Pak vs NZ ಕಿವೀಸ್‌ ಸರಣಿ ರದ್ದಾಗಲು ಭಾರತ ಕಾರಣ: ಪಾಕ್‌ ಹೊಸ ಕ್ಯಾತೆ

By Suvarna NewsFirst Published Sep 23, 2021, 12:10 PM IST
Highlights

* ಕಿವೀಸ್‌ ತಂಡವು ಪಾಕ್ ಪ್ರವಾಸ ರದ್ದು ಪಡಿಸಿದ್ದಕ್ಕೆ ಭಾರತ ಕಾರಣವಂತೆ

* ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌಧರಿ ಗಂಭೀರ ಆರೋಪ

* ಕಿವೀಸ್‌ ಬೆನ್ನಲ್ಲೇ ಇಂಗ್ಲೆಂಡ್‌ ತಂಡವು ಪಾಕ್ ಪ್ರವಾಸವನ್ನು ರದ್ದು ಪಡಿಸಿದೆ

ಇಸ್ಲಾಮಾಬಾದ್(ಸೆ.23)‌: ಭದ್ರತಾ ಸಮಸ್ಯೆ ಕಾರಣ ನೀಡಿ ನ್ಯೂಜಿಲೆಂಡ್‌ ತಂಡ (New Zealand Cricket Team) ಪಾಕಿಸ್ತಾನ ವಿರುದ್ಧದ ಸರಣಿ ರದ್ದುಗೊಳಿಸಲು ಭಾರತದಿಂದ ರವಾನೆಯಾದ ಇ-ಮೇಲ್‌ ಕಾರಣ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌಧರಿ ಆರೋಪಿಸಿದ್ದಾರೆ. 

‘ಸರಣಿ ರದ್ದುಗೊಳಿಸಿದ್ದಕ್ಕೆ ನಾವು ಅವರಲ್ಲಿ ಕಾರಣ ಕೇಳಿದ್ದೇವೆ. ಆದರೆ ಸಮರ್ಪಕ ಉತ್ತರ ನೀಡಲಿಲ್ಲ. ಹಮ್ಜಾ ಅಫ್ರಿದಿ ಹೆಸರಲ್ಲಿ ಬೆದರಿಕೆಯ ಇ-ಮೇಲ್‌ ನ್ಯೂಜಿಲೆಂಡ್‌ ತಂಡಕ್ಕೆ ಹೋಗಿತ್ತು. ತನಿಖೆಯ ಬಳಿಕ ಇದು ಭಾರತದಿಂದ ರವಾನೆಯಾದ ಇ-ಮೇಲ್‌ ಎಂದು ಗೊತ್ತಾಗಿದೆ. ವಿಪಿಎನ್‌ ಬಳಸಿದ್ದರಿಂದ ಸಿಂಗಾಪೂರ್‌ನಿಂದ ರವಾನೆಯಾಗಿದೆ ಎಂದು ತೋರಿಸುತ್ತದೆ. ಆದರೆ ಇದು ಮಹಾರಾಷ್ಟ್ರದಿಂದ ನಕಲಿ ಐಡಿ ಬಳಸಿ ಸಂದೇಶ ರವಾನಿಸಲಾಗಿದೆ. ಡಿಸೆಂಬರ್‌ನಲ್ಲಿ ಪಾಕ್‌ಗೆ ಆಗಮಿಸಲಿರುವ ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಮಂಡಳಿಗೂ ಇದೇ ರೀತಿ ಸುಳ್ಳು ಇ-ಮೇಲ್‌ ಕಳುಹಿಸಲಾಗಿದೆ’ ಎಂದವರು ಆರೋಪಿಸಿದ್ದಾರೆ.

ಉಗ್ರರ ಸಲಹಿದ ಪಾಕಿಸ್ತಾನಕ್ಕೆ ತಕ್ಕ ಪಾಠ; ನ್ಯೂಜಿಲೆಂಡ್ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಪಾಕ್ ಪ್ರವಾಸ ರದ್ದು!

وفاقی وزیرِ اطلاعات و نشریات چوہدری فواد حسین کی وفاقی وزیرِ داخلہ شیخ رشید احمد کے ہمراہ اہم پریس کانفرنس۔ https://t.co/OkFo2t7DAK

— Government of Pakistan (@GovtofPakistan)

2003ರ ಬಳಿಕ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವು ಕ್ರಿಕೆಟ್ ಸರಣಿಯನ್ನಾಡಲು ಪಾಕಿಸ್ತಾನ(Pakistan)ಕ್ಕೆ ಬಂದಿಳಿದಿತ್ತು. ಪಾಕ್ ವಿರುದ್ದ ನ್ಯೂಜಿಲೆಂಡ್ ತಂಡವು 3 ಪಂದ್ಯಗಳ ಏಕದಿನ ಸರಣಿ ಬಳಿಕ 5 ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿತ್ತು. ಏಕದಿನ ಸರಣಿಯು ಸೆಪ್ಟೆಂಬರ್ 17ರಿಂದ ಆರಂಭವಾಗಬೇಕಿತ್ತು. ಆದರೆ ಪಂದ್ಯಾವಳಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಉಗ್ರರ ಬೆದರಿಕೆ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡವು ಪಂದ್ಯವನ್ನಾಡಲು ಹಿಂದೇಟು ಹಾಕಿತ್ತು. ಆಟಗಾರರು ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದರು.  

Team India ಜತೆ ಕಿವೀಸ್‌, ಇಂಗ್ಲೆಂಡ್ ಕೂಡಾ ನಮ್ಮ ವೈರಿ: ಪಾಕಿಸ್ತಾನ..!

ಶ್ರೀಲಂಕಾ ತಂಡವು 2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಉಗ್ರರು ಲಂಕಾ ಆಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯ ಬಳಿಕ ಹಲವು ಕ್ರಿಕೆಟ್‌ ಆಡುವ ರಾಷ್ಟ್ರಗಳು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿದ್ದವು. ಕಳೆದ ಎರಡು ವರ್ಷಗಳಿಂದೀಚೆಗೆ ಪರಿಸ್ಥಿತಿ ಕೊಂಚ ಸುಧಾರಿಸಿತ್ತು. ಇನ್ನು ನ್ಯೂಜಿಲೆಂಡ್ ತಂಡವು ಪಾಕ್‌ ಪ್ರವಾಸವನ್ನು ರದ್ದು ಪಡಿಸಿದ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡಾ ಪಾಕ್‌ ನೆಲದಲ್ಲಿ ಸರಣಿಯಾಡಲು ಹಿಂದೆ ಸರಿದಿದೆ. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಮುಖಭಂಗ ಅನುಭವಿಸುವಂತೆ ಮಾಡಿದೆ.
 

click me!