ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಭರದ ಸಿದ್ದತೆ
ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿರುವ ಕ್ರಿಕೆಟ್ ವಿಶ್ವಕಪ್
ಮಳೆಯ ಭೀತಿಗೆ ಕೌಂಟರ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
ನವದೆಹಲಿ(ಜು.30): ಐಪಿಎಲ್ ಫೈನಲ್ ವೇಳೆ ಆದ ಸಮಸ್ಯೆ, ಮುಜುಗರ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ವೇಳೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಬಿಸಿಸಿಐ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದ್ದು, ಈ ಎರಡು ತಿಂಗಳು ದೇಶದ ಕೆಲ ಭಾಗಗಳಲ್ಲಿ ಸಾಮಾನ್ಯವಾಗಿ ಮಳೆಯಾಗುವ ಕಾರಣ, ಪೂರ್ತಿ ಮೈದಾನ ಮುಚ್ಚಲು ಅಗತ್ಯವಿರುವ ವ್ಯವಸ್ಥೆ ಮಾಡಿಕೊಳ್ಳಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಜ್ಯ ಸಂಸ್ಥೆಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ವಿಶ್ವಕಪ್ ಸಿದ್ಧತೆಯ ಅವಲೋಕನಕ್ಕಾಗಿ ಪಂದ್ಯಗಳಿಗೆ ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಶಾ, ಮಳೆಯಿಂದಾಗಿ ಪಂದ್ಯಗಳಿಗೆ ಅಡಚಣೆಯಾಗಬಾರದು. ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಿಸಲು ಸಾಧ್ಯವಿರುವಂತೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
undefined
ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್ ವೇಳೆ ಮಳೆ ನಿಂತು ಹಲವು ಗಂಟೆಗಳಾದರೂ ಮೈದಾನದಲ್ಲಿ ನೀರು ನಿಂತಿದ್ದ ಕಾರಣ ಆಟ ಆರಂಭಿಸಲು ಸಾಧ್ಯವಾಗಿರಲಿಲ್ಲ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನ್ನುವ ಹಿರಿಮೆ ಹೊಂದಿದ್ದರೂ, ಮಳೆ ನೀರು ಹೊರಹಾಕಲು ಮೈದಾನ ಸಿಬ್ಬಂದಿ ಪಟ್ಟಿದ್ದ ಹರಸಾಹಸ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರಿಂದಾಗಿ ಗುಜರಾತ್ ಕ್ರಿಕೆಟ್ ಸಂಸ್ಥೆ(ಜಿಸಿಎ) ಮುಜುಗರಕ್ಕೊಳಗಾಗಿತ್ತು.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ?
ಈಡನ್ ಗಾರ್ಡನ್ಸ್ ಮಾದರಿ!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್-ಏರ್ ವ್ಯವಸ್ಥೆ ಇದೆ. ಎಷ್ಟೇ ಮಳೆ ಬಂದರೂ, ಮಳೆ ನಿಂತ 20 ನಿಮಿಷಗಳಲ್ಲಿ ಆಟ ಆರಂಭಿಸಬಹುದು. ಭಾರತದ ಪ್ರಮುಖ ಕ್ರೀಡಾಂಗಣಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಬೇಕು ಎನ್ನುವ ಸಲಹೆ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ, ಇನ್ನೂ ಸಾಧ್ಯವಾಗಿಲ್ಲ. ಆದರೆ ದೇಶದಲ್ಲಿ ಮಳೆ ಬೀಳುವಾಗ ಇಡೀ ಮೈದಾನಕ್ಕೆ ಹೊದಿಕೆ ಹೊದಿಸುವ ವ್ಯವಸ್ಥೆ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಮಾತ್ರ ಇದೆ. ಕೆಲ ವರ್ಷಗಳ ಹಿಂದೆ ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದಾಗ ಇಂಗ್ಲೆಂಡ್‌ನಿಂದ ಉತ್ತಮ ಗುಣಮಟ್ಟದ ಕವರ್‌ಗಳನ್ನು ತರಿಸಿದ್ದರು. 2016ರ ಟಿ20 ವಿಶ್ವಕಪ್ ವೇಳೆ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಸುಮಾರು ಎರಡೂವರೆ ಗಂಟೆ ಮಳೆ ಸುರಿದಿತ್ತು. ಇಡೀ ಮೈದಾನಕ್ಕೆ ಹೊದಿಕೆ ಹೊದಿಸಿದ್ದ ಕಾರಣ, ಪಂದ್ಯ ಕೇವಲ 1 ಗಂಟೆ ತಡವಾಗಿ ಆರಂಭಗೊಂಡಿತ್ತು. ಬರೀ 2 ಓವರ್ ಕಡಿತಗೊಳಿಸಲಾಗಿತ್ತು. 2 ವರ್ಷಗಳ ಹಿಂದೆ ಬಂಗಾಳ ಸಂಸ್ಥೆ ಕವರ್‌ಗಳನ್ನು ಬದಲಿಸಿದಾಗ 80 ಲಕ್ಷ ರು. ವೆಚ್ಚವಾಗಿತ್ತಂತೆ. ಸದ್ಯ 1 ಕೋಟಿ ರು. ಆಗಬಹುದು. ಈ ರೀತಿಯ ಹೊದಿಕೆಗಳನ್ನು ಖರೀದಿಸುವ ಸಾಮರ್ಥ್ಯ ಭಾರತದ ಎಲ್ಲಾ ರಾಜ್ಯ ಸಂಸ್ಥೆಗಳಿಗೂ ಇದೆ.
