
ಕೋಲ್ಕತ್ತಾ: ರಣಜಿ ಟ್ರೋಫಿಯಲ್ಲಿ ಸತತ ಎರಡನೇ ಪಂದ್ಯದಲ್ಲೂ ಮೊಹಮ್ಮದ್ ಶಮಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಗುಜರಾತ್ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಶಮಿ, ಪಂದ್ಯದಲ್ಲಿ ಒಟ್ಟು ಎಂಟು ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು. ಶಮಿ ಅವರ ಬೌಲಿಂಗ್ ಪ್ರದರ್ಶನದ ಬಲದಿಂದ ಬಂಗಾಳ 141 ರನ್‌ಗಳ ಜಯ ಸಾಧಿಸಿತು.
327 ರನ್‌ಗಳ ಗೆಲುವಿನ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಗುಜರಾತ್ 185 ರನ್‌ಗಳಿಗೆ ಆಲೌಟ್ ಆಯಿತು. ಇದು ಬಂಗಾಳದ ಸತತ ಎರಡನೇ ಜಯವಾಗಿದೆ. ಮೊದಲ ಪಂದ್ಯದಲ್ಲಿ ಬಂಗಾಳ, ಉತ್ತರಾಖಂಡವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಶಮಿ ಏಳು ವಿಕೆಟ್ ಪಡೆದಿದ್ದರು. ಈ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮುಟ್ಟಿನೋಡಿಕೊಳ್ಳುವಂತ ಉತ್ತರವನ್ನು ಶಮಿ ನೀಡಿದ್ದಾರೆ. ಮೊಹಮ್ಮದ್ ಶಮಿ ಗುಜರಾತ್ ಎದುರು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 38 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಗೆಲುವಿನ ಗುರಿ ಬೆನ್ನಟ್ಟಿದ ಗುಜರಾತ್ ಪರ ಉರ್ವಿಲ್ ಪಟೇಲ್ (ಔಟಾಗದೆ 109) ಶತಕ ಬಾರಿಸಿದರು. 45 ರನ್ ಗಳಿಸಿದ ಜೈಮೀತ್ ಪಟೇಲ್ ಉತ್ತಮ ಪ್ರದರ್ಶನ ನೀಡಿದರು. ಆರ್ಯ ದೇಸಾಯಿ (13) ಎರಡಂಕಿ ದಾಟಿದ ಮತ್ತೊಬ್ಬ ಆಟಗಾರ. ಶಮಿ ಜೊತೆಗೆ ಶಹಬಾಜ್ ಅಹ್ಮದ್ ಮೂರು ವಿಕೆಟ್ ಪಡೆದರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬಂಗಾಳ ಮೊದಲ ಇನ್ನಿಂಗ್ಸ್‌ನಲ್ಲಿ 279 ರನ್‌ಗಳಿಗೆ ಆಲೌಟ್ ಆಗಿತ್ತು. ಸುಮಂತ್ ಗುಪ್ತಾ (63), ಸುದೀಪ್ ಕುಮಾರ್ ಘರಾಮಿ (56), ಅಭಿಷೇಕ್ ಪೋರೆಲ್ (51) ಉತ್ತಮ ಪ್ರದರ್ಶನ ನೀಡಿದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಗುಜರಾತ್ 167 ರನ್‌ಗಳಿಗೆ ಆಲೌಟ್ ಆಯಿತು. 80 ರನ್ ಗಳಿಸಿದ ಮನನ್ ಹಿಂಗ್ರಾಜಿಯಾ ಮಾತ್ರ ಗುಜರಾತ್ ಪರ ಮಿಂಚಿದರು. ಶಹಬಾಜ್ ಆರು ಮತ್ತು ಶಮಿ ಮೂರು ವಿಕೆಟ್ ಪಡೆದರು. ಬಂಗಾಳ 112 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬಂಗಾಳ 8 ವಿಕೆಟ್‌ಗೆ 214 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಸುದೀಪ್ ಕುಮಾರ್ (54) ಮತ್ತು ಅನುಸ್ತೂಪ್ ಮಜುಂದಾರ್ (58) ಮಿಂಚಿದರು. 327 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಗುಜರಾತ್ 185 ರನ್‌ಗಳಿಗೆ ಆಲೌಟ್ ಆಯಿತು.
ಇತ್ತೀಚೆಗೆ ಮೊಹಮ್ಮದ್ ಶಮಿ ಹಲವು ವಿಚಾರದಲ್ಲಿ ಸುದ್ದಿಯಲ್ಲಿದ್ದರು. ರಾಷ್ಟ್ರೀಯ ತಂಡಕ್ಕೆ ಪರಿಗಣಿಸದ ಬಗ್ಗೆ ಶಮಿ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ವಿರುದ್ಧ ಶಮಿ ಮಾತನಾಡಿದ್ದರು. ಶಮಿ ಫಿಟ್ ಇಲ್ಲ, ಅದಕ್ಕಾಗಿಯೇ ಅವರನ್ನು ಆಸ್ಟ್ರೇಲಿಯಾ ಎದುರಿನ ಸರಣಿಗೆ ಪರಿಗಣಿಸಿಲ್ಲ ಎಂದು ಅಗರ್ಕರ್ ಹೇಳಿದ್ದರು. 'ಅಗರ್ಕರ್ ಏನು ಬೇಕಾದರೂ ಹೇಳಲಿ, ನಾನು ಫಿಟ್ ಆಗಿದ್ದೇನೆಯೇ ಇಲ್ಲವೇ ಎಂಬುದು ಈ ಪಂದ್ಯ ನೋಡಿದ ನಿಮಗೆಲ್ಲರಿಗೂ ಗೊತ್ತಾಗಿದೆ' ಎಂದು ಶಮಿ ಜಾರ್ಖಂಡ್ ವಿರುದ್ಧದ ಪಂದ್ಯದ ನಂತರ ಮಾಧ್ಯಮಗಳಿಗೆ ತಿಳಿಸಿದ್ದರು. ತಂಡದಿಂದ ಕೈಬಿಟ್ಟಿರುವ ಬಗ್ಗೆ ಮತ್ತು ಫಿಟ್‌ನೆಸ್ ಬಗ್ಗೆ ಶಮಿ ತಮ್ಮ ಬಳಿ ಹೇಳಿದ್ದರೆ, ಆಗಲೇ ಉತ್ತರ ನೀಡುತ್ತಿದ್ದೆ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.