
ಮುಲ್ಲಾನ್ಪುರ:: ಈ ಬಾರಿ ಐಪಿಎಲ್‌ನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಪಂಜಾಬ್ ಕಿಂಗ್ಸ್ ಮೊದಲ ಸೋಲು ಕಂಡಿದೆ. ಶನಿವಾರ ರಾಜಸ್ಥಾನ ವಿರುದ್ಧ ಪಂಜಾಬ್ ಕಿಂಗ್ಸ್ 50 ರನ್‌ಗಳಿಂದ ಸೋತಿತು. ರಾಜಸ್ಥಾನ ಸತತ 2ನೇ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 4 ವಿಕೆಟ್‌ಗೆ 205 ರನ್ ಕಲೆಹಾಕಿತು. ಆರಂಭಿಕ ಕೆಲ ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡಿದ್ದ ರಾಜಸ್ಥಾನ ರಾಯಲ್ಸ್ ತಂಡದ ಎಡಗೈ ಆರಂಭಿಕ ಬ್ಯಾಟರ್ ಸ್ಪೋಟಕ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಪಂಜಾಬ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಜೈಸ್ವಾಲ್ 45 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಚುರುಕಿನ 67 ರನ್ ಸಿಡಿಸಿದರು. ಅಂದಹಾಗೆ ಇದು ಟೂರ್ನಿಯಲ್ಲಿ ಜೈಸ್ವಾಲ್ ಬಾರಿಸಿದ ಮೊದಲ 50+ ಸ್ಕೋರ್ ಎನಿಸಿಕೊಂಡಿತು. ಇನ್ನುಳಿದಂತೆ ರಿಯಾನ್ ಪರಾಗ್ 43, ನಾಯಕ ಸಂಜು ಸ್ಯಾಮ್ಸನ್ 38, ಶಿಮ್ರೊನ್ ಹೆಟ್ಮೇಯರ್ 20, ಧ್ರುವ್ ಜುರೆಲ್ 13 ರನ್ ಸಿಡಿಸಿದರು.
ಪಂಜಾಬ್ ಕಿಂಗ್ಸ್ ತಂಡದ ಕಿವೀಸ್ ಮೂಲದ ವೇಗಿ ಲಾಕಿ ಫರ್ಗ್ಯೂಸನ್ 37 ರನ್ ನೀಡಿ ಎರಡು ವಿಕೆಟ್ ಪಡೆದರೆ, ಅರ್ಶದೀಪ್ ಸಿಂಗ್ ಹಾಗೂ ಮಾರ್ಕೊ ಯಾನ್ಸೆನ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ದೊಡ್ಡ ಗುರಿ ಬೆನ್ನತ್ತಿದ ಪಂಜಾಬ್, ನೇಹಲ್ ವಧೇರಾ ಹೋರಾಟದ ಹೊರತಾಗಿಯೂ 09 ವಿಕೆಟ್‌ಗೆ 155 ರನ್ ಗಳಿಸಿ 50 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು. 6.2 ಓವರಲ್ಲಿ 43 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ನೇಹಲ್-ಮ್ಯಾಕ್ಸ್‌ವೆಲ್ ತಂಡಕ್ಕೆ ಆಸರೆಯಾದರು. ಆದರೆ 62 ರನ್ ಗಳಿಸಿದ್ದ ನೇಹಲ್ ಹಾಗೂ 30 ರನ್ ಬಾರಿಸಿದ್ದ ಮ್ಯಾಕ್ಸ್‌ವೆಲ್ ಸತತ 2 ಎಸೆತಗಳಲ್ಲಿ ಔಟಾದ ಬಳಿಕ ತಂಡಕ್ಕೆ ಗೆಲ್ಲಲಾಗಲಿಲ್ಲ.
ಜೋಫ್ರಾ ಆರ್ಚರ್ ಮಾರಕ ದಾಳಿ: ರಾಜಸ್ಥಾನ ರಾಯಲ್ಸ್ ತಂಡದ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿರುವ ಜೋಫ್ರಾ ಆರ್ಚರ್ ಮೊದಲ ಓವರ್‌ನಲ್ಲೇ ಮಾರಕ ದಾಳಿ ನಡೆಸಿ ಎರಡು ವಿಕೆಟ್ ಪಡೆಯುವ ಮೂಲಕ ಹಳೆಯ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ತಾವೆಸೆದ ಮೊದಲ ಎಸೆತದಲ್ಲೇ ಪ್ರಿಯಾನ್ಶ್ ಆರ್ಯನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಆರ್ಚರ್, ಓವರ್‌ನ ಕೊನೆಯ ಎಸೆತದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಒಟ್ಟಾರೆ ಮೂರು ವಿಕೆಟ್ ಕಬಳಿಸಿ ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್ಚರ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸ್ಕೋರ್: ರಾಜಸ್ಥಾನ 205/4 (ಜೈಸ್ವಾಲ್ 67, ರಿಯಾನ್ 43, ಫರ್ಗ್ಯೂಸನ್ 2-37), ಪಂಜಾಬ್ 155/9 (ನೇಹಲ್ 62, ಮ್ಯಾಕ್ಸ್‌ವೆಲ್ 30, ಆರ್ಚರ್ 25/3)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.