ವಿಶ್ವಕಪ್ ವೇಳೆ ಪ್ರೇಕ್ಷಕರಿಗೆ ಕುಡಿಯುವ ನೀರು ಉಚಿತ
ಸಾವಿರಾರು ರುಪಾಯಿ ನೀಡಿ ಟಿಕೆಟ್ ಖರೀದಿಸುವ ಅಭಿಮಾನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎನ್ನುವ ಕೂಗು ಹೆಚ್ಚುತ್ತಿರುವಾಗಲೇ ಬಿಸಿಸಿಐ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ವಿಶ್ವಕಪ್ ವೇಳೆ ಎಲ್ಲಾ ಕ್ರೀಡಾಂಗಣಗಳಲ್ಲೂ ಪ್ರೇಕ್ಷಕರಿಗೆ ಕುಡಿಯುವ ನೀರನ್ನು ಉಚಿತವಾಗಿ ಪೂರೈಕೆ ಮಾಡುವುದಾಗಿ ಘೋಷಿಸಿದೆ. ಸಾಮಾನ್ಯವಾಗಿ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರು ಹಣ ನೀಡಿ ನೀರಿನ ಬಾಟಲಿಗಳನ್ನು ಖರೀದಿಸಬೇಕು.
Breaking News: ವಿಶ್ವಕಪ್ ವೇಳಾಪಟ್ಟಿಯಲ್ಲಿ ಶೀಘ್ರ ಬದಲಾವಣೆ: ಜಯ್ ಶಾ
ಆಗಸ್ಟ್ 10ರಿಂದ ಟಿಕೆಟ್ ಮಾರಾಟ?
ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟ ಅ.10ರಿಂದ ಆರಂಭಗೊಳ್ಳಲಿದೆ ಎನ್ನಲಾಗಿದೆ. ಟಿಕೆಟ್‌ಗಳ ಬೆಲೆಯನ್ನು ಅಂತಿಮಗೊಳಿಸಿ ಜು.31ರೊಳಗೆ ಪಟ್ಟಿ ಸಲ್ಲಿಸಲು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಜಯ್ ಶಾ ಸೂಚಿಸಿದ್ದಾರೆ. ಇದೇ ವೇಳೆ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದರೂ ಕೌಂಟರ್‌ಗಳಲ್ಲಿ ಟಿಕೆಟ್‌ನ ಪ್ರತಿ ಪಡೆಯುವುದು ಕಡ್ಡಾಯ ಎಂದು ಶಾ ಸ್ಪಷ್ಟಪಡಿಸಿದ್ದಾರೆ. ಐಪಿಎಲ್ ಫೈನಲ್ ವೇಳೆ ಆದ ಭಾರೀ ಎಡವಟ್ಟು ತಡೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಶಾ, ಕ್ರೀಡಾಂಗಣ ಕೌಂಟರ್‌ಗಳಲ್ಲದೇ ಆಯಾ ನಗರಗಳಲ್ಲಿ 8-10 ಕಡೆ ಟಿಕೆಟ್ ಪ್ರತಿಯನ್ನು ಪಡೆಯಲು ವ್ಯವಸ್ಥೆ ಮಾಡಲಿದ್ದೇವೆ. ಪಂದ್ಯಕ್ಕೆ ಒಂದು ವಾರ ಮೊದಲೇ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ ಎಂದು ಶಾ ಹೇಳಿದ್ದಾರೆ. ಐಪಿಎಲ್ ವೇಳೆ ಆನ್‌ಲೈನ್ ಟಿಕೆಟ್ ಕಾಯ್ದಿರಿಸಿದ್ದ ಸಾವಿರಾರು ಮಂದಿ ಟಿಕೆಟ್ ಪ್ರತಿಗಳನ್ನು ಪಡೆಯಲು ಕ್ರೀಡಾಂಗಣದ ಬಳಿ ಒಟ್ಟಿಗೆ ಹೋಗಿದ್ದಾಗ ಕಾಲ್ತುಳಿತ ಉಂಟಾಗಿ ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಐಸಿಸಿ ತಂಡ ಮೆಚ್ಚುಗೆ
ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಎಲ್ಲಾ ಕ್ರೀಡಾಂಗಣಗಳನ್ನು ಪರಿಶೀಲಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತಂಡ ಭಾರತಕ್ಕೆ ಆಗಮಿಸಿದೆ. ಪ್ರತಿ ಕ್ರೀಡಾಂಗಣಕ್ಕೂ ತೆರಳಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವ ತಂಡ, ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿತ್ತು. ಇಲ್ಲಿನ ವ್ಯವಸ್ಥೆಯ ಬಗ್ಗೆ ಐಸಿಸಿ ತಂಡ ತೃಪ್ತಿ ವ್ಯಕ್ತಪಡಿಸಿದೆ ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.