
ಬೆಂಗಳೂರು(ಏ.11): ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ತಂಡವು ಮೊಹಾಲಿ ಟೆಸ್ಟ್ (Mohali Test) ಪಂದ್ಯದಲ್ಲಿ ಇನಿಂಗ್ಸ್ ಹಾಗೂ 222 ರನ್‌ಗಳ ಅಂತರದ ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಇದೀಗ ಉಭಯ ತಂಡಗಳು ಬೆಂಗಳೂರಿನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯಕ್ಕೆ ಸಜ್ಜಾಗಿವೆ. ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಪಥುಮ್ ನಿಸ್ಸಾಂಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆಂದು ವರದಿಯಾಗಿದೆ.
ಪಥುಮ್ ನಿಸ್ಸಾಂಕ (Pathum Nissanka), ಶ್ರೀಲಂಕಾ ತಂಡದ ಪರ ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಆಶಾಕಿರಣ ಎನಿಸಿದ್ದರು. ಮೊಹಾಲಿ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಿಸ್ಸಾಂಕ ಸಮಯೋಚಿತ ಅರ್ಧಶತಕ ಚಚ್ಚಿದ್ದರು. ಪಥುಮ್ ನಿಸ್ಸಾಂಕ ಮೊದಲ ಇನಿಂಗ್ಸ್‌ನಲ್ಲಿ 133 ಎಸೆತಗಳನ್ನು ಎದುರಿಸಿ ಸಮಯೋಚಿತ 61 ರನ್ ಬಾರಿಸಿ ಮಿಂಚಿದ್ದರು. ಇದರ ಹೊರತಾಗಿಯೂ ಶ್ರೀಲಂಕಾ ತಂಡವು 65 ಓವರ್‌ಗಳನ್ನಾಡಿ ಕೇವಲ 174 ರನ್‌ಗಳಿಗೆ ಸರ್ವಪತನ ಕಂಡಿತ್ತು. ಮೂರನೇ ಕ್ರಮಾಂಕದಲ್ಲಿ ಶ್ರೀಲಂಕಾ ತಂಡದ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಪಥುಮ್ ನಿಸ್ಸಾಂಕ ಅವರ ಅನುಪಸ್ಥಿತಿಯು ಲಂಕಾ ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಕುರಿತಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು (Sri Lanka Cricket Board) ತನ್ನ ಹೇಳಿಕೆಯನ್ನು ಪ್ರಕಟಿಸಿದ್ದು, 23 ವರ್ಷದ ಆಟಗಾರನಿಗೆ ಬೆನ್ನು ನೋವಿನ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ಲಂಕಾ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊದಲಿನಿಂದಲೂ ಪಥುಮ್ ನಿಸ್ಸಾಂಕ, ಹಳೆಯ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯದ ಮೇಲೆ ನಮ್ಮ ವೈದ್ಯಕೀಯ ಸಿಬ್ಬಂದಿಯು ನಿಗಾಯಿಟ್ಟಿದ್ದು, ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಕ್ರಿಕ್‌ವೈರ್‌ಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ನಿಸ್ಸಾಂಕ ಸ್ಥಾನ ತುಂಬುವ ಆಟಗಾರರು ಯಾರು..?
ಒಂದು ವೇಳೆ ಪಥುಮ್ ನಿಸ್ಸಾಂಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ, ಅವರ ಸ್ಥಾನವನ್ನು ತುಂಬಬಲ್ಲ ಆಟಗಾರರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ. ಸದ್ಯ ಲಂಕಾ ತಂಡದಲ್ಲಿ ಅನುಭವಿ ಆಟಗಾರರಾದ ದಿನೇಶ್ ಚಾಂಡಿಮಲ್ (Dinesh Chandimal) ಹಾಗೂ ಕುಸಾಲ್ ಮೆಂಡೀಸ್ (Kusal Mendis) ಈ ಇಬ್ಬರು ಬ್ಯಾಟರ್‌ಗಳ ಪೈಕಿ ಒಬ್ಬರು ಲಂಕಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ಕೆಲ ವರ್ಷಗಳಲ್ಲಿ ಗಮನಾರ್ಹ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ಒಂದು ಕಡೆದ ದಿನೇಶ್ ಚಾಂಡಿಮಲ್ ಕಳೆದ 9 ಇನಿಂಗ್ಸ್‌ಗಳಲ್ಲಿ ಒಮ್ಮೆಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಕನಿಷ್ಠ ಅರ್ಧಶತಕವನ್ನೂ ಸಹಾ ಬಾರಿಸಿಲ್ಲ. ಇನ್ನೊಂದೆಡೆ ಕುಸಾಲ್ ಮೆಂಡೀಸ್ 2021ರ ಜನವರಿಯ ಬಳಿಕ ಇದುವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಕಣಕ್ಕಿಳಿದಿಲ್ಲ.
Pink Ball Test: ಬೆಂಗಳೂರು ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ..?
ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯವು ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿರುವುದರಿಂದ, ಲಂಕಾ ಕ್ರಿಕೆಟ್ ಮಂಡಳಿಯು ಅನುಭವಿ ಆಟಗಾರ ದಿನೇಶ್ ಚಾಂಡಿಮಲ್‌ಗೆ ಮಣೆ ಹಾಕುವ ಸಾಧ್ಯತೆಯಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸಲಿದ್ದು, ಒಂದು ವೇಳೆ ಪ್ರವಾಸಿ ಲಂಕಾ ತಂಡವು ಟಾಸ್ ಗೆದ್ದರೆ, ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.