ಅಂಡರ್‌-19 ಏಷ್ಯಾಕಪ್‌: ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!

Naveen Kodase, Kannadaprabha News |   | Kannada Prabha
Published : Dec 22, 2025, 09:44 AM IST
Mohsin Naqvi

ಸಾರಾಂಶ

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದೆದುರು ಸೋತು ರನ್ನರ್‌-ಅಪ್‌ ಆದ ಭಾರತ ತಂಡ, ಪಾಕ್ ಸಚಿವ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರಿಂದ ಪದಕ ಸ್ವೀಕರಿಸಲು ನಿರಾಕರಿಸಿದೆ. ಈ ಹಿಂದೆ ಹಿರಿಯರ ಏಷ್ಯಾಕಪ್‌ನಲ್ಲೂ ಇದೇ ರೀತಿ ಘಟನೆ ನಡೆದಿತ್ತು.

ದುಬೈ: ಅಂಡರ್-19 ಏಷ್ಯಾಕಪ್‌ನಲ್ಲಿ ಪಾಕ್‌ ವಿರುದ್ಧ ಸೋತು ರನ್ನರ್‌-ಅಪ್‌ ಭಾರತ ತಂಡ ಪಾಕಿಸ್ತಾನ ಸಚಿವ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಅಧ್ಯಕ್ಷ ಮೊಹ್ಸಿನ್‌ ನಖ್ವಿಯಿಂದ ಪದಕ ಸ್ವೀಕರಿಸಲು ನಿರಾಕರಿಸಿದೆ. ಈ ಮೂಲಕ ಹಿರಿಯರ ಏಷ್ಯಾಕಪ್‌ನಲ್ಲಿ ನಡೆದ ಘಟನೆ ಪುನರಾವರ್ತನೆಯಾಗಿದ್ದು, ನಖ್ವಿ ಮತ್ತೆ ಮುಖಭಂಗ ಅನುಭವಿಸಿದ್ದಾರೆ.

ಭಾನುವಾರ ಫೈನಲ್‌ ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ನಖ್ವಿ ಪ್ರಶಸ್ತಿ ವಿತರಿಸಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಕ್‌ ತಂಡ ಟ್ರೋಫಿ, ಪದಕ ಸ್ವೀಕರಿಸಿತು. ಆದರೆ ಭಾರತಕ್ಕೆ ರನ್ನರ್ ಅಪ್‌ ಪದಕ ವಿತರಿಸಲು ಮುಂದಾಗ ಆಟಗಾರರು ವೇದಿಕೆ ಕಡೆಗೆ ಹೋಗದೆ ಮೈದಾನದಲ್ಲೇ ನಿಂತಿದ್ದರು. ಹೀಗಾಗಿ ಐಸಿಸಿ ಅಸೋಸಿಯೇಟ್ ಸದಸ್ಯ ದೇಶಗಳ ಅಧ್ಯಕ್ಷ ಮುಬಶ್ಶಿರ್‌ ಉಸ್ಮಾನಿ ಟೀಂ ಇಂಡಿಯಾ ಆಟಗಾರರಿಗೆ ಪದಕ ವಿತರಿಸಿದ್ದಾರೆ. ಭಾರತೀಯ ಆಟಗಾರರು ಪಾಕ್‌ನ ಇತರ ಅಧಿಕಾರಿಗಳಿಗೂ ಹಸ್ತಲಾಘವ ಮಾಡಲಿಲ್ಲ.

ಪಹಲ್ಗಾಂ ಉಗ್ರ ದಾಳಿ ಬಳಿಕ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದೆಗೆಟ್ಟಿತ್ತು. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಭಾರತ ಏಷ್ಯಾಕಪ್‌ ಗೆದ್ದ ಬಳಿಕ ನಖ್ವಿ ಕೈಯಿಂದ ಪ್ರಶಸ್ತಿ ಸ್ವೀಕರಿಸಲು ಆಟಗಾರರು ನಿರಾಕರಿಸಿದ್ದರು.

ಪಾಕ್‌ ವಿರುದ್ಧ ಸೋಲು: ಭಾರತದ ಕೈತಪ್ಪಿದ ಅಂಡರ್‌-19 ಏಷ್ಯಾಕಪ್

ದುಬೈ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ತೀವ್ರ ವೈಫಲ್ಯ ಅನುಭವಿಸಿದ ಭಾರತ ತಂಡ, 12ನೇ ಆವೃತ್ತಿಯ ಅಂಡರ್‌-19 ಏಷ್ಯಾಕಪ್‌ ಗೆಲ್ಲುವ ಕನಸು ಭಗ್ನಗೊಳಿಸಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ 191 ರನ್‌ಗಳ ಹೀನಾಯ ಸೋಲು ಎದುರಾಯಿತು. ಇದರೊಂದಿಗೆ ಭಾರತದ 9ನೇ ಟ್ರೋಫಿ ಗೆಲ್ಲುವ ಕನಸು ಕೈಗೂಡಲಿಲ್ಲ. ಪಾಕ್‌ ತಂಡ 2ನೇ ಬಾರಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ನಿರ್ಧಾರ ಭಾರತಕ್ಕೆ ಮುಳುವಾಯಿತು. ಸಮೀರ್‌ ಮಿನ್ಹಾಸ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಪಾಕ್‌ 8 ವಿಕೆಟ್‌ಗೆ ಬರೋಬ್ಬರಿ 347 ರನ್‌ ಕಲೆಹಾಕಿತು. ಆರಂಭಿಕ ಬ್ಯಾಟರ್‌ ಮಿನ್ಹಾಸ್‌ ಭಾರತದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ 113 ಎಸೆತಗಳಲ್ಲಿ 172 ರನ್‌ ಸಿಡಿಸಿದರು. ಅಹ್ಮದ್‌ ಹುಸೈನ್‌ 56 ರನ್‌ ಕೊಡುಗೆ ನೀಡಿದರು. ದೀಪೇಶ್ 3 ವಿಕೆಟ್ ಕಿತ್ತರೂ 10 ಓವರ್‌ನಲ್ಲಿ 83 ರನ್‌ ಬಿಟ್ಟುಕೊಟ್ಟು ದುಬಾರಿಯಾದರು.

