
ಕೋಲ್ಕತಾ: ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಭಾರತ ಸೆಮಿಫೈನಲ್ ತಲುಪಿದ್ದೇ ತಡ, ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಆಮಿರ್ ಹೊಸ ಕ್ಯಾತೆಯೊಂದನ್ನು ತೆಗೆದಿದ್ದಾರೆ. ಪಂದ್ಯದಲ್ಲಿ ಶಿಮ್ರಾನ್ ಹೆಟ್ಮೇಯರ್ ಔಟಾದ ರೀತಿ ಅನುಮಾನಾಸ್ಪದವಾಗಿದೆ ಮತ್ತು ಅವರು ಔಟಾಗದೇ ಇದ್ದಿದ್ದರೆ ಭಾರತ ವಿಶ್ವಕಪ್‌ನಿಂದಲೇ ಹೊರಬೀಳುತ್ತಿತ್ತು ಅನ್ನೋದು ಆಮಿರ್ ಅವರ ವಿಚಿತ್ರ ವಾದ.
ಪಾಕಿಸ್ತಾನದ ಟಿವಿ ಚಾನೆಲ್ ಒಂದರ ಚರ್ಚೆಯಲ್ಲಿ ಆಮಿರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ 27 ರನ್ ಸಿಡಿಸಿ ಅಬ್ಬರಿಸುತ್ತಿದ್ದ ಹೆಟ್ಮೇಯರ್, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್‌ಗೆ ಔಟಾಗಿದ್ದರು. ಇದೇ ವಿಚಾರ ಆಮಿರ್‌ಗೆ ಸಿಟ್ಟು ತರಿಸಿದೆ. ಬುಮ್ರಾ ಎಸೆದ ಚೆಂಡು ಹೆಟ್ಮೇಯರ್ ಬ್ಯಾಟ್‌ನ ಅಂಚಿಗೆ ತಾಗಿ ಸಂಜು ಕೈ ಸೇರಿತ್ತು. ಅಂಪೈರ್ ಔಟ್ ಎಂದು ತೀರ್ಪು ನೀಡಿದರೂ, ಹೆಟ್ಮೆಯರ್ ರಿವ್ಯೂ ತೆಗೆದುಕೊಂಡರು. ಆದರೆ, ಅಲ್ಟ್ರಾ ಎಡ್ಜ್‌ನಲ್ಲಿ ಚೆಂಡು ಬ್ಯಾಟ್‌ಗೆ ತಾಗಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೀಗಾಗಿ, ಥರ್ಡ್ ಅಂಪೈರ್ ಕೂಡಾ ಔಟ್ ಅಂತಾನೇ ತೀರ್ಪು ಕೊಟ್ಟರು.
ಆದರೆ, ಹೆಟ್ಮೆಯರ್ ಔಟಾಗಿಲ್ಲ ಎಂದು ಆಮಿರ್ ವಾದಿಸಿದ್ದಾರೆ. "ಹೆಟ್ಮೇಯರ್ ವಿಕೆಟ್ ಅನುಮಾನಾಸ್ಪದವಾಗಿದೆ. ನನ್ನ ಪ್ರಕಾರ ಅದು ಔಟ್ ಅಲ್ಲ. ಹೆಟ್ಮೇಯರ್ ಇನ್ನೊಂದಿಷ್ಟು ಹೊತ್ತು ಕ್ರೀಸ್‌ನಲ್ಲಿದ್ದಿದ್ದರೆ, ವೆಸ್ಟ್ ಇಂಡೀಸ್ ಸ್ಕೋರ್ 220-230 ರನ್ ತಲುಪುತ್ತಿತ್ತು. ಹಾಗಾಗಿದ್ದಿದ್ದರೆ, ಭಾರತ ಇಂದು ವಿಶ್ವಕಪ್‌ನಿಂದ ಹೊರಬೀಳುತ್ತಿತ್ತು," ಎಂದು ಆಮಿರ್ ಹೇಳಿದ್ದಾರೆ.
