ಪಾಕಿಸ್ತಾನದವರಿಗೆ ಹೊಟ್ಟೆಕಿಚ್ಚು ಜಾಸ್ತಿ: ಭಾರತ ಹಾಗೂ ಪಾಕ್ ನಡುವಿನ ವ್ಯತ್ಯಾಸ ತಿಳಿಸಿದ ಶೆಹಜಾದ್..!

By Naveen KodaseFirst Published Jun 26, 2022, 4:40 PM IST
Highlights

* ತಮ್ಮ ಕ್ರಿಕೆಟ್ ಬದುಕು ಹಳ್ಳಹಿಡಿಯಲು ವಕಾರ್ ಯೂನಿಸ್ ಕಾರಣವೆಂದ ಅಹಮದ್ ಶೆಹಜಾದ್
* ಅಹಮದ್ ಶೆಹಜಾದ್ ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್
* 17ನೇ ವಯಸ್ಸಿಗೆ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದ ಶೆಹಜಾದ್

ಕರಾಚಿ(ಜೂ.26): ತಮ್ಮ ಕ್ರಿಕೆಟ್ ವೃತ್ತಿಬದುಕು ಹಾಳಾಗಲು ಪಾಕಿಸ್ತಾನದ ದಿಗ್ಗಜ ಆಟಗಾರ ವಕಾರ್ ಯೂನಿಸ್ ಅವರೇ ಕಾರಣ ಎಂದು ಪಾಕ್ ಆರಂಭಿಕ ಬ್ಯಾಟರ್‌ ಅಹಮದ್ ಶೆಹಜಾದ್ ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಹಮದ್ ಶೆಹಜಾದ್ ಬೇಸರ ಹೊರಹಾಕಿದ್ದಾರೆ. 

ಅಹಮದ್ ಶೆಹಜಾದ್ (Ahmed Shehzad) ಆರಂಭಿಕ ಕ್ರಿಕೆಟ್ ದಿನಗಳಲ್ಲಿ ಪಾಕ್‌ ಅಭಿಮಾನಿಗಳು ಅವರನ್ನು ವಿರಾಟ್ ಕೊಹ್ಲಿ (Virat Kohli) ಜತೆ ಹೋಲಿಸುತ್ತಿದ್ದರು. ವಿರಾಟ್ ಕೊಹ್ಲಿ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಧೋನಿಯಂತಹ ಆಟಗಾರ ನೆರವಾದರು ಎಂದು ಶೆಹಜಾದ್ ಅಭಿಪ್ರಾಯಪಟ್ಟಿದ್ದಾರೆ. ನಾನು ಈ ಮೊದಲೂ ಪದೇ ಪದೇ ಹೇಳಿದ್ದೇನೆ. ಕೊಹ್ಲಿ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಅವರಿಗೆ ಮಹೇಂದ್ರ ಸಿಂಗ್ ಧೋನಿಯಂತಹ (MS Dhoni) ಆಟಗಾರರು ಸಿಕ್ಕಿದರು. ಆದರೆ ದುರಾದೃಷ್ಟವಶಾತ್ ಇಲ್ಲಿನ ಜನರು ನಿಮ್ಮ ಯಶಸ್ಸಿನ ಜತೆ ನಿಲ್ಲುವುದಿಲ್ಲ. ನಮ್ಮ ಹಿರಿಯ ಆಟಗಾರರು ಹಾಗೂ ಮಾಜಿ ಆಟಗಾರರು ನಮ್ಮ ಯಶಸ್ಸನ್ನು ಸಹಿಸುವುದಿಲ್ಲ. ಇಲ್ಲಿನವರು ಹೊಟ್ಟೆಕಿಚ್ಚು ಪಡುತ್ತಾರೆ. ಇದು ಪಾಕಿಸ್ತಾನ ಕ್ರಿಕೆಟ್ ತಂಡದ ದುರಾದೃಷ್ಟವೇ ಸರಿ ಎಂದು ಅಹಮದ್ ಶೆಹಜಾದ್ ಹೇಳಿದ್ದಾರೆ. 

2016ರಲ್ಲಿ ಪಾಕಿಸ್ತಾನ ತಂಡದಿಂದ ತಾವು ಹೊರಬೀಳಲು ಪಾಕ್ ತಂಡದ ಕೋಚ್ ಆಗಿದ್ದ ವಕಾರ್ ಯೂನಿಸ್ ಕಾರಣವೆಂದು ಆರೋಪ ಮಾಡಿದ್ದಾರೆ. ಅಹಮದ್ ಶೆಹಜಾದ್‌ (Ahmed Shehzad) ಇನ್ನಷ್ಟು ವರ್ಷಗಳ ಕಾಲ ದೇಶಿ ಕ್ರಿಕೆಟ್‌ ಆಡಿ ಆ ಬಳಿಕ ರಾಷ್ಟ್ರೀಯ ತಂಡಕ್ಕೆ ಬರಲಿ ಎಂದು ವಕಾರ್ ಯೂನಿಸ್‌ (Waqar Younis), ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (Pakistan Cricket Board) ವರದಿ ಸಲ್ಲಿಸಿದ್ದರು ಎಂದು ಶೆಹಜಾದ್ ಹೇಳಿದ್ದಾರೆ.

Ind vs IRE: ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಫೈಟ್..!

ನಾನು ಅವರು ಕಳಿಸಿದ್ದ ರಿಪೋರ್ಟ್ ನೋಡಿಲ್ಲ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Pakistan Cricket Board) ಅಧಿಕಾರಿಗಳು ಈ ವಿಚಾರವನ್ನು ತಿಳಿಸಿದ್ದಾರೆ. ಆದರೆ ಇಂತಹ ವಿಚಾರವನ್ನು ಮುಖಾಮುಖಿಯಾಗಿ ಮಾತನಾಡಬೇಕು. ನಾನು ಅಂತಹ ಸವಾಲನ್ನು ಸ್ವೀಕರಿಸಲು ಸಿದ್ದನಿದ್ದೇನೆ. ಆಗಷ್ಟೇ ಯಾರದ್ದು ಸರಿ ಹಾಗೂ ಯಾರದ್ದು ತಪ್ಪು ಎನ್ನುವುದು ತಿಳಿಯುತ್ತದೆ ಎಂದು ಅಹಮದ್ ಶೆಹಜಾದ್ ತಿಳಿಸಿದ್ದಾರೆ. ನಿನಗೆ ಅವಕಾಶವಿಲ್ಲ ಎನ್ನುವ ವಕಾರ್ ಯೂನಿಸ್ ಅವರ ಮಾತುಗಳು ನನ್ನನ್ನು ಸಾಕಷ್ಟು ಘಾಸಿಗೊಳಿಸಿದವು. ನನ್ನ ವಿಚಾರವನ್ನು ಹಂಚಿಕೊಳ್ಳಲು ಅವರು ಅವಕಾಶ ನೀಡಲಿಲ್ಲ. ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದರು ಎಂದು ಅಹಮದ್ ಶೆಹಜಾದ್ ಹೇಳಿದ್ದಾರೆ.

ಅಹಮದ್ ಶೆಹಜಾದ್, 2009ರಲ್ಲಿ ತಮ್ಮ 17ನೇ ವಯಸ್ಸಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸ್ಪೋಟಕ ಬ್ಯಾಟಿಂಗ್ ಶೈಲಿಯ ಮೂಲಕ ಶೆಹಜಾದ್ ಗಮನ ಸೆಳೆದಿದ್ದರು. ಆದರೆ ಕೆಲವೇ ಕೆಲವು ವೈಫಲ್ಯಗಳಿಂದಾಗಿ ಅಹಮದ್ ಶೆಹಜಾದ್ ಪಾಕಿಸ್ತಾನ ಏಕದಿನ ಹಾಗೂ ಟೆಸ್ಟ್ ತಂಡದಿಂದ ಹೊರಬಿದ್ದರು. ಆದರೆ ಆಗಾಗ ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ಪರ ಕಾಣಿಸಿಕೊಂಡರೂ ಸಹಾ, ಅಸ್ಥಿರ ಪ್ರದರ್ಶನದಿಂದಾಗಿ ಶೆಹಜಾದ್ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ವಿಫಲರಾದರು. 2019ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದ ಅಹಮದ್ ಶೆಹಾಜಾದ್, ಇದಾದ ಬಳಿಕ ಮತ್ತೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ವಿಫಲರಾಗಿದ್ದಾರೆ. 

ಅಹಮದ್ ಶೆಹಜಾದ್ ಪಾಕಿಸ್ತಾನ ಕ್ರಿಕೆಟ್ ತಂಡದ ಪರ 13 ಟೆಸ್ಟ್, 81 ಏಕದಿನ ಹಾಗೂ 59 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 982, 2,605 ಹಾಗೂ 1,471 ರನ್ ಬಾರಿಸಿದ್ದಾರೆ. 

click me!