
ನವದೆಹಲಿ(ಜೂ.21): ಜಗತ್ತಿನಾದ್ಯಂತ ಇಂದು(ಜೂನ್ 21) ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (International Yoga Day) ಆಚರಿಸಲಾಗುತ್ತಿದೆ. ಇಂದು ಭಾರತದ ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಯೋಗಾಸನ ಮಾಡುವ ಮೂಲಕ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮತ್ತಷ್ಟ ರಂಗು ತಂದಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಮೈಸೂರಿನಲ್ಲಿ ಬೆಳಗ್ಗೆ 7ರಿಂದ 7.45ರವರೆಗೆ ವಿಶ್ವವಿಖ್ಯಾತ ಮೈಸೂರಿನ ಅರಮನೆಯಲ್ಲಿ ಸುಮಾರು 15 ಸಾವಿರ ಮಂದಿಯ ಜತೆ ಯೋಗಾಸನ ಮಾಡಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಭಾರತದ ಹಲವು ಕ್ರೀಡಾತಾರೆಯರು ತಾವು ಕೂಡಾ ತಾವಿದ್ದಲಿಂದಲೇ ಯೋಗಾಸನ ಮಾಡುವ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗಾಚರಣೆಗೆ ರಂಗು ತುಂಬಿದರು.
ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದ್ದು 2015ರಲ್ಲಿ. 2014ರ ಸೆಪ್ಟೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗದ ಮಹತ್ವದ ಕುರಿತಂತೆ ಭಾಷಣ ಮಾಡಿದ್ದರು. ಮೋದಿಯವರ ಭಾಷಣಕ್ಕೆ ಸಾಕಷ್ಟು ದೇಶಗಳು ಬೆಂಬಲ ಸೂಚಿಸಿದವು. ಇದರ ಪರಿಣಾಮ ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ವಿಶ್ವಸಂಸ್ಥೆಯು ಘೋಷಿಸಿತು.
ಯೋಗ ದಿನಕ್ಕೆ ಪ್ರಧಾನಿ ಮೋದಿ ಮೈಸೂರನ್ನು ಆಯ್ಕೆ ಮಾಡಿದ್ದು ಯಾಕೆ?
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ (Gautam Gambhir) ತಾವು ಧ್ಯಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ತಾವು ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಸಿಬ್ಬಂದಿಗಳ ಜತೆ ಸಮಯ ಕಳೆದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ತಾವು ಯೋಗ ಮಾಡುತ್ತಿರುವ ಫೋಟೋದ ಜತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಕರ್ನಾಟಕ ಮೂಲದ ಟೀಂ ಇಂಡಿಯಾ ಮಯಾಂಕ್ ಅಗರ್‌ವಾಲ್ (Mayank Agarwal) ಕೂಡಾ ತಾವು ಯೋಗ ಮಾಡುತ್ತಿರುವ ಫೋಟೋದ ಜತೆಗೆ ಯೋಗಾದಿಂದಲೇ ಎಲ್ಲವೂ ಆಗುತ್ತದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
“ಸಂತೋಷ, ತಾಜಾ ಮನಸ್ಸು ಮತ್ತು ಆರೋಗ್ಯಕರ ದೇಹ. ಈ ಮೂರನ್ನೂ ಯೋಗದಿಂದ ಸಾಧಿಸಬಹುದು. ನಿಮಗೆ ಯೋಗ ದಿನದ ಶುಭಾಶಯಗಳು. ಆರೋಗ್ಯಕರ ಜೀವನವನ್ನು ಹೊಂದಲು ಯೋಗವನ್ನು ಅಭ್ಯಾಸ ಮಾಡಲು ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ" ಎಂದು ಕ್ರಿಕೆಟಿಗ ರಿಷಿ ಧವನ್, ಜಿಮ್‌ನಲ್ಲಿನ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸರಾಂತ ಶೂಟರ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಮನು ಭಾಕರ್ ಕೂಡ ಕೂ ಆಪ್‌ನಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಹುಲ್ಲುಹಾಸಿನಲ್ಲಿ ಯೋಗಾಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. “ಎಲ್ಲರೂ ಯೋಗ ಮಾಡೋಣ. ಪ್ರತಿ ದಿನ" ಎಂದು ಹೇಳಿದ್ದಾರೆ.
ಕುಸ್ತಿ ಚಾಂಪಿಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಬಬಿತಾ ಫೋಗಟ್ ಅವರು ತಮ್ಮ ಸ್ಥಳದಲ್ಲಿ ಸೂರ್ಯನ ಬೆಳಕಿನಲ್ಲಿರುವ ಹುಲ್ಲುಹಾಸುಗಳಲ್ಲಿ ಪ್ರಾಣಾಯಾಮ ಮತ್ತು ಆಸನಗಳನ್ನು ಮಾಡುತ್ತಿರುವ ಚಿತ್ರಗಳನ್ನು ಶೇರ್ ಮಾಡಿ “ಜಾಗತಿಕ ಯೋಗಕ್ಷೇಮಕ್ಕೆ ಯೋಗವು ಭಾರತದ ಅತ್ಯುತ್ತಮ ಕೊಡುಗೆಗಳಲ್ಲಿ ಒಂದಾಗಿದೆ. ನಾವೆಲ್ಲರೂ ನಿಯಮಿತವಾಗಿ ಮತ್ತು ಶಿಸ್ತುಬದ್ಧವಾಗಿ ಯೋಗವನ್ನು ಅಭ್ಯಾಸ ಮಾಡಲು ಬದ್ಧರಾಗೋಣ. ” ಎಂದು ಬರೆದುಕೊಂಡಿದ್ದಾರೆ.
ಇದಷ್ಟೇ ಚೇತೇಶ್ವರ್ ಪೂಜಾರ, ಇಶಾಂತ್ ಶರ್ಮಾ, ಹರ್ಭಜನ್ ಸಿಂಗ್ ಅಲ್ಲದೇ ಮಹಿಳಾ ಕ್ರಿಕೆಟಿಗರಾದ ಮಿಥಾಲಿ ರಾಜ್, ದೀಪ್ತಿ ಶರ್ಮಾ ಕೂಡಾ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಶುಭ ಕೋರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.