ಅತ್ತ ಮ್ಯಾಚ್ ಸೋತ್ರು, ಇತ್ತ ಬೆಡ್ ರೂಂ ಜಗಳ ಬೀದಿಗೆ ಬಂತು; ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಪಾಕ್‌ ಆಟಗಾರ್ತಿಯರ ಕಿತ್ತಾಟ!

Published : Jun 24, 2026, 10:20 PM IST
Fatima sana and alia riaz

ಸಾರಾಂಶ

2026ರ ಮಹಿಳಾ ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ತಂಡ ಹೊರಬಿದ್ದ ನಂತರ, ತಂಡದೊಳಗಿನ ಆಂತರಿಕ ಜಗಳಗಳು ಬಹಿರಂಗಗೊಂಡಿವೆ. ಆಟಗಾರ್ತಿಯರ ಆಯ್ಕೆ ವಿಚಾರವಾಗಿ ನಾಯಕಿ ಫಾತಿಮಾ ಸನಾ ಮತ್ತು ಕೋಚ್ ವಹಾಬ್ ರಿಯಾಜ್ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿದೆ.

ಲಂಡನ್‌ (ಜೂ.24): ಮಹಿಳಾ ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಆಡಿದ ನಾಲ್ಕೂ ನಾಲ್ಕು ಪಂದ್ಯಗಳಲ್ಲಿ ಸತತ ಸೋಲು ಕಾಣುವ ಮೂಲಕ ಪಾಕಿಸ್ತಾನ ತಂಡ ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ತಂಡ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ, ತಂಡದ ಒಳಗಿದ್ದ ಭಿನ್ನಾಭಿಪ್ರಾಯ ಹಾಗೂ ಆಂತರಿಕ ಜಗಳಗಳು ಈಗ ಬೀದಿಗೆ ಬರಲಾರಂಭಿಸಿವೆ.

ವರದಿಗಳ ಪ್ರಕಾರ, ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಮತ್ತು ಮುಖ್ಯ ಕೋಚ್ ವಹಾಬ್ ರಿಯಾಜ್ ನಡುವೆ ಭಾರಿ ಗಲಾಟೆ ನಡೆದಿದೆ. ಪಂದ್ಯವೊಂದರ ಸೋಲಿನ ನಂತರ ನಾಯಕಿ ಫಾತಿಮಾ ಸನಾ ನೇರವಾಗಿ ಕೋಚ್ ವಹಾಬ್‌ ರಿಯಾಜ್ ವಿರುದ್ಧವೇ ಬೆರಳು ತೋರಿಸಿದ್ದಾರೆ. ಮತ್ತೊಂದೆಡೆ, ತಂಡದ ಹಿರಿಯ ಆಟಗಾರ್ತಿ ಆಲಿಯಾ ರಿಯಾಜ್ ಕೂಡ ವಿವಾದದ ಸುಳಿಗೆ ಸಿಲುಕಿದ್ದು, ಟೂರ್ನಿಯ ಅವಧಿಯಲ್ಲಿ ಗಂಡನ ಜೊತೆ ಟೀಮ್ ಹೋಟೆಲ್‌ನಲ್ಲಿ ತಂಗಿದ್ದಕ್ಕೆ ಮಾಜಿ ನಾಯಕಿ ಸನಾ ಮೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೂನ್ 23 ರಂದು ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು ಸೋಲಿಸುತ್ತಿದ್ದಂತೆ, ಈ ಎಲ್ಲಾ ವಿವಾದಗಳು ಒಂದೊಂದಾಗಿ ಹೊರಬರತೊಡಗಿವೆ.

ಕೋಚ್ ವಹಾಬ್‌ ರಿಯಾಜ್ ವಿರುದ್ಧ ತಿರುಗಿಬಿದ್ದ ಕ್ಯಾಪ್ಟನ್ ಫಾತಿಮಾ ಸನಾ!