ಭಾರತ ಸೆಮಿಫೈನಲ್ ತಲುಪಿರಬಹುದು, ಆದರೆ ಕಪ್ ಗೆಲ್ಲೋದು ಡೌಟ್ ಅಂತಾನೂ ಆಮಿರ್ ಭವಿಷ್ಯ ನುಡಿದಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಭಾರತ ಉತ್ತಮ ಕ್ರಿಕೆಟ್ ಆಡುತ್ತಿಲ್ಲ. ಅವರು ಮೂರ್ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ದೊಡ್ಡ ತಂಡಗಳ ವಿರುದ್ಧ ಉತ್ತಮವಾಗಿ ಆಡುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ವರುಣ್ ಚಕ್ರವರ್ತಿ ಕೂಡ ದುಬಾರಿಯಾದರು. ಮುಂದಿನ ಪಂದ್ಯಗಳಲ್ಲಿ ಎದುರಾಗುವ ತಂಡಗಳು ವಿಂಡೀಸ್‌ಗಿಂತ ಸ್ಪಿನ್ ಅನ್ನು ಚೆನ್ನಾಗಿ ಆಡುತ್ತವೆ," ಎಂದು ಆಮಿರ್ ವ್ಯಂಗ್ಯವಾಡಿದ್ದಾರೆ.
ಟೂರ್ನಿ ಶುರುವಾಗೋಕೂ ಮೊದಲೇ, ಭಾರತ ಸೆಮಿಫೈನಲ್ ತಲುಪಲ್ಲ ಅಂತಾ ಆಮಿರ್ ಭವಿಷ್ಯ ನುಡಿದಿದ್ದರು. ತಮ್ಮ ಭವಿಷ್ಯ ಸುಳ್ಳಾಗಿದ್ದಕ್ಕೇ ಆಮಿರ್ ಈ ರೀತಿ ಅಸಂಬದ್ಧವಾಗಿ ಮಾತಾಡುತ್ತಿದ್ದಾರೆ ಎಂದು ಭಾರತೀಯ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಅಲ್ಟ್ರಾ ಎಡ್ಜ್‌ನಲ್ಲಿ ಕ್ಲಿಯರ್ ಆಗಿ ಕಂಡಿದ್ದ ಔಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಆಮಿರ್, ಈಗ ತಾವೇ ನಗೆಪಾಟಲಿಗೀಡಾಗಿದ್ದಾರೆ ಅಂತಾ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಜಯಿಸುವ ಮೂಲಕ ಅಗ್ರಸ್ಥಾನಿಯಾಗಿ ಸೂಪರ್-8 ಹಂತ ಪ್ರವೇಶಿಸಿದ್ದ ಟೀಂ ಇಂಡಿಯಾ, ಆ ಬಳಿಕ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಆಘಾತಕಾರಿ ಸೋಲು ಕಂಡಿತ್ತು. ಹೀಗಾಗಿ ಸೂಪರ್-8 ಹಂತದಲ್ಲಿ ಇನ್ನೆರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಜಿಂಬಾಬ್ವೆ ಎದುರು ಗೆದ್ದು ಸೆಮೀಸ್ ಕನಸನ್ನು ಜೀವಂತವಾಗಿಟ್ಟುಕೊಂಡಿದ್ದ ಭಾರತ ತಂಡವು, ಕೊನೆಗೆ ವೆಸ್ಟ್ ಇಂಡೀಸ್ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿತ್ತು. ವಿಂಡೀಸ್ ನೀಡಿದ್ದ 196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಘಾತದ ಹೊರತಾಗಿಯೂ, ಸಂಜು ಸ್ಯಾಮ್ಸನ್ ಬಾರಿಸಿದ ಅಜೇಯ 97 ರನ್‌ಗಳ ನೆರವಿನಿಂದ ಇನ್ನೂ 4 ಎಸೆತ ಬಾಕಿ ಇರುವಂತೆಯೇ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಇದೀಗ ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುತ್ತಿರುವುದು ಇದು ಸತತ ಮೂರನೇ ಬಾರಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.