ಫೈನಲ್‌ನ ಒತ್ತಡದ ನಡುವೆ ಬೃಹತ್‌ ಮೊತ್ತ ಬೆನ್ನತ್ತಲು ಕ್ರೀಸ್‌ಗಿಳಿದ ಭಾರತ ಅದರಲ್ಲಿ ಯಶಸ್ವಿಯಾಗಲಿಲ್ಲ. ಆರಂಭಿಕ 2.2 ಓವರ್‌ಗಳಲ್ಲಿ 32 ರನ್‌ ಸಿಡಿಸಿದ ತಂಡ, ಬಳಿಕ ಕುಸಿಯಿತು. ವೈಭವ್‌ ಸೂರ್ಯವಂಶಿ 10 ಎಸೆತಕ್ಕೆ 26 ರನ್‌ ಸಿಡಿಸಿ ಔಟಾದ ಬಳಿಕ ಇತರರು ಪೆವಿಲಿಯನ್‌ ಪರೇಡ್‌ ನಡೆಸಿದರು. 10 ಓವರ್‌ಗೂ ಮೊದಲೇ 5 ವಿಕೆಟ್ ನಷ್ಟಕ್ಕೊಳಗಾದ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. ನಾಯಕ ಆಯುಶ್‌ ಮ್ಹಾತ್ರೆ(2), ಆ್ಯರೊನ್‌ ಜಾರ್ಜ್‌(16), ವಿಹಾನ್‌ ಮಲ್ಹೋತ್ರ(7), ವೇದಾಂತ್‌ ತ್ರಿವೇದಿ(9) ಕೈಕೊಟ್ಟರು. ತಂಡ 26.2 ಓವರ್‌ಗಳಲ್ಲಿ 156ಕ್ಕೆ ಆಲೌಟಾಯಿತು. ಸಮೀರ್‌ ಒಬ್ಬರೇ ಸಿಡಿಸಿದ ರನ್‌ಅನ್ನೂ ಭಾರತ ಗಳಿಸಲಿಲ್ಲ.

ಸ್ಕೋರ್‌: ಪಾಕಿಸ್ತಾನ 50 ಓವರಲ್ಲಿ 347/8 (ಸಮೀರ್‌ 172, ಹುಸೈನ್‌ 56, ದೀಪೇಶ್‌ 3-83), ಭಾರತ 26.2 ಓವರ್‌ಗಳಲ್ಲಿ 156/10 (ದೀಪೇಶ್‌ 36, ವೈಭವ್‌ 26, ಅಲಿ ರಝಾ 4-42)

ಪಂದ್ಯಶ್ರೇಷ್ಠ: ಸಮೀರ್‌ । ಸರಣಿಶ್ರೇಷ್ಠ: ಸಮೀರ್‌.

ಆಟಗಾರರ ನಡುವೆ ಭಾರೀ ವಾಕ್ಸಮರ

ಫೈನಲ್‌ ಪಂದ್ಯದುದ್ದಕ್ಕೂ ಉಭಯ ತಂಡಗಳ ನಡುವೆ ವಾಕ್ಸಮರ ನಡೆಯಿತು. ಕೆಲ ಪಾಕ್‌ ಬ್ಯಾಟರ್‌ಗಳ ವಿಕೆಟ್ ಕಿತ್ತಾಗ ಭಾರತೀಯ ಆಟಗಾರರು ಕೆಣಕುವ ರೀತಿ ಸಂಭ್ರಮಿಸಿದರು. ಬಳಿಕ ಭಾರತದ ಬ್ಯಾಟಿಂಗ್‌ ವೇಳೆ ಪಾಕ್‌ ಆಟಗಾರರು ಕೂಡಾ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ವೈಭವ್‌, ಆಯುಶ್‌ ವಿಕೆಟ್‌ ಕಿತ್ತಾಗ ಅವರನ್ನು ಕೆಣಕಲು ಪಾಕ್‌ ಆಟಗಾರರು ಪ್ರಯತ್ನಿಸಿದರು. ಇದರಿಂದ ಕೆರಳಿದ ಆಯುಶ್‌, ವೈಭವ್ ಪಾಕ್‌ ಆಟಗಾರರ ಜೊತೆ ವಾಗ್ವಾದ ನಡೆಸಿದ್ದು ಕಂಡುಬಂತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಕುಸಿದು ಹೋಗಿದ್ದೆ, ನಾನ್ಯಾವತ್ತೂ ಕ್ರಿಕೆಟ್ ಆಡಬಾರದು ಅಂದುಕೊಂಡಿದ್ದೆ: ಆ ನೋವು ಇನ್ನೂ ಮರೆತಿಲ್ಲ ಎಂದ ರೋಹಿತ್ ಶರ್ಮಾ!
ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!