ಏಷ್ಯಾಕಪ್‌: ಹೆಚ್ಚುವರಿ ಹಣ ನೀಡುವಂತೆ ಪಟ್ಟುಹಿಡಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್

By Naveen KodaseFirst Published Nov 29, 2023, 7:27 AM IST
Highlights

ಏಷ್ಯಾಕಪ್‌ ಏಕದಿನ ಟೂರ್ನಿಯನ್ನು ಎಸಿಸಿ ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸಿದ್ದು, ಬಹುತೇಕ ಪಂದ್ಯಗಳನ್ನು ಪಾಕ್‌ನಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಿತ್ತು. ಹೀಗಾಗಿ ಪಾಕ್‌-ಲಂಕಾ ನಡುವೆ ಬಳಸಲಾಗಿರುವ 4 ವಿಶೇಷ ವಿಮಾನಕ್ಕೆ ಖರ್ಚಾದ 2.81 ಲಕ್ಷ ಡಾಲರ್‌(ಸುಮಾರು ₹2.34 ಕೋಟಿ) ಹಾಗೂ ಹೋಟೆಲ್‌ ಕೊಠಡಿ, ಭದ್ರತಾ ವ್ಯವಸ್ಥೆಗೆ ಖರ್ಚಾದ ಮೊತ್ತವನ್ನು ಪಾವತಿಸುವಂತೆ ಎಸಿಸಿಗೆ ಪಿಸಿಬಿ ಬೇಡಿಕೆ ಇಟ್ಟಿದೆ.

ಕರಾಚಿ: ಆಗಸ್ಟ್‌-ಸೆಪ್ಟಂಬರ್‌ನಲ್ಲಿ ನಡೆದಿದ್ದ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಸಂಬಂಧಿಸಿದಂತೆ ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ) ಬಳಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಹೆಚ್ಚುವರಿ ಹಣ ನೀಡಲು ಬೇಡಿಕೆಯಿಟ್ಟಿದೆ.

ಏಷ್ಯಾಕಪ್‌ ಏಕದಿನ ಟೂರ್ನಿಯನ್ನು ಎಸಿಸಿ ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸಿದ್ದು, ಬಹುತೇಕ ಪಂದ್ಯಗಳನ್ನು ಪಾಕ್‌ನಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಿತ್ತು. ಹೀಗಾಗಿ ಪಾಕ್‌-ಲಂಕಾ ನಡುವೆ ಬಳಸಲಾಗಿರುವ 4 ವಿಶೇಷ ವಿಮಾನಕ್ಕೆ ಖರ್ಚಾದ 2.81 ಲಕ್ಷ ಡಾಲರ್‌(ಸುಮಾರು ₹2.34 ಕೋಟಿ) ಹಾಗೂ ಹೋಟೆಲ್‌ ಕೊಠಡಿ, ಭದ್ರತಾ ವ್ಯವಸ್ಥೆಗೆ ಖರ್ಚಾದ ಮೊತ್ತವನ್ನು ಪಾವತಿಸುವಂತೆ ಎಸಿಸಿಗೆ ಪಿಸಿಬಿ ಬೇಡಿಕೆ ಇಟ್ಟಿದೆ. ಆದರೆ ಹೈಬ್ರಿಡ್‌ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಪಂದ್ಯ ಆಯೋಜಿಸಲು ಪಿಸಿಬಿಯೇ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ ಮೊತ್ತ ಪಾವತಿಸದಿರಲು ಎಸಿಸಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಈ ಮೊದಲು ಪಂದ್ಯಗಳನ್ನು ಲಂಕಾಕ್ಕೆ ಸ್ಥಳಾಂತರಿಸಿದ್ದಕ್ಕಾಗಿ ಪಿಸಿಬಿಯು, ಎಸಿಸಿ ಬಳಿ 2.81 ಲಕ್ಷ ಡಾಲರ್‌(ಸುಮಾರು ₹2 ಕೋಟಿ) ಪರಿಹಾರ ನೀಡುವಂತೆ ಕೋರಿತ್ತು.

ವಿಶ್ವಕಪ್ ಫೈನಲ್‌ನಲ್ಲಿ ಕೊಹ್ಲಿ ಔಟ್ ಮಾಡಿದ್ದು ಸಾಯುವ ಕೊನೆಯ ಕ್ಷಣದವರೆಗೂ ನೆನಪಿರುತ್ತೆ: ಪ್ಯಾಟ್ ಕಮಿನ್ಸ್‌

ಭಾರತ 8ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್: 2023ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಅನಾಯಾಸವಾಗಿ ಬಗ್ಗುಬಡಿದು 8ನೇ ಬಾರಿಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು, ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಕೇವಲ 50 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಗುರಿ ಬೆನ್ನತ್ತಿದ ಟೀಂ ಇಂಡಿಯಾ ಒಂದೂ ವಿಕೆಟ್ ಕಳೆದುಕೊಳ್ಳದೇ ಕೇವಲ 6.1 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತ್ತು.

ಕೊಹ್ಲಿ ಔಟಾದಾಗ ಸ್ಟೇಡಿಯಂ ಲೈಬ್ರರಿಯಂತಿತ್ತು: ಪ್ಯಾಟ್ ಕಮಿನ್ಸ್‌!

ಸಿಡ್ನಿ: ಭಾರತ ವಿರುದ್ಧದ ವಿಶ್ವಕಪ್‌ ಫೈನಲ್‌ ಪಂದ್ಯದ ಕ್ಷಣಗಳನ್ನು ಮತ್ತೆ ಮೆಲುಕು ಹಾಕಿರುವ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌, ವಿರಾಟ್‌ ಕೊಹ್ಲಿ ಔಟಾದಾಗ ಕ್ರೀಡಾಂಗಣ ಸಂಪೂರ್ಣ ನಿಶ್ಯಬ್ಧವಾಗಿ ಗ್ರಂಥಾಲಯ ರೀತಿ ಮಾರ್ಪಟ್ಟಿತ್ತು ಎಂದಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ಪತ್ರಿಕೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕೊಹ್ಲಿ ಔಟಾದಾಗ ನಾವೆಲ್ಲಾ ಒಟ್ಟು ಸೇರಿದ್ದೆವು. ಆಗ ಕ್ರೀಡಾಂಗಣವನ್ನು ಗಮನಿಸುವಂತೆ ಸ್ಮಿತ್‌ ಸೂಚಿಸಿದರು. 1 ಲಕ್ಷದಷ್ಟು ಭಾರತೀಯರು ಸೇರಿದ್ದ ಕ್ರೀಡಾಂಗಣ ಪೂರ್ಣ ಮೌನವಾಗಿತ್ತು. ಆ ಕ್ಷಣವನ್ನು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುತ್ತೇನೆ’ ಎಂದಿದ್ದಾರೆ.

ಮ್ಯಾಕ್‌ವೆಲ್‌ ಅಬ್ಬರದ ಎದುರು 223 ರನ್‌ ಬಾರಿಸಿಯೂ ಸೋಲು ಕಂಡ ಭಾರತ

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿತ್ತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗಿಯೇ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆದರೆ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಎದುರು 6 ವಿಕೆಟ್ ಅಂತರದ ಸೋಲು ಅನುಭವಿಸುವ ಮೂಲಕ ನಿರಾಸೆ ಅನುಭವಿಸಿತು. ಕಾಂಗರೂ ಪಡೆ 6ನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.

click me!