ಸಿಸಿಎಲ್ ಆಡಲು ಅಭಿಮಾನಿಗಳಿಗೂ ಅವಕಾಶ: 'ಕರ್ನಾಟಕ ಬುಲ್ಡೋಜರ್ಸ್' ತಂಡ ಸೇರಲು ಗಲ್ಲಿ ಕ್ರಿಕೆಟಿಗರಿಗೂ ಕಿಚ್ಚನ ಆಹ್ವಾನ!

Published : Feb 07, 2026, 08:17 PM IST
Kiccha Sudeep

ಸಾರಾಂಶ

'ಕರ್ನಾಟಕ ಬುಲ್ಡೋಜರ್ಸ್' ನಾಯಕ ಕಿಚ್ಚ ಸುದೀಪ್, ಪ್ರತಿಭೆಯುಳ್ಳ ಅಭಿಮಾನಿಗಳಿಗೆ ಸಿಸಿಎಲ್ ತಂಡ ಸೇರಲು ಮುಕ್ತ ಆಹ್ವಾನ ನೀಡಿದ್ದಾರೆ. ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಎಲ್ಲಿಯೂ ಕನ್ನಡ ಧ್ವಜ ಹಾರಿಸಲು ಹಿಂಜರಿಯಬಾರದು ಎಂದು ಧೈರ್ಯ ತುಂಬಿದ್ದಾರೆ.

ಬೆಂಗಳೂರು (ಫೆ.07): ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಎಂದರೆ ಅದು ಕೇವಲ ಸಿನಿಮಾ ತಾರೆಯರಿಗೆ ಸೀಮಿತ, ಅಲ್ಲಿ ಸ್ಟಾರ್‌ಗಳಿಗೆ ಮಾತ್ರ ಮನ್ನಣೆ ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಆದರೆ, ಈ ಅಭಿಪ್ರಾಯವನ್ನು ತಳ್ಳಿಹಾಕಿರುವ 'ಕರ್ನಾಟಕ ಬುಲ್ಡೋಜರ್ಸ್' ತಂಡದ ನಾಯಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಪ್ರತಿಭೆಯಿದ್ದರೆ ಅಭಿಮಾನಿಗಳಿಗೂ ಸಿಸಿಎಲ್ ತಂಡ ಸೇರುವ ಅವಕಾಶವಿದೆ ಎಂದು ಅವರು ಮುಕ್ತ ಆಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಆಟಗಾರರು ತಮ್ಮ ಅನುಭವ ಹಂಚಿಕೊಳ್ಳುವಾಗ ಸುದೀಪ್ ಈ ಮಹತ್ವದ ಘೋಷಣೆ ಮಾಡಿದರು. 'ಸಿಸಿಎಲ್ ಎಂದರೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ. ಚೆನ್ನಾಗಿ ಕ್ರಿಕೆಟ್ ಆಡುವ ಅಭಿಮಾನಿಗಳಿಗೂ ನಮ್ಮ ತಂಡದಲ್ಲಿ ಅವಕಾಶವಿದೆ. ಯಾರಲ್ಲಿ ನಿಜವಾದ ಪ್ರತಿಭೆ ಇದೆಯೋ ಅವರು ಬಂದು ಸೇರಿಕೊಳ್ಳಬಹುದು' ಎಂದು ಹೇಳುವ ಮೂಲಕ ಕ್ರೀಡಾಸಕ್ತ ಯುವಕರಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ.

ಆರ್‌ಸಿಬಿ ಮರಳುವ ವಿಶ್ವಾಸ

ಆರ್‌ಸಿಬಿ ತಂಡವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಹಿಂದೇಟು ಹಾಕುತ್ತಿದೆ ಎಂಬ ಚರ್ಚೆಗಳ ಬಗ್ಗೆ ಮಾತನಾಡಿದ ಸುದೀಪ್, ಕೆಎಸ್‌ಸಿಎ (KSCA) ಪರ ಬ್ಯಾಟಿಂಗ್ ಮಾಡಿದರು. 'ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಒಂದು ಕ್ರಿಕೆಟ್ ದೇವಾಲಯವಿದ್ದಂತೆ (Cricket Temple). ಅಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಸಹಜ. ಹಾಗಂತ ಆರ್‌ಸಿಬಿ ಶಾಶ್ವತವಾಗಿ ದೂರ ಉಳಿಯುವುದಿಲ್ಲ. ಅವರು ಮತ್ತೆ ಇಲ್ಲಿಗೆ ವಾಪಸ್ ಬರುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧ್ವಜ ಹಾರಿಸಲು ಭಯವೇಕೆ?

