Pink Ball Test ಪಂದ್ಯಕ್ಕೆ ಮಳೆ ಅಡ್ಡಿ, ಡ್ರಾನಲ್ಲಿ ಅಂತ್ಯ

By Suvarna NewsFirst Published Oct 3, 2021, 6:36 PM IST
Highlights

* ಭಾರತ-ಆಸ್ಟ್ರೇಲಿಯಾ ನಡುವಿನ ಪಿಂಕ್‌ ಬಾಲ್ ಟೆಸ್ಟ್ ಡ್ರಾ ನಲ್ಲಿ ಅಂತ್ಯ

* ಪಿಂಕ್‌ ಬಾಲ್‌ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಭಾರತ

* ಶತಕ ಬಾರಿಸಿದ ಸ್ಮೃತಿ ಮಂಧನಾಗೆ ಒಲಿದ ಸರಣಿ ಶ್ರೇಷ್ಠ ಪ್ರಶಸ್ತಿ

ಗೋಲ್ಡ್‌ ಕೋಸ್ಟ್‌(ಅ.03): ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಏಕೈಕ ಪಿಂಕ್‌ ಬಾಲ್ ಟೆಸ್ಟ್‌ (Pink Ball Test) ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ ಆತಿಥೇಯರ ಮೇಲೆ ಬಿಗಿ ಹಿಡಿತ ಸಾಧಿಸಿತ್ತಾದರೂ, ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಡ್ರಾನಲ್ಲಿ ಅಂತ್ಯವಾಗಿದೆ. 

ಮೂರನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 143 ರನ್‌ ಗಳಿಸಿದ್ದ ಆಸ್ಟ್ರೇಲಿಯಾ 208 ರನ್‌ವರೆಗೂ ಕೇವಲ 4 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ನಾಟಕೀಯ ಕುಸಿತ ಕಂಡ ಆಸ್ಟ್ರೇಲಿಯಾ 241 ರನ್‌ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಅಚ್ಚರಿ ಎನ್ನುವಂತೆ ಮೆಗ್‌ ಲ್ಯಾನಿಂಗ್ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡರು.

Player of the Match is and she speaks about the experience of playing Test cricket under lights and her knock. pic.twitter.com/F6FLoYBp4O

— BCCI Women (@BCCIWomen)

ಮೊದಲ ಇನಿಂಗ್ಸ್‌ನಲ್ಲಿ 377 ರನ್‌ ಬಾರಿಸಿದ್ದ ಮಿಥಾಲಿ ರಾಜ್ (Mithali Raj) ಪಡೆ, ಎರಡನೇ ಇನಿಂಗ್ಸ್‌ನಲ್ಲಿ ಶೆಫಾಲಿ ವರ್ಮಾ ಬಾರಿಸಿದ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 135/3 ರನ್‌ ಬಾರಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಶೆಫಾಲಿ ವರ್ಮಾ 52 ರನ್‌ ಬಾರಿಸಿದರೆ, ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸ್ಮೃತಿ ಮಂಧನಾ 31 ಹಾಗೂ ಪೂನಂ ರಾವತ್ ಅಜೇಯ 41 ರನ್‌ ಬಾರಿಸಿದರು.

Pink Ball Test: ಜೂಲನ್-ಪೂಜಾ ಮಿಂಚು, ರೋಚಕ ಘಟ್ಟದತ್ತ ಟೆಸ್ಟ್

ಇನ್ನು ಪಿಂಕ್ ಬಾಲ್‌ ಟೆಸ್ಟ್ ಗೆಲ್ಲಲು 32 ಓವರ್‌ಗಳಲ್ಲಿ ಆಸ್ಟ್ರೇಲಿಯಾಗೆ 272 ರನ್‌ಗಳ ಕಠಿಣ ಗುರಿ ನೀಡಲಾಯಿತು. ಈ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 10 ಓವರ್‌ಗಳಾಗುವಷ್ಟರಲ್ಲೇ ಆರಂಭಿಕ ಬ್ಯಾಟರ್‌ಗಳಾದ ಎಲಿಸಾ ಹೀಲಿ(6) ಹಾಗೂ ಬೆತ್ ಮೂನಿ(11) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೂಲನ್ ಗೋಸ್ವಾಮಿ ಹಾಗೂ ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಪಡೆದರು. 15ನೇ ಓವರ್‌ ಮುಕ್ತಾಯದ ವೇಳೆಗೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ನಂತರ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಸ್ಮೃತಿ ಮಂಧನಾ (Smriti Mandhana) (127) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಬಾರಿಗೆ ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯವನ್ನಾಡಿ ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ಮಹಿಳಾ ತಂಡವು ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. 

ಸಂಕ್ಷಿಪ್ತ ಸ್ಕೋರ್:

ಭಾರತ: 377/8 ಡಿ & 135/3 ಡಿ
ಆಸ್ಟ್ರೇಲಿಯಾ: 241/9 ಡಿ & 36/2

click me!