ಟಿ20 ವಿಶ್ವಕಪ್‌: ಸೂರ್ಯನ ಆರ್ಭಟಕ್ಕೆ ಮುಳುಗಿದ ಅಮೆರಿಕ! ಹಾಲಿ ಚಾಂಪಿಯನ್ ಭಾರತ ಶುಭಾರಂಭ

Published : Feb 07, 2026, 10:51 PM IST
Suryakumar Yadav

ಸಾರಾಂಶ

ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಅಜೇಯ 84 ರನ್‌ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಲದಿಂದ, ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿತು. 162 ರನ್‌ಗಳ ಗುರಿ ಬೆನ್ನತ್ತಿದ ಯುಎಸ್‌ಎ 132 ರನ್‌ಗಳಿಗೆ ತನ್ನ ಹೋರಾಟ ಮುಗಿಸಿತು.

ಮುಂಬೈ: ನಾಯಕ ಸೂರ್ಯಕುಮಾರ್ ಯಾದವ್ ಸ್ಪೋಟಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್‌ಎ ಎದುರು ಭಾರತ ಶುಭಾರಂಭ ಮಾಡಿದೆ. ಗೆಲ್ಲಲು 162 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಅಮೆರಿಕ ತಂಡವು 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ 29 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ 'ಎ' ಗುಂಪಿನ ಎರಡನೇ ಪಂದ್ಯದಲ್ಲಿ ಸವಾಲಿನ ಗುರಿ ಬೆನ್ನತ್ತಿದ ಯುಎಸ್‌ಎ ತಂಡಕ್ಕೆ ಮೊಹಮ್ಮದ್ ಸಿರಾಜ್ ಹಾಗೂ ಅರ್ಶದೀಪ್ ಸಿಂಗ್ ಆರಂಭದಲ್ಲೇ ಶಾಕ್ ನೀಡಿದರು. ವಿಕೆಟ್ ಕೀಪರ್ ಬ್ಯಾಟರ್ ಆಂಡ್ರಿಸ್ ಗೌಸ್(6) ಹಾಗೂ ಸಾಯಿತೇಜ ಮುಕ್ಕಾಮಲ್ಲ(2) ಅವರನ್ನು ಮೊಹಮ್ಮದ್ ಸಿರಾಜ್‌ ಬಲಿಪಡೆದರೆ, ನಾಯಕ ಮೊನಾಕ್ ಪಟೇಲ್ ಖಾತೆ ತೆರೆಯುವ ಮುನ್ನವೇ ಅರ್ಶದೀಪ್ ಸಿಂಗ್ ಬೌಲಿಂಗ್‌ನಲ್ಲಿ ಶಿವಂ ದುಬೆಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಅಮೆರಿಕ 13 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಮಿಲಿಂದ್ ಕುಮಾರ್(34), ಸಂಜಯ್ ಕೃಷ್ಣಮೂರ್ತಿ(37) ಹಾಗೂ ಶುಭಂ ರಂಜನೆ(37) ದಿಟ್ಟ ಹೋರಾಟ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

 

ಟೀಂ ಇಂಡಿಯಾ ಬೌಲರ್‌ಗಳ ಶಿಸ್ತುಬದ್ದ ದಾಳಿ:

ಇನ್ನು ಕ್ರಿಕೆಟ್ ಶಿಶುಗಳು ಎನಿಸಿಕೊಂಡಿರುವ ಯುಎಸ್‌ಎ ಎದುರು ಟೀಂ ಇಂಡಿಯಾ ಬೌಲರ್‌ಗಳು ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಗಮನ ಸೆಳೆದರು. 2024ರ ಜುಲೈ ಬಳಿಕ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರೆ, ಅರ್ಶದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಇನ್ನು ವರುಣ್ ಚಕ್ರವರ್ತಿ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ ಆರಂಭದಲ್ಲೇ ಅಭಿಷೇಕ್ ಶರ್ಮಾ(0) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಇಶಾನ್ ಕಿಶನ್(20) ಹಾಗೂ ತಿಲಕ್‌ ವರ್ಮಾ(25) ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ(0), ರಿಂಕು ಸಿಂಗ್(6) ಹಾಗೂ ಹಾರ್ದಿಕ್ ಪಾಂಡ್ಯ(5) ನಿರಾಸೆ ಮೂಡಿಸಿದರು. ಈ ವೇಳೆ ಭಾರತ 77 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.

ಮೊದಲ ಪಂದ್ಯದಲ್ಲೇ ನಾಯಕನ ಆಟವಾಡಿದ ಸೂರ್ಯಕುಮಾರ್ ಯಾದವ್:

ಇನ್ನು ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಆರಂಭದಲ್ಲಿ ಕೊಂಚ ರಕ್ಷಣಾತ್ಮಕ ಬ್ಯಾಟಿಂಗ್ ನಡೆಸಿದ ಸೂರ್ಯ ಆ ಬಳಿಕ ಮೈ ಚಳಿಬಿಟ್ಟು ಬ್ಯಾಟ್ ಬೀಸಿದರು. ಕೇವಲ 49 ಎಸೆತಗಳನ್ನು ಎದುರಿಸಿದ ಸೂರ್ಯ 10 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಅಜೇಯ 84 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Vaibhav Suryavanshi: ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ 14ರ ಪೋರ ವೈಭವ್! ಈತ ಭವಿಷ್ಯದ ಸೂಪರ್‌ ಸ್ಟಾರ್?
ಸಿಸಿಎಲ್ ಆಡಲು ಅಭಿಮಾನಿಗಳಿಗೂ ಅವಕಾಶ: 'ಕರ್ನಾಟಕ ಬುಲ್ಡೋಜರ್ಸ್' ತಂಡ ಸೇರಲು ಗಲ್ಲಿ ಕ್ರಿಕೆಟಿಗರಿಗೂ ಕಿಚ್ಚನ ಆಹ್ವಾನ!