
ಶಾರ್ಜಾ(ಅ.03): ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ವಿಕೆಟ್ ಕಳೆದುಕೊಂಡು ರನ್ 164 ಬಾರಿಸಿದ್ದು, ಪಂಜಾಬ್‌ಗೆ ಕಠಿಣ ಗುರಿ ನೀಡಿದೆ. 164 ರನ್ ಯುಎಇ ಚರಣದಲ್ಲಿ ಈ ಬಾರಿ ಶಾರ್ಜಾ ಮೈದಾನದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎನಿಸಿದೆ
ಹೌದು, ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರ್‌ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಪವರ್ ಪ್ಲೇ ನಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ 6 ಓವರ್‌ನಲ್ಲಿ ಆರ್‌ಸಿವಿ ವಿಕೆಟ್ ನಷ್ಟವಿಲ್ಲದೇ 55 ರನ್ ಕಲೆಹಾಕಿತು. ಇದಾದ ಬಳಿಕ ರವಿ ಬಿಷ್ಣೋಯಿ ಹಾಗೂ ಹರ್ಪ್ರೀತ್ ಬ್ರಾರ್ ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು. 10ನೇ ಓವರ್‌ನಲ್ಲಿ ದಾಳಿಗಿಳಿದ ಹೆನ್ರಿಕೇಸ್ ಪಂಜಾಬ್ ತಂಡಕ್ಕೆ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮರು ಎಸೆತದಲ್ಲೇ ಹೆನ್ರಿಕೇಸ್ ಆಲ್ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿಗೆ ಡಬಲ್ ಶಾಕ್ ನೀಡಿದರು. ಇನ್ನು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ದೇವದತ್ ಪಡಿಕ್ಕಲ್ 38 ಎಸೆತಗಳಲ್ಲಿ 40 ರನ್ ಬಾರಿಸಿ ಹೆನ್ರಿಕೇಸ್‌ಗೆ ಮೂರನೇ ಬಲಿಯಾದರು.
ಮತ್ತೊಂದು ಅರ್ಧಶತಕ ಬಾರಿಸಿದ ಮ್ಯಾಕ್ಸ್‌ವೆಲ್: ಸತತ 2 ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್‌ಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಂದು ಆರ್ಕಷಕ ಇನಿಂಗ್ಸ್ ಆಡುವ ಮೂಲಕ ಆರ್‌ಸಿಬಿ ತಂಡಕ್ಕೆ ಆಸರೆಯಾದರು. ಮ್ಯಾಕ್ಸ್‌ವೆಲ್ 33 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನೊಂದಿಗೆ 57 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು ಮ್ಯಾಕ್ಸ್‌ವೆಲ್‌ಗೆ ಉತ್ತಮ ಸಾಥ್ ನೀಡಿದ್ದ ಎಬಿ ಡಿವಿಲಿಯರ್ಸ್ 18 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 23 ರನ್ ಬಾರಿಸಿದರಾದರೂ ಇಲ್ಲದ ರನ್ ಕದಿಯಲು ಹೋಗಿ ಮಹತ್ವದ ಸಂದರ್ಭದಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಕೊನೆಯ ಓವರ್‌ನಲ್ಲಿ ಶಮಿ 3 ವಿಕೆಟ್ ಕಬಳಿಸಿ ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಪಂಜಾಬ್ ಕಿಂಗ್ಸ್ ತಂಡದ ಪರ ಹೆನ್ರಿಕೇಸ್ ಹಾಗೂ ಮೊಹಮ್ಮದ್ ಶಮಿ ತಲಾ 3 ವಿಕೆಟ್ ಪಡೆದರು. ಉಳಿದ್ಯಾವ ಪಂಜಾಬ್ ಬೌಲರ್‌ಗಳು ವಿಕೆಟ್ ಕಬಳಿಸಲು ಯಶಸ್ವಿಯಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.