
ಮುಂಬೈ: ಮುಂಬರುವ ಸೆಪ್ಟೆಂಬರ್ 09ರಿಂದ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಶುಭ್‌ಮನ್ ಗಿಲ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಅನುಭವಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದು, ಕರ್ನಾಟಕದ ಯಾವೊಬ್ಬ ಆಟಗಾರನಿಗೂ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶುಭ್‌ಮನ್ ಗಿಲ್ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿಯು ನಿರೀಕ್ಷೆಯಂತೆಯೇ ಉಪನಾಯಕ ಪಟ್ಟ ಕಟ್ಟಿದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಕುಮಾರ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಜಿತೇಶ್ ಕುಮಾರ್ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಒಳ್ಳೆಯ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದರು. ಇನ್ನುಳಿದಂತೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಜತೆಗೆ ಮೂರನೇ ತಜ್ಞ ವೇಗಿಯಾಗಿ ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ ಸ್ಥಾನ ಪಡೆದಿದ್ದಾರೆ. ಆದರೆ ವಾಷಿಂಗ್ಟನ್ ಸುಂದರ್ ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ.
ಕನ್ನಡಿಗರಿಗಿಲ್ಲ ಸ್ಥಾನ: ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾದ ಭಾರತ ತಂಡದಲ್ಲಿ ಕರ್ನಾಟಕದ ಯಾವೊಬ್ಬ ಆಟಗಾರ ಕೂಡಾ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ. ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಪ್ರಸಿದ್ದ್ ಕೃಷ್ಣ ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಏಕೈಕ ಆರ್‌ಸಿಬಿ ಆಟಗಾರನಿಗೆ ಸ್ಥಾನ: ಇನ್ನು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ಕೊನೆಗೂ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಸಹಜವಾಗಿಯೇ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದು, ಎರಡನೇ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಜಿತೇಶ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ.
2023ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆದಿತ್ತು. ಆಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ರೆಡಿಯಾಗಿದೆ.
2025ರ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ಏಷ್ಯಾದ 8 ಬಲಿಷ್ಠ ತಂಡಗಳು ಕಾದಾಡಲಿವೆ. 8 ತಂಡಗಳನ್ನು ತಲಾ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಓಮನ್ ಹಾಗೂ ಯುಎಇ ತಂಡಗಳು ಸ್ಥಾನ ಪಡೆದಿವೆ. ಇನ್ನು 'ಬಿ' ಗುಂಪಿನಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಕಾಂಗ್ ಹಾಗೂ ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ.
ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ತಿಲಕ್ ವರ್ಮಾ, ರಿಂಕು ಸಿಂಗ್
ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್. ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಜಿತೇಶ್ ಶರ್ಮಾ.
ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್.
ಬೌಲಿಂಗ್ ವಿಭಾಗ: ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.