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪಂದ್ಯದ ವೇಳೆ ಕನ್ನಡ ಧ್ವಜ ಹಿಡಿದಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಮೇಲೆ ಹಲ್ಲೆ ನಡೆದಿತ್ತು ಎಂಬ ಆರೋಪವಿತ್ತು. ಇದೇ ಸಂದರ್ಭದಲ್ಲಿ ಸುದೀಪ್ ಅವರು ಕನ್ನಡದ ಬಾವುಟ ಹಾರಿಸಿ ಸಂಭ್ರಮಿಸಿದ್ದರು. ಈ ಬಗ್ಗೆ ಪತ್ರಕರ್ತರು ಕೇಳಿದಾಗ, 'ನಮ್ಮ ಧ್ವಜಕ್ಕೆ ವಿಶ್ವಮಟ್ಟದ ಮನ್ನಣೆ ಇದೆ. ಬುರ್ಜ್ ಖಲೀಫಾದಂತಹ ಜಾಗತಿಕ ವೇದಿಕೆಯಲ್ಲೇ ನಮ್ಮ ಬಾವುಟ ರಾರಾಜಿಸಿದೆ. ಹಾಗಿರುವಾಗ, ಬೇರೆ ಯಾವುದೇ ಕಡೆ ನಮ್ಮ ಬಾವುಟ ಹಾರಿಸಲು ನಾವು ಹಿಂಜರಿಯುವ ಅಥವಾ ಭಯಪಡುವ ಅಗತ್ಯವಿಲ್ಲ' ಎಂದು ಸುದೀಪ್ ಅಭಿಮಾನಿಗಳಲ್ಲಿ ಧೈರ್ಯ ತುಂಬಿದರು.

ವೈರಲ್ ಆಡಿಯೋ ಮತ್ತು ಮೈಕ್ ಆಫ್ ರಹಸ್ಯ:

ಕಳೆದ ಬಾರಿ ಚೆನ್ನೈ ವಿರುದ್ಧದ ಮ್ಯಾಚ್ ಆಡುವಾಗ ಸುದೀಪ್ ಅವರು ಆಡಿದ ಕೆಲವು ಮಾತುಗಳು ವೈರಲ್ ಆಗಿದ್ದವು. ಈ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಸುದೀಪ್, 'ಆ ದಿನ ನಾನು ಸಮಾಧಾನವಾಗಿಯೇ ಇದ್ದೆ. ಮ್ಯಾಚ್ ಆಡುವ ಭರದಲ್ಲಿ ಆಡಿದ ಮಾತುಗಳು ವೈರಲ್ ಆಗಿದ್ದವು. ಅದಾದ ನಂತರದ ಮ್ಯಾಚ್‌ಗಳಲ್ಲಿ ನಾನು ಗ್ರೌಂಡ್‌ನಲ್ಲಿದ್ದ ಮೈಕ್ ಆಫ್ ಮಾಡಿಸಿದ್ದೆ. ಹಾಗಾಗಿ ನಿಮಗೆ ನಂತರ ನಾನಾಡಿದ್ದು ಕೇಳಿಸಲಿಲ್ಲ' ಎಂದು ನಗುತ್ತಲೇ ಉತ್ತರಿಸಿದರು. ತಮ್ಮ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎಲ್ಲರೂ ಅದ್ಭುತವಾಗಿ ಆಡಿದ್ದಾರೆ ಎಂದರು.

ಒಟ್ಟಾರೆಯಾಗಿ, ಮೈದಾನದಲ್ಲಿ ಬ್ಯಾಟ್ ಬೀಸುವುದಷ್ಟೇ ಅಲ್ಲದೆ, ಮಾತಿನ ಮೂಲಕವೂ ಸಿಕ್ಸರ್ ಬಾರಿಸಿದ ಕಿಚ್ಚ ಸುದೀಪ್, ಕನ್ನಡಿಗರ ಪರವಾದ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್‌: ಭಾರತ ಎದುರು ಟಾಸ್ ಗೆದ್ದ ಯುಎಸ್‌ಎ ಬೌಲಿಂಗ್ ಆಯ್ಕೆ; ಸಂಜುಗೆ ಶಾಕ್, ಡಿಎಸ್‌ಪಿ ಸಿರಾಜ್ ಡೈರೆಕ್ಟ್ ಎಂಟ್ರಿ
2026ರ ಟಿ20 ವಿಶ್ವಕಪ್ ಮತ್ತೆ ಭಾರತವೇ ಗೆಲ್ಲುತ್ತೆ ಅನ್ನೋದಕ್ಕೆ ಈ 5 ಕಾರಣಗಳು ಸಾಕು!