ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!

Published : Dec 22, 2025, 06:15 PM IST
U19 Pakistan

ಸಾರಾಂಶ

ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಪಾಕಿಸ್ತಾನ 191 ರನ್‌ಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿಗಾಗಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಪಾಕ್ ಕ್ರಿಕೆಟ್ ಮಂಡಳಿಯು ಆಟಗಾರರಿಗೆ ಕೋಟ್ಯಂತರ ರೂಪಾಯಿ ಬಹುಮಾನವನ್ನು ಘೋಷಿಸಿವೆ.

ಕರಾಚಿ: ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಭಾರಿ ಬಹುಮಾನ ಘೋಷಿಸಿದ್ದಾರೆ. ಪ್ರಶಸ್ತಿ ಗೆದ್ದ ಪಾಕಿಸ್ತಾನ ತಂಡಕ್ಕೆ ನೀಡಿದ ಸ್ವಾಗತ ಸಮಾರಂಭದಲ್ಲಿ ಪ್ರಧಾನಿ, ತಂಡದ ಸದಸ್ಯರಿಗೆ ಒಂದು ಕೋಟಿ ಪಾಕಿಸ್ತಾನಿ ರೂಪಾಯಿ (ಭಾರತೀಯ ರೂಪಾಯಿಯಲ್ಲಿ ಸುಮಾರು 32 ಲಕ್ಷ) ಬಹುಮಾನ ಘೋಷಿಸಿದರು. ಪಾಕ್ ತಂಡದ ಮೆಂಟರ್ ಮತ್ತು ಮ್ಯಾನೇಜರ್ ಸರ್ಫರಾಜ್ ಅಹ್ಮದ್, ಪ್ರಧಾನಿ ಬಹುಮಾನ ಘೋಷಿಸಿದ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು.

ಭಾರತ ಎದುರು ಗೆದ್ದ ಬೀಗಿದ ಪಾಕಿಸ್ತಾನ

ಭಾನುವಾರ ಅಬುಧಾಬಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 191 ರನ್‌ಗಳಿಂದ ಸೋಲಿಸಿತು. ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಪಾಕಿಸ್ತಾನದ ಯುವ ಆಟಗಾರರ ಸಾಧನೆಯನ್ನು ಪಾಕ್ ಆಂತರಿಕ ಸಚಿವ ಮತ್ತು ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಶ್ಲಾಘಿಸಿದ್ದಾರೆ. ಪಾಕ್ ಕ್ರಿಕೆಟ್‌ಗೆ ಈ ಗೆಲುವು ಒಂದು ಮೈಲಿಗಲ್ಲು ಎಂದು ನಖ್ವಿ ಪ್ರತಿಕ್ರಿಯಿಸಿದರು. ಪ್ರಶಸ್ತಿ ಗೆದ್ದ ತಂಡದ ಸದಸ್ಯರಿಗೆ ಪಾಕ್ ಕ್ರಿಕೆಟ್ ಮಂಡಳಿ 50 ಲಕ್ಷ ಪಾಕಿಸ್ತಾನಿ ರೂಪಾಯಿ ಬಹುಮಾನ ನೀಡುವುದಾಗಿಯೂ ನಖ್ವಿ ಘೋಷಿಸಿದ್ದರು. ಸೀನಿಯರ್ ಕ್ರಿಕೆಟ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಸಾಧಿಸುತ್ತಿದ್ದರೆ, 2019ರ ನಂತರ ಜೂನಿಯರ್ ಕ್ರಿಕೆಟ್‌ನಲ್ಲಿ ಭಾರತದ ಮೇಲೆ ಪಾಕಿಸ್ತಾನವೇ ಮೇಲುಗೈ ಸಾಧಿಸಿದೆ. 2019ರ ನಂತರ ಜೂನಿಯರ್ ಮಟ್ಟದಲ್ಲಿ ಎರಡೂ ತಂಡಗಳು 11 ಬಾರಿ ಮುಖಾಮುಖಿಯಾದಾಗ, ಏಳು ಬಾರಿ ಪಾಕಿಸ್ತಾನವೇ ಗೆದ್ದಿದೆ.

ಏಷ್ಯಾಕಪ್‌ನ ಗ್ರೂಪ್ ಹಂತದಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಎಡವಿತು. 2017ರಲ್ಲಿ ಭಾರತೀಯ ಸೀನಿಯರ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋತಂತೆಯೇ ನಿನ್ನೆ ಅಂಡರ್ 19 ಏಷ್ಯಾ ಕಪ್‌ನಲ್ಲಿ ಸೋಲು ಕಂಡಿತು. ಪ್ರಶಸ್ತಿ ಗೆದ್ದು ಪಾಕಿಸ್ತಾನಕ್ಕೆ ಹಿಂತಿರುಗಿದ ತಂಡದ ಸದಸ್ಯರಿಗೆ ವಿಮಾನ ನಿಲ್ದಾಣದಲ್ಲಿ ವಿಶ್ವಕಪ್ ವಿಜೇತರಿಗೆ ಸಿಗುವಂತಹ ಸ್ವಾಗತ ದೊರೆಯಿತು.

ಹೀಗಿತ್ತು ನೋಡಿ ಅಂಡರ್ 19 ಏಷ್ಯಾಕಪ್ ಫೈನಲ್ ಮ್ಯಾಚ್

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್(172) ಸ್ಪೋಟಕ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 347 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ಭಾರತ ಸ್ಪೋಟಕ ಆರಂಭ ಪಡೆಯಿತಾದರೂ ಆ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ ಭಾರತ 156 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 191 ರನ್‌ಗಳ ಭಾರೀ ಅಂತರದ ಸೋಲು ಅನುಭವಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?
ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಯಾವ ಐಪಿಎಲ್‌ ತಂಡದ ಆಟಗಾರರು ಎಷ್ಟಿದ್ದಾರೆ? ಯಾರದ್ದು ಸಿಂಹಪಾಲು?