
ಕರಾಚಿ: ಐಸಿಸಿ ಚಾಂಪಿಯನನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 'ಎ' ಗುಂಪಿನಿಂದ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರ ಜತೆಗೆ ಸತತ ಎರಡು ಪಂದ್ಯಗಳನ್ನು ಜಯಿಸಿದ ನ್ಯೂಜಿಲೆಂಡ್ ಕೂಡಾ ತಮ್ಮ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಎರಡು ತಂಡಗಳು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿವೆ. ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಗ್ರೂಪ್ ಹಂತದ ಅಂಕಪಟ್ಟಿಯ ಅಗ್ರಸ್ಥಾನಕ್ಕಾಗಿ ಮಾರ್ಚ್ 02ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ, ಭದ್ರತೆಯ ಕಾರಣದಿಂದ ಪಾಕ್ ಪ್ರವಾಸ ಮಾಡಲು ಭಾರತ ಹಿಂದೇಟು ಹಾಕಿತ್ತು. ಹೀಗಾಗಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತವು ತನ್ನ ಪಾಲಿನ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಆಡುತ್ತಿದೆ. ಇದಕ್ಕೆ ಕೆಲವು ತಂಡದ ನಾಯಕರು ಹಾಗೂ ಕೋಚ್‌ಗಳು ಅಸಮಾಧಾನ ಹೊರಹಾಕಿದ್ದಾರೆ. ಅವರ ಪ್ರಕಾರ ಟೀಂ ಇಂಡಿಯಾ ಒಂದೇ ಸ್ಟೇಡಿಯಂನಲ್ಲಿ ಆಡುವುದರಿಂದ ಆ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತಿದೆ ಎನ್ನಲಾರಂಭಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಕೋಚ್ ಆಗಿ ವಿಶ್ವ ಶ್ರೇಷ್ಠ ತಂಡ ಕಟ್ತೇನೆ: ಯುವಿ ತಂದೆ ಯೋಗರಾಜ್ ಅಚ್ಚರಿಯ ಹೇಳಿಕೆ!
ಕಮಿನ್ಸ್-ಬಟ್ಲರ್ ಅಸಮಾಧಾನ:
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಎಲ್ಲರಿಗಿಂತ ಮೊದಲು ಈ ಬಗ್ಗೆ ತುಟಿಬಿಚ್ಚಿದ್ದರು. ಭಾರತ ತಂಡವು ಒಂದೇ ಮೈದಾನದಲ್ಲಿ ಆಡುತ್ತಿರುವುದರಿಂದಾಗಿ ಅದಕ್ಕೆ ಹೆಚ್ಚಿನ ಅನುಕೂಲವಾಗುತ್ತಿದೆ. ಇದು ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಉಲ್ಟಾ ಹೊಡೆದ ಕಮಿನ್ಸ್, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು. ಇನ್ನು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಕೂಡಾ, ಟೀಂ ಇಂಡಿಯಾಗೆ ಒಂದೇ ಸ್ಟೇಡಿಯಂನಲ್ಲಿ ಆಡುತ್ತಿರುವುದರಿಂದ ಅನುಕೂಲವಾಗುತ್ತಿದೆ ಎಂದು ಹೇಳಿದ್ದರು. ಇನ್ನು ಟೂರ್ನಿಗೆ ಆತಿಥ್ಯ ವಹಿಸಿ, ಆಡಿದ ಮೊದಲೆರಡು ಪಂದ್ಯಗಳನ್ನು ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ಕೂಡಾ ಇದೀಗ ಟೀಂ ಇಂಡಿಯಾ ಮೇಲೆ ಕೆಂಡಕಾರಲಾರಂಭಿಸಿದೆ.
ಇದನ್ನೂ ಓದಿ: ಪಾಕ್ ತಂಡಕ್ಕೆ ಧೋನಿ ನಾಯಕನಾದರೂ ಸಾಧ್ಯವಿಲ್ಲ: ಸನಾ ಮೀರ್ ಕಿಡಿ
ಕ್ಯಾತೆ ತೆಗೆದ ಪಾಕ್:
ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್ ಕೋಚ್ ಆಕಿಬ್ ಜಾವೆದ್ ಇದೀಗ ಭಾರತ ತಂಡದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಬಾಂಗ್ಲಾದೇಶ ಎದುರಿನ ತಮ್ಮ ಗ್ರೂಪ್ ಹಂತದ ಕೊನೆಯ ಪಂದ್ಯಕ್ಕೂ ಮುನ್ನ ಆಕಿಬ್ ಜಾವೆದ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾರತ ಎದುರು ಕಿಡಿಕಾರಿದ್ದಾರೆ. ಭಾರತ ತಂಡವು ದುಬೈ ಮೈದಾನದಲ್ಲೇ ಎಲ್ಲಾ ಪಂದ್ಯಗಳನ್ನು ಆಡುತ್ತಿರುವುದರಿಂದ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ಭಾರತ ತಂಡವು ಒಂದೇ ಮೈದಾನದಲ್ಲಿ ಆಡುತ್ತಿದೆ, ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದೆ. ಇದೊಂದೇ ಕಾರಣಕ್ಕೆ ಭಾರತ ಎದುರು ಪಾಕಿಸ್ತಾನ ಸೋಲು ಕಂಡಿತು ಎಂದು ಹೇಳಲಾರೆ. ನಾವು ಅಲ್ಲಿ ಹೋಗುವ ಮುನ್ನ ಅವರು 10 ಮ್ಯಾಚ್ ಅಲ್ಲಿ ಆಡಿದ್ದರು ಎಂದು ಆಕಿಬ್ ಜಾವೆದ್ ಹೇಳಿದ್ದಾರೆ.
ಒಟ್ಟಿನಲ್ಲಿ ಕುಣಿಯಲಾರದವರು ನೆಲ ಡೊಂಕು ಎಂದಿದ್ದರಂತೆ ಅದೇ ಭಾರತ ಎದುರು ಚೆನ್ನಾಗಿ ಆಡದೇ ಹೀನಾಯವಾಗಿ ಸೋತ ಪಾಕಿಸ್ತಾನ ಇದೀಗ ಸೋಲಿಗೆ ಕುಂಟು ನೆವ ಹೇಳುವ ಮೂಲಕ ಮತ್ತೊಮ್ಮೆ ತನ್ನ ಬಂಡವಾಳ ಬಯಲು ಮಾಡಿಕೊಂಡಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.