
ಕರಾಚಿ(ಮೇ.08): ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳಬೇಕಾದರೆ ತನ್ನ ಷರತ್ತನ್ನು ಒಪ್ಪಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಒತ್ತಾಯಿಸಿದೆ. 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಬಿಸಿಸಿಐ ಲಿಖಿತ ಭರವಸೆ ನೀಡಿದರಷ್ಟೇ ವಿಶ್ವಕಪ್ ಆಡಲು ಭಾರತಕ್ಕೆ ಆಗಮಿಸುವುದಾಗಿ ಪಿಸಿಬಿ ಅಧ್ಯಕ್ಷ ನಜಂ ಸೇಠಿ ಹೇಳಿದ್ದಾರೆ.
ಸದ್ಯ ಏಷ್ಯಾಕಪ್ ಕ್ರಿಕೆಟ್ ಆತಿಥ್ಯ ಹಕ್ಕು ಗೊಂದಲ ಇನ್ನೂ ಮುಂದುವರಿದಿದ್ದು, ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಖಚಿತಪಡಿಸಿದೆ. ಈ ನಡುವೆ ಟೂರ್ನಿಯ ಆತಿಥ್ಯ ಹಕ್ಕು ಪಾಕ್ ಕೈತಪ್ಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ ಭಾರತ 2025ರ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆಯಿಲ್ಲ. ಹೀಗಾಗಿ ನಜಂ ಸೇಠಿ ಬಿಸಿಸಿಐಗೆ ಷರತ್ತು ಹಾಕಿದ್ದಾರೆ. ತಮ್ಮ ನಿಲುವನ್ನು ಬೆಂಬಲಿಸುವಂತೆ ಸೇಠಿ ಮೇ 8ರ ಎಸಿಸಿ ಹಾಗೂ ಐಸಿಸಿ ಸಭೆಯಲ್ಲಿ ಮನವಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಕ್ತಾಯವಾದ ಬಳಿಕವಷ್ಟೇ ಬಿಸಿಸಿಐ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಲಿದೆ ಎನ್ನಲಾಗುತ್ತಿದೆ. 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮೇ 28ರಂದು ಮುಕ್ತಾಯವಾಗಲಿದೆ.
IPL 2023 ಈ ಬಾರಿ ಕಪ್ ಗೆಲ್ಲುವ ತಂಡ ಯಾವುದು? ರವಿಶಾಸ್ತ್ರಿ ಭವಿಷ್ಯ ನಿಜವಾಗುತ್ತಾ?
ಸದ್ಯ ಈಗಿರುವ ವರದಿಗಳ ಪ್ರಕಾರ, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ತೀರ್ಮಾನ ಮಾಡುತ್ತಿದೆ ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿದೆ. ಇಂಡೋ-ಪಾಕಿಸ್ತಾನ ನಡುವಿನ ಪಂದ್ಯವನ್ನು ಮೈದಾನದಲ್ಲೇ ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತಿನ ಮೂಲೆಮೂಲೆಗಳಿಂದ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರುವುದರಿಂದಾಗಿ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಲಿದ್ದು, ನಾಗ್ಪುರ, ಬೆಂಗಳೂರು, ತಿರುವನಂತಪುರಂ, ಮುಂಬೈ, ಡೆಲ್ಲಿ, ಲಖನೌ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ರಾಜ್‌ಕೋಟ್, ಇಂದೋರ್ ಹಾಗೂ ಧರ್ಮಶಾಲಾದಲ್ಲಿ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕಾಗಿ ತಂಡಗಳು ಕಾದಾಡಲಿವೆ.
ಈ ಎಲ್ಲಾ ನಗರಗಳ ಪೈಕಿ ಕೇವಲ 7 ನಗರಗಳ ಸ್ಟೇಡಿಯಂಗಳಲ್ಲಿ ಮಾತ್ರ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳನ್ನು ಆಡಲಿದೆ. ಅಹಮದಾಬಾದ್‌ನಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನಾಡುವ ಸಾಧ್ಯತೆಯಿದೆ.
ಪಾಕ್ ಬಹುತೇಕ ಪಂದ್ಯಗಳಿಗೆ ಬೆಂಗಳೂರು-ಚೆನ್ನೈ ಆತಿಥ್ಯ?:
ಹೌದು, ವರದಿಯಲ್ಲಿ ಉಲ್ಲೇಖಿಸಿರುವಂತೆ ಭದ್ರತೆಯ ಕಾರಣದಿಂದಾಗಿ ಪಾಕಿಸ್ತಾನ ತಂಡವು ಆಡಲಿರುವ ಬಹುತೇಕ ಪಂದ್ಯಗಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಚೆನ್ನೈನ ಚೆಪಾಕ್ ಸ್ಟೇಡಿಯಂ ಆತಿಥ್ಯವನ್ನು ವಹಿಸುವ ಸಾಧ್ಯತೆಯಿದೆ. ಇನ್ನು ಮತ್ತೊಂದು ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ ತಂಡವು ತನ್ನ ಪಾಲಿನ ಬಹುತೇಕ ಪಂದ್ಯಗಳನ್ನು ಕೋಲ್ಕತಾದ ಈಡನ್ ಗಾರ್ಡನ್ಸ್ ಹಾಗೂ ಅಸ್ಸಾಂನ ಗುವಾಹಟಿಯಲ್ಲಿ ಆಡುವ ಸಾಧ್ಯತೆಯಿದೆ. ಬಾಂಗ್ಲಾದೇಶದ ಅಭಿಮಾನಿಗಳಿಗೆ ಈ ಎರಡು ಸ್ಟೇಡಿಯಂ ಹತ್ತಿರದಲ್ಲಿರುವುದರಿಂದ ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.