ಮಾಧ್ಯಮ ವರದಿಗಳ ಪ್ರಕಾರ, ತಂಡದ ಮೆಂಟರ್‌ ಹಾಗೂ ಹೆಡ್ ಕೋಚ್ ಆಗಿರುವ ವಹಾಬ್ ರಿಯಾಜ್‌ ಮತ್ತು ನಾಯಕಿ ಫಾತಿಮಾ ಸನಾ ನಡುವೆ ಆಟಗಾರ್ತಿಯರ ಆಯ್ಕೆ ವಿಚಾರವಾಗಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯವಿತ್ತು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಹಿರಿಯ ಆಟಗಾರ್ತಿ ಆಲಿಯಾ ರಿಯಾಜ್‌ಗೆ ವಿಶ್ರಾಂತಿ ನೀಡಲು ನಾಯಕಿ ಫಾತಿಮಾ ಬಯಸಿದ್ದರು. ಆದರೆ ಕೋಚ್ ವಹಾಬ್ ರಿಯಾಜ್ ಮಾತ್ರ ಆಲಿಯಾ ರಿಯಾಜ್‌ನನ್ನು ತಂಡದಲ್ಲಿ ಆಡಿಸಲೇಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಬೇರೆ ದಾರಿಯಿಲ್ಲದೆ ಫಾತಿಮಾ ಸನಾ ಒಪ್ಪಬೇಕಾಯಿತು. ಆದರೆ ಆ ಪಂದ್ಯದಲ್ಲಿ ಪಾಕಿಸ್ತಾನ ಸೋಲನುಭವಿಸಿತು. ಇದರಿಂದ ಆಕ್ರೋಶಗೊಂಡ ನಾಯಕಿ ಫಾತಿಮಾ ಸನಾ, ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನೇರವಾಗಿ ಹೆಡ್ ಕೋಚ್ ವಹಾಬ್ ತಲೆಗೆ ಕಟ್ಟಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಫಾತಿಮಾ ಸನಾ, "ಇವತ್ತಿನ ಪಂದ್ಯದ ಸೋಲಿಗೆ ನಮ್ಮ ಬಳಿ ಯಾವುದೇ ನೆಪಗಳಿಲ್ಲ. ನಮ್ಮ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಈ ಕಳಪೆ ಪ್ರದರ್ಶನದ ಜವಾಬ್ದಾರಿಯನ್ನು ನಾವೇ ಹೊರಬೇಕು. ಒಂದು ತಂಡವಾಗಿ ಮತ್ತು ಹಿರಿಯ ಆಟಗಾರ್ತಿಯರು ಇಂತಹ ಪ್ರಮುಖ ಪಂದ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಆಡಬೇಕಿತ್ತು" ಎಂದು ಪರೋಕ್ಷವಾಗಿ ಆಲಿಯಾ ರಿಯಾಜ್ ವಿರುದ್ಧ ಕಿಡಿಕಾರಿದ್ದಾರೆ.

ಪ್ರ್ಯಾಕ್ಟಿಸ್ ಬಿಟ್ಟು ಗಂಡನ ಜೊತೆ ಸುತ್ತಾಟ: ಆಲಿಯಾ ರಿಯಾಜ್ ವರ್ತನೆಗೆ ಆಕ್ರೋಶ!

ಬಾಂಗ್ಲಾದೇಶ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಹಿರಿಯ ಆಟಗಾರ್ತಿ ಆಲಿಯಾ ರಿಯಾಜ್ ತನ್ನ ಪತಿ ಅಲಿ ಯೂನಿಸ್ ಜೊತೆ ಟೀಮ್ ಹೋಟೆಲ್‌ನಲ್ಲಿ ತಂಗಿದ್ದರು. ಆಟಗಾರ್ತಿಯರ ಕೊಠಡಿಯಲ್ಲಿ ಪತಿ ತಂಗಿದ್ದಕ್ಕೆ ನಾಯಕಿ ಫಾತಿಮಾ ಸನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಾಯಕಿಯ ಕಠಿಣ ಆಕ್ಷೇಪದ ನಂತರ ಅಲಿ ಯೂನಿಸ್‌ಗೆ ಹೋಟೆಲ್ ರೂಮ್ ಖಾಲಿ ಮಾಡಲು ಸೂಚಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಅಷ್ಟೇ ಅಲ್ಲದೆ, ಪಂದ್ಯಕ್ಕೂ ಮುನ್ನ ತಂಡದ ಪ್ರಮುಖ ತರಬೇತಿ (Practice Session) ಇದ್ದ ದಿನ ಆಲಿಯಾ ರಿಯಾಜ್ ತರಬೇತಿಗೆ ಬಾರದೆ ಪತಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದರು ಎನ್ನಲಾಗಿದೆ. ಇಡೀ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಲಿಯಾ ರಿಯಾಜ್ ಸಂಪೂರ್ಣವಾಗಿ ಫ್ಲಾಪ್ ಆಗಿದ್ದಾರೆ. ಆಡಿದ 4 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 35 ರನ್ ಮಾತ್ರ! ಅವರ ಸ್ಟ್ರೈಕ್ ರೇಟ್ ಕೂಡ ತೀರಾ ಕಳಪೆಯಾಗಿದ್ದು (77.77) ಪಾಕಿಸ್ತಾನ ತಂಡದ ಹೀನಾಯ ಸೋಲಿಗೆ ಪ್ರಮುಖ ಕಾರಣವಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Cup Team: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕುರಿತು ಆಯ್ಕೆಗಾರರಿಗೆ ಎಚ್ಚರಿಕೆ ರವಾನಿಸಿದ ಆರ್.ಅಶ್ವಿನ್!
Vaibhav Suryavanshi ಇಂಗ್ಲೆಂಡ್‌ಗೆ ಹೋಗ್ತಿದ್ದಂತೆ ಇಂಡಿಯಾದಲ್ಲಿ ತಮ್ಮನ ಅಬ್ಬರ; 168 ರನ್ ಬಾರಿಸಿದ ಆಶೀರ್ವಾದ್!