ಪಿಎಸ್‌ಎಲ್ 2021: ಬೆನ್‌ ಡಂಕ್‌ಗೆ ಭೀಕರ ಗಾಯ, 7 ಹೊಲಿಗೆ ಹಾಕಿಸಿಕೊಂಡ ವಿಕೆಟ್‌ ಕೀಪರ್

By Suvarna NewsFirst Published Jun 7, 2021, 12:23 PM IST
Highlights

* ಪಿಎಸ್‌ಎಲ್ ಟೂರ್ನಿಗೂ ಮುನ್ನವೇ ಲಾಹೋರ್ ಖಲಂದರ್ಸ್ ತಂಡಕ್ಕೆ ಶಾಕ್

* ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಡಂಕ್‌ಗೆ ಭೀಕರ ಗಾಯ

* ಅರ್ಧಕ್ಕೆ ಸ್ಥಗಿತಗೊಂಡಿರುವ ಪಾಕಿಸ್ತಾನ ಸೂಪರ್‌ ಲೀಗ್ ಟೂರ್ನಿಯು ಯುಎಇನ ಅಬುಧಾಬಿಯಲ್ಲಿ ಪುನಾರಾರಂಭ

ಅಬುಧಾಬಿ(ಜೂ.07): ಲಾಹೋರ್ ಖಲಂದರ್ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್ ಬೆನ್ ಡಂಕ್ ಕ್ಯಾಚ್‌ ಅಭ್ಯಾಸ ನಡೆಸುವ ವೇಳೆ ತೀವ್ರ ಗಾಯಕ್ಕೆ ಒಳಗಾಗಿದ್ದಾರೆ. ಪರಿಣಾಮ ಡಂಕ್ ಮೇಲ್ದುಟಿಗೆ 7 ಹೊಲಿಗೆ ಹಾಕಲಾಗಿದೆ.

ಅರ್ಧಕ್ಕೆ ಸ್ಥಗಿತಗೊಂಡಿರುವ ಪಾಕಿಸ್ತಾನ ಸೂಪರ್‌ ಲೀಗ್ ಟೂರ್ನಿಯು ಯುಎಇನ ಅಬುಧಾಬಿಯಲ್ಲಿ ಪುನಾರಾರಂಭವಾಗಲಿದೆ. ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಲಾಹೋರ್ ಖಲಂದರ್ ತಂಡಕ್ಕೆ ಬಿಗ್ ಶಾಕ್ ಎದುರಾದಂತೆ ಆಗಿದೆ. ಅಭ್ಯಾಸದ ವೇಳೆ ಕ್ಯಾಚ್‌ ಪಡೆಯುವ ಯತ್ನದಲ್ಲಿ ಚೆಂಡು ಮೂಗು ಹಾಗೂ ಮೇಲ್ದುಟಿಯ ನಡುವೆ ಅಪ್ಪಳಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಇದೀಗ 34 ವರ್ಷದ ಬೆನ್ ಡಂಕ್ ಅವರಿಗೆ 7 ಹೊಲಿಗೆ ಹಾಕಲಾಗಿದೆ. 6ನೇ ಆವೃತ್ತಿಯ ಪಿಎಸ್‌ಎಲ್ ಟೂರ್ನಿಯಲ್ಲಿ ಖಲಂದರ್ಸ್‌ ತಂಡವು ಆಡಿದ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ: ಪಾಕ್‌ ಕ್ರಿಕೆಟ್ ಮುಖ್ಯಸ್ಥ ಏಹ್ಸಾನ್ ಮಣಿ

ಬೆನ್ ಡಂಕ್ ಗಾಯದ ಕುರಿತಂತೆ ಖಲಂದರ್ಸ್‌ ಫ್ರಾಂಚೈಸಿ ಸಿಇಒ ಸಮೀನ್ ರಾಣಾ ಪ್ರತಿಕ್ರಿಯೆ ನೀಡಿದ್ದು, ಸದ್ಯ ಬೆನ್ ಡಂಕ್‌ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜೂನ್ 09ರಂದು ಇಸ್ಲಾಮಾಬಾದ್‌ ಯನೈಟೆಡ್ ವಿರುದ್ದ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಡಂಕ್ ಲಭ್ಯವಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಕಳೆದ 5 ಆವೃತ್ತಿ ಪಿಎಸ್‌ಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಲಾಹೋರ್ ಖಲಂದರ್, ಈ ಬಾರಿ ಕರಾಚಿ ಅವತರಣಿಕೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಅದೇ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗುವ ನಿರೀಕ್ಷೆಯಲ್ಲಿದೆ.

click me!