ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಕಣಕ್ಕೆ? ಲಂಕಾದಿಂದಲೂ ಜೋರಾಯ್ತು ಒತ್ತಡ

Kannadaprabha News   | Kannada Prabha
Published : Feb 08, 2026, 06:21 AM IST
ind vs pak

ಸಾರಾಂಶ

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ ನಿರ್ಧಾರದಿಂದ ಪಾಕಿಸ್ತಾನ ಹಿಂದೆ ಸರಿಯುವ ಸಾಧ್ಯತೆ ಇದೆ. ಐಸಿಸಿಯ ಆರ್ಥಿಕ ಎಚ್ಚರಿಕೆ ಮತ್ತು ಆತಿಥೇಯ ಶ್ರೀಲಂಕಾದ ಒತ್ತಡದಿಂದಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ನಿಲುವನ್ನು ಮರುಪರಿಶೀಲಿಸಲು ಮಾತುಕತೆ ಆರಂಭಿಸಿದೆ.

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯದ ಬಹಿಷ್ಕರಿಸಿರುವ ಪಾಕಿಸ್ತಾನ ತನ್ನ ನಿರ್ಧಾರದಿಂದ ಯೂ-ಟರ್ನ್‌ ಮಾಡುವ ಸಮಯ ಹತ್ತಿರ ಬಂದಂತೆ ಕಾಣುತ್ತಿದೆ. ಪಂದ್ಯದಲ್ಲಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ), ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಜೊತೆ ಹೊಸದಾಗಿ ಮಾತುಕತೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಬಹಿಷ್ಕಾರ ನಿರ್ಧಾರವನ್ನು ಆ ದೇಶದ ಸರ್ಕಾರ ಪ್ರಕಟಿಸಿದ ಬಳಿಕ ಪಿಸಿಬಿ ಇಕ್ಕಟ್ಟಿಗೆ ಸಿಲುಕಿತ್ತು. ತನ್ನ ನಿರ್ಧಾರದ ಬಗ್ಗೆ ಐಸಿಸಿಗೆ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಎದುರಾದಾಗ, ಪಿಸಿಬಿಯು ‘ಅನಿವಾರ್ಯ ಸಂದರ್ಭ’ ಷರತ್ತಿನಡಿ ತನ್ನ ನಿರ್ಧಾರವನ್ನು ಪರಿಗಣಿಸುವಂತೆ ಐಸಿಸಿಗೆ ತಿಳಿಸಿತ್ತು.

ಇದರಿಂದ ಕೆರಳಿದ ಐಸಿಸಿ, ಅನಿವಾರ್ಯ ಸಂದರ್ಭ ಎದುರಾಗಿದ್ದಾದರೂ ಯಾವಾಗ? ಎಂದು ಪ್ರಶ್ನಿಸಿತ್ತು. ಐಸಿಸಿಯ ನಿಯಮದ ಪ್ರಕಾರ, ಯುದ್ಧ ಅಥವಾ ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ತಂಡಗಳು ಪ್ರಯಾಣಿಸಲು ಆಗದೆ ಇದ್ದಾಗ ಅದನ್ನು ‘ಅನಿವಾರ್ಯ ಸಂದರ್ಭ’ ಎಂದು ಪರಿಗಣಿಸಲಾಗುತ್ತದೆ. ಆದರೆ, ಪಾಕ್‌ ನೀಡುತ್ತಿರುವ ವಿವರಣೆಯಲ್ಲಿ ಯಾವುದೇ ತರ್ಕವಿಲ್ಲ ಎಂದು ತಿಳಿಸಿ, ಭಾರತ ವಿರುದ್ಧದ ಪಂದ್ಯದಲ್ಲಿ ಆಡದಿದ್ದರೆ ಪಿಸಿಬಿ ಎದುರಿಸಬೇಕಾದ ಆರ್ಥಿಕ ಸಂಕಷ್ಟದ ಬಗ್ಗೆ ಮತ್ತೊಮ್ಮೆ ಎಚ್ಚರಿಸಿದೆ ಎಂದು ಗೊತ್ತಾಗಿದೆ.

ಹೀಗಾಗಿ, ಮೆತ್ತಗಾಗಿರುವ ಪಾಕ್‌ ಕ್ರಿಕೆಟ್‌ ಮಂಡಳಿ ಐಸಿಸಿ ಜೊತೆ ಮಾತುಕತೆ ಆರಂಭಿಸಿದ್ದು, ಬಹಿಷ್ಕಾರ ನಿರ್ಧಾರವನ್ನು ಸದ್ಯದಲ್ಲೇ ಹಿಂಪಡೆಯಲಿದೆ ಎನ್ನಲಾಗುತ್ತಿದೆ.

ಲಂಕಾದಿಂದ ಒತ್ತಡ:

ಈ ನಡುವೆ, ಭಾರತ ಹಾಗೂ ಪಾಕ್‌ ಪಂದ್ಯಕ್ಕೆ ಆತಿಥ್ಯ ವಹಿಸಲು ಆಯ್ಕೆಗೊಂಡಿರುವ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಸಹ ಆತಂಕಕ್ಕೆ ಸಿಲುಕಿದ್ದು, ಒಂದು ವೇಳೆ ಪಂದ್ಯ ನಡೆಯದೆ ಇದ್ದರೆ ತಾನು ಎದುರಿಸುವ ಆರ್ಥಿಕ ನಷ್ಟ, ತವರಿನ ಅಭಿಮಾನಿಗಳ ಮುಂದೆ ಆಗುವ ಮುಜುಗರದ ಬಗ್ಗೆ ಪಿಸಿಬಿಗೆ ಪತ್ರ ಬರೆದಿದೆ.

ಅಲ್ಲದೇ, ಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಶಮ್ಮಿ ಡಿ ಸಿಲ್ವಾ ಅವರು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಜೊತೆ ಖುದ್ದಾಗಿ ಮಾತನಾಡಿದ್ದು, ತಮ್ಮ ನಿಲುವನ್ನು ಬದಲಿಸುವಂತೆ ಒತ್ತಡ ಸಹ ಹೇರಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ನಖ್ವಿ, ‘ಪಾಕ್ ಸರ್ಕಾರದ ಜತೆ ಮಾತನಾಡುವೆ’ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಕ್ರೀಡಾಂಗಣ ಖಾಲಿ ಖಾಲಿ:

ಶನಿವಾರ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ-ನೆದರ್‌ಲೆಂಡ್ಸ್‌ ನಡುವಿನ ಪಂದ್ಯಕ್ಕೆ ಜನವೇ ಇರಲಿಲ್ಲ. ಉಚಿತ ಪ್ರವೇಶ ಕಲ್ಪಿಸಿದರೂ ಕ್ರೀಡಾಂಗಣ ಖಾಲಿ-ಖಾಲಿ ಆಗಿತ್ತು. ಇದರಿಂದ ಮತ್ತಷ್ಟು ಚಿಂತೆಗೀಡಾಗಿರುವ ಲಂಕಾ ಕ್ರಿಕೆಟ್‌ ಮಂಡಳಿ, ಭಾರತ ವಿರುದ್ಧ ಪಾಕಿಸ್ತಾನ ಆಡಲೇಬೇಕು ಎಂದು ಪಿಸಿಬಿ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆಗಿದ್ದೇನು?

- ಲಂಕೆಯಲ್ಲಿ ಭಾರತದ ವಿರುದ್ಧ ಫೆ.15ಕ್ಕೆ ಪಂದ್ಯ ಆಡಲ್ಲ ಎಂದಿದ್ದ ಪಾಕಿಸ್ತಾನ

- ನಷ್ಟ ತಗ್ಗಿಸಲು ಪಂದ್ಯ ಆಡುವಂತೆ ಶ್ರೀಲಂಕಾದಿಂದ ಪಾಕ್‌ ಮೇಲೆ ಒತ್ತಡ

- ಅತ್ತ ಬಹಿಷ್ಕಾರಕ್ಕೆ ಐಸಿಸಿ ಕೂಡ ಗರಂ. ಆಡದ್ದಕ್ಕೆ ನಿಖರ ಕಾರಣ ಕೇಳಿದ ಐಸಿಸಿ

- ಇದರ ಬೆನ್ನಲ್ಲೇ ಮೆತ್ತಗಾದ ಪಾಕಿಸ್ತಾನ. ಐಸಿಸಿ ಜೊತೆ ಮಾತುಕತೆ ಆರಂಭ

- ಅತ್ತ ಭಾರತ ವಿರುದ್ಧ ಆಡುವ ಬಗ್ಗೆ ಪಾಕ್‌ ಸರ್ಕಾರದ ಜತೆಗೂ ಪಿಸಿಬಿ ಚರ್ಚೆ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?
ಟಿ20 ವಿಶ್ವಕಪ್‌: ಸೂರ್ಯನ ಆರ್ಭಟಕ್ಕೆ ಮುಳುಗಿದ ಅಮೆರಿಕ! ಹಾಲಿ ಚಾಂಪಿಯನ್ ಭಾರತ ಶುಭಾರಂಭ