ನು ತೊರೆಯಲಿರುವ ಕೆ.ಗೌತಮ್?
ಮುಂಬೈ ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ನೀಡಿದ್ದು, ಈ ಬಾರಿಯೂ ಚಾಂಪಿಯನ್ ಆಗುವ ಫೇವರಿಟ್ ಎನಿಸಿಕೊಂಡಿದೆ. 5 ಪಂದ್ಯಗಳಲ್ಲಿ 803 ರನ್ ಸಿಡಿಸಿರುವ ಸರ್ಫರಾಜ್ ಖಾನ್, ನಾಕೌಟ್‌ನಲ್ಲಿ ಸತತ 3 ಶತಕ ಸಿಡಿಸಿರುವ ಯಶಸ್ವಿ ಜೈಸ್ವಾಲ್, ಸ್ಫೋಟಕ ಆರಂಭಿಕ, ನಾಯಕ ಪೃಥ್ವಿ ಶಾ, 5 ಪಂದ್ಯಗಳಲ್ಲಿ 37 ವಿಕೆಟ್ ಕಬಳಿಸಿರುವ ಶಮ್ಸ್ ಮುಲಾನಿ ಮುಂಬೈ ತಂಡದ ಆಧಾರಸ್ತಂಭ. ಮತ್ತೊಂದೆಡೆ ರಜತ್ ಪತಿದಾರ್, ಯಶ್ ದುಬೆ, ಶುಭಂ ಶರ್ಮಾ ಮ.ಪ್ರದೇಶದ ಬ್ಯಾಟಿಂಗ್ ತಾರೆಗಳಾಗಿದ್ದು, ಕುಮಾರ್ ಕಾರ್ತಿಕೇಯ, ಗೌರವ್ ಯಾದವ್ ಅವರನ್ನೊಳಗೊಂಡ ಬೌಲಿಂಗ್ ಪಡೆಯೂ ಮ.ಪ್ರದೇಶಕ್ಕೆ ಬಲ ಒದಗಿಸಲಿದೆ.
59 ವರ್ಷದ ಬಳಿಕ ಪ್ರಶಸ್ತಿ ಗೆಲ್ಲುತ್ತಾ ಮಧ್ಯಪ್ರದೇಶ?
ಮೊದಲ ಆವೃತ್ತಿಯ ಚಾಂಪಿಯನ್ ಮುಂಬೈಗೆ ಇದು ದಾಖಲೆಯ 47ನೇ ಫೈನಲ್ ಆಗಿದ್ದು, 42ನೇ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ. ಇನ್ನು, ಮಧ್ಯಪ್ರದೇಶ 4 ಬಾರಿ ಚಾಂಪಿಯನ್ ಆಗಿದ್ದು, 1953ರಲ್ಲಿ ಕೊನೆ ಬಾರಿ ಪ್ರಶಸ್ತಿ ಗೆದ್ದಿದೆ. 7 ಬಾರಿ ಫೈನಲ್‌ನಲ್ಲಿ ಸೋತಿರುವ ಮಧ್ಯಪ್ರದೇಶ 59 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಆಗುವ ಕಾತರದಲ್ಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.