
ಕರಾಚಿ: ಬಹುನಿರೀಕ್ಷಿತ 2025ರ ಏಷ್ಯಾಕಪ್ ಟೂರ್ನಿಗೆ ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟವಾಗಿದೆ. ಅನುಭವಿ ಕ್ರಿಕೆಟಿಗರಾದ ಬಾಬರ್ ಅಜಂ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಪಾಕ್ ತಂಡದಿಂದ ಹೊರಬಿದ್ದಿದ್ದಾರೆ. ಈ ಶಾಕ್‌ನಿಂದ ಹೊರಬರುವ ಮುನ್ನವೇ ಈ ಇಬ್ಬರು ಕ್ರಿಕೆಟಿಗರಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮತ್ತೊಂದು ಬಿಗ್ ಶಾಕ್ ನೀಡಿದೆ.
ಹೌದು, ಏಷ್ಯಾಕಪ್‌ಗೆ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 30 ಆಟಗಾರರಿಗೆ ವಾರ್ಷಿಕ ಒಪ್ಪಂದ ಘೋಷಿಸಿದೆ. ಮಾಜಿ ನಾಯಕರಾದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು 'ಎ' ದರ್ಜೆಯಿಂದ 'ಬಿ' ದರ್ಜೆಗೆ ಇಳಿಸಲಾಗಿದೆ. ಈ ಬಾರಿ ಯಾರಿಗೂ 'ಎ' ದರ್ಜೆ ಒಪ್ಪಂದ ಸಿಕ್ಕಿಲ್ಲ. ಬಾಬರ್ ಮತ್ತು ರಿಜ್ವಾನ್ ಈಗ ಟಿ20 ತಂಡದಿಂದಲೂ ಹೊರಗಿದ್ದಾರೆ.
ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಂ 2024ರ ಐಸಿಸಿ ಟಿ20 ವಿಶ್ವಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಇದಾದ ಬಳಿಕ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ಎದುರಿನ ದ್ವಿಪಕ್ಷೀಯ ಸರಣಿಯಲ್ಲಿ ನೀರಸ ಪ್ರದರ್ಶನ ತೋರಿದ್ದರು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಇಬ್ಬರು ಆಟಗಾರರಿಗೆ ಹಿಂಬಡ್ತಿ ನೀಡಲಾಗಿದೆ.
ಕಳೆದ ವರ್ಷ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 27 ಆಟಗಾರರಿಗೆ ಒಪ್ಪಂದ ನೀಡಲಾಗಿತ್ತು. ಈ ವರ್ಷ 30 ಆಟಗಾರರಿಗೆ ಪಿಸಿಬಿ ವಾರ್ಷಿಕ ಒಪ್ಪಂದ ನೀಡಿದೆ. 12 ಹೊಸಬರಿಗೆ ಒಪ್ಪಂದ ಸಿಕ್ಕಿದೆ. ಬಾಬರ್ ಮತ್ತು ರಿಜ್ವಾನ್ ಸೇರಿ 10 ಆಟಗಾರರು 'ಬಿ' ದರ್ಜೆಯಲ್ಲಿದ್ದಾರೆ. ಫಖರ್ ಜಮಾನ್, ಶಾಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ನಾಯಕ ಸಲ್ಮಾನ್ ಅಲಿ ಆಘಾ ಕೂಡ 'ಬಿ' ದರ್ಜೆಯಲ್ಲಿದ್ದಾರೆ. 'ಸಿ' ಮತ್ತು 'ಡಿ' ದರ್ಜೆಯಲ್ಲೂ ತಲಾ 10 ಆಟಗಾರರಿದ್ದಾರೆ.
ಪಾಕಿಸ್ತಾನ ಟಿ20 ತಂಡದ ನಾಯಕ ಸಲ್ಮಾನ್ ಅಲಿ ಅಘಾ ಅವರು 'ಸಿ' ಕೆಟೆಗೆರೆಯಿಂದ 'ಬಿ' ಕೆಟೆಗೆರೆಗೆ ಬಡ್ತಿ ಪಡೆದುಕೊಂಡಿದ್ದಾರೆ. ಇದರ ಜತೆಗೆ ಯುವ ಆರಂಭಿಕ ಬ್ಯಾಟರ್ ಸೈಮ್ ಆಯುಬ್ ಹಾಗೂ ವೇಗಿ ಹ್ಯಾರಿಸ್ ರೌಫ್ ಕೂಡಾ ಮುಂಬಡ್ತಿ ಪಡೆದುಕೊಂಡಿದ್ದಾರೆ. ಒಂಬತ್ತು ಆಟಗಾರರು ತಮ್ಮದೇ ಕೆಟೆಗೆರೆಯಲ್ಲಿ ಮುಂದುವರೆದಿದ್ದಾರೆ.
'ಬಿ' ದರ್ಜೆ (10 ಆಟಗಾರರು): ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ರಿಜ್ವಾನ್, ಸಯೀಮ್ ಅಯೂಬ್, ಸಲ್ಮಾನ್ ಅಲಿ ಆಘಾ, ಶಾದಾಬ್ ಖಾನ್, ಶಾಹೀನ್ ಅಫ್ರಿದಿ.
'ಸಿ' ದರ್ಜೆ (10 ಆಟಗಾರರು): ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಹಸನ್ ನವಾಜ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ನಸೀಮ್ ಶಾ, ನೋಮನ್ ಅಲಿ, ಸಾಹಿಬ್ಜಾದ ಫರ್ಹಾನ್, ಸಾಜಿದ್ ಖಾನ್, ಸೌದ್ ಶಕೀಲ್.
'ಡಿ' ದರ್ಜೆ (10 ಆಟಗಾರರು): ಅಹ್ಮದ್ ದಾನಿಯಾಲ್, ಹುಸೇನ್ ತಲತ್, ಖುರ್ರಮ್ ಶಹಜಾದ್, ಖುಷ್ದಿಲ್ ಶಾ, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ವಸೀಮ್ ಜೂನಿಯರ್, ಸಲ್ಮಾನ್ ಮಿರ್ಜಾ, ಶಾನ್ ಮಸೂದ್, ಸುಫಿಯಾನ್ ಮೊಕಿಮ್.
ಈ ವಾರ್ಷಿಕ ಒಪ್ಪಂದವು ಜುಲೈ 01, 2025ರಿಂದ ಜೂನ್ 30, 2026ರ ವರೆಗೆ ಇರಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಿಳಿಸಿದೆ. ದೇಶದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಬೋರ್ಡ್ ಕೆಲಸ ಮಾಡುತ್ತಿದೆ. ಈ ಬಾರಿಯ ರೋಸ್ಟರ್‌ನಲ್ಲಿ ಹತ್ತು ಹೊಸ ಆಟಗಾರರ ಸೇರ್ಪಡೆಯಾಗಿದೆ. ಈ ಬಾರಿಯ 'ಎ' ಕೆಟೆಗೆರೆಯಲ್ಲಿ ಯಾವೊಬ್ಬ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಯಾವ ಕೆಟೆಗೆರೆಯ ಆಟಗಾರರು ಎಷ್ಟು ಹಣ ಸಂಭಾವನೆ ಪಡೆಯಲಿದ್ದಾರೆ ಎನ್ನುವುದನ್ನು ಪಿಸಿಬಿ ಘೋಷಿಸಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.