ಭಾರತವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್ ಮೇಲೆಯೇ ಜನಾಂಗೀಯ ನಿಂದನೆ! ಛೇ ಇದೆಂಥಾ ಅವಮಾನ! ಕಾಂಗ್ರೆಸ್ ದೂರು

Published : Mar 03, 2026, 12:20 PM IST
IND vs WI Sanju Samson

ಸಾರಾಂಶ

ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್‌ಗೆ ತಲುಪಿಸಿದ ಸಂಜು ಸ್ಯಾಮ್ಸನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಎದುರಾಗಿದೆ. ಈ ಕುರಿತು ಕೇರಳ ಕಾಂಗ್ರೆಸ್ ಘಟಕವು ಕೇಂದ್ರ ಸಚಿವರಿಗೆ ದೂರು ನೀಡಿದೆ.

ಕೋಲ್ಕತಾ: ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನ ಹೀರೋ, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಮಾಡಲಾಗಿದೆ. ಈ ಬಗ್ಗೆ ಕೇರಳ ಕಾಂಗ್ರೆಸ್ ಘಟಕ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ದೂರು ನೀಡಿದೆ.

ಸಂಜು ಸ್ಯಾಮ್ಸನ್ ಮೈಬಣ್ಣದ ಬಗ್ಗೆ ಅವಮಾನಕರ ಪೋಸ್ಟ್

ಭಾನುವಾರ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಪಂದ್ಯ ನಡೆದಿತ್ತು. ಸಂಜು 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಪಂದ್ಯ ಮುಗಿದ ಬೆನ್ನಲ್ಲೇ 'X' (ಹಿಂದಿನ ಟ್ವಿಟರ್) ನಲ್ಲಿ ವಿವಾದಾತ್ಮಕ ಪೋಸ್ಟ್ ಒಂದು ಕಾಣಿಸಿಕೊಂಡಿದೆ. ಸಂಜು ಫೋಟೋ ಹಾಕಿ, 'ಕಪ್ಪು ಶಕ್ತಿಗಳನ್ನು ಸೋಲಿಸಲು ಕಪ್ಪು ಶಕ್ತಿಗಳಿಗೇ ಸಾಧ್ಯ, ಚೆನ್ನಾಗಿ ಆಡಿದ್ದೀಯಾ ಸಂಜು ಸ್ಯಾಮ್ಸನ್' ಎಂದು ಬರೆಯಲಾಗಿತ್ತು. ಈ ಪೋಸ್ಟ್ ವೆಸ್ಟ್ ಇಂಡೀಸ್ ಆಟಗಾರರು ಮತ್ತು ಸಂಜು ಇಬ್ಬರನ್ನೂ ಗುರಿಯಾಗಿಸಿಕೊಂಡಿತ್ತು.

ಈ ಪೋಸ್ಟ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಜು ಅವರ ಮೈಬಣ್ಣವನ್ನು ನಿಂದಿಸುವ ಈ ಪೋಸ್ಟ್ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇರಳ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ 'X' ಮೂಲಕವೇ ತಮ್ಮ ಆಕ್ರೋಶವನ್ನು ಹೊರಹಾಕಿದೆ.

 

'ಇಂತಹ ಕೆಟ್ಟ ಜನಾಂಗೀಯ ನಿಂದನೆಗೆ ಭಾರತದಲ್ಲಿ ಜಾಗವಿಲ್ಲ. ಕೇರಳದ ಹೆಮ್ಮೆಯಾದ ಸಂಜು ಸ್ಯಾಮ್ಸನ್ ಅವರನ್ನು ಗುರಿಯಾಗಿಸಿ ಇಂತಹ ಅಸಹ್ಯಕರ ಕಾಮೆಂಟ್ ಪೋಸ್ಟ್ ಮಾಡಿದ ಖಾತೆಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಕೇಂದ್ರ ಸಚಿವರನ್ನು ಒತ್ತಾಯಿಸುತ್ತೇವೆ' ಎಂದು ಕಾಂಗ್ರೆಸ್ ತನ್ನ ಪೋಸ್ಟ್‌ನಲ್ಲಿ ಹೇಳಿದೆ. ಅತ್ತ, ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸಂಜು, ತಾನು ಸದ್ಯಕ್ಕೆ ಸೋಶಿಯಲ್ ಮೀಡಿಯಾ ಮತ್ತು ಫೋನ್‌ನಿಂದ ದೂರ ಉಳಿದಿರುವುದಾಗಿ ಹೇಳಿಕೊಂಡಿದ್ದಾರೆ.

'ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇತ್ತು. ಫೋನ್ ಮತ್ತು ಸೋಶಿಯಲ್ ಮೀಡಿಯಾ ಆಫ್ ಮಾಡಿ, ನನ್ನ ಮೇಲೆ ನಾನು ಗಮನ ಹರಿಸಿದೆ. ಇಂತಹ ಮಹತ್ವದ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ್ದಕ್ಕೆ ತುಂಬಾ ಖುಷಿಯಾಗಿದೆ' ಎಂದು ಸಂಜು ಹೇಳಿದ್ದಾರೆ. ಹೊರಗಿನ ಟೀಕೆಗಳು ಅಥವಾ ನಿಂದನೆಗಳು ತನ್ನ ಆಟದ ಮೇಲೆ ಪರಿಣಾಮ ಬೀರದಂತೆ ಸಂಜು ತೋರಿದ ಎಚ್ಚರಿಕೆಯನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಆದರೆ, ಸಂಜು ವಿರುದ್ಧದ ಈ ಸೈಬರ್ ದಾಳಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ.

ಹೇಗಿತ್ತು ಸಂಜು ಸ್ಯಾಮ್ಸನ್ ಆಟ?

ವೆಸ್ಟ್ ಇಂಡೀಸ್ ನೀಡಿದ್ದ 196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ತಲಾ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಸೂರ್ಯ 16 ಎಸೆತಗಳನ್ನು ಎದುರಿಸಿ ಕೇವಲ 18 ರನ್ ಬಾರಿಸಿದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರು, ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 97 ರನ್ ಸಿಡಿಸುವ ಮೂಲಕ ತಂಡವನ್ನು ಇನ್ನೂ 4 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು.

ಸೆಮಿಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಫೈಟ್!

ಇದೀಗ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಮಾರ್ಚ್ 05ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ! ಮತ್ತೆ ಮೈದಾನಕ್ಕಿಳಿಯಲು ರೋ-ಕೋ ಜೋಡಿ ರೆಡಿ